Russia Ukraine War: ಮರಿಯುಪೋಲ್ ಪ್ರತಿರೋಧ ಮುಕ್ತಾಯ ಎಂದ ಉಕ್ರೇನ್, ಭವಿಷ್ಯದ ಆಹಾರ ಬಿಕ್ಕಟ್ಟಿಗೆ G7 ಕಾರಣ ಎಂದ ರಷ್ಯಾ
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ದಿನದಿಂದಲೂ ಮರಿಯುಪೋಲ್ನಲ್ಲಿ ಸಂಘರ್ಷ ತೀವ್ರಗೊಂಡಿತ್ತು.
ರಷ್ಯಾ ದಿಗ್ಬಂಧನಕ್ಕೆ ಸಿಲುಕಿದ್ದ ಪ್ರಮುಖ ಬಂದರು ನಗರಿ ಮರಿಯುಪೋಲ್ನಲ್ಲಿ ತನ್ನ ಪ್ರತಿರೋಧ ಅಂತ್ಯಗೊಂಡಿದೆ ಎಂದು ಉಕ್ರೇನ್ ಘೋಷಿಸಿದೆ. ಮರಿಯುಪೋಲ್ನ ಅಝೋವ್ಸ್ಟಾಲ್ ಉಕ್ಕು ಸ್ಥಾವರದಲ್ಲಿ ಸಿಲುಕಿದ್ದ ಸುಮಾರು 260 ಹೋರಾಟಗಾರರನ್ನು ರಷ್ಯಾ ನಿಯಂತ್ರಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಗಾಯಗೊಂಡ ಸೈನಿಕರನ್ನು ರಕ್ಷಿಸುವ ಸಂಬಂಧ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಲಾಗಿದೆ ಎಂದು ಉಕ್ರೇನ್ ಆಡಳಿತ ತಿಳಿಸಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ದಿನದಿಂದಲೂ ಮರಿಯುಪೋಲ್ನಲ್ಲಿ ಸಂಘರ್ಷ ತೀವ್ರಗೊಂಡಿತ್ತು. ಈ ನಡುವೆ ರಷ್ಯಾ ಬೆದರಿಕೆಗಳಿಗೆ ಸೊಪ್ಪು ಹಾಕದ ಸ್ವೀಡನ್ ಮತ್ತು ಫಿನ್ಲೆಂಡ್ ದೇಶಗಳು ನ್ಯಾಟೊಗೆ ಸೇರುವುದಾಗಿ ಘೋಷಿಸಿವೆ. ಈ ನಿರ್ಧಾರಕ್ಕೆ ರಷ್ಯಾ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜಾಗತಿಕ ಆಹಾರ ಮತ್ತು ಮಾನವೀಯ ಬಿಕ್ಕಟ್ಟಿಗೆ ಜಿ7 ದೇಶಗಳು ಕಾರಣವಾಗುತ್ತಿವೆ ಎಂದು ಆರೋಪ ಮಾಡಿದೆ.
ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಈವರೆಗಿನ 10 ಪ್ರಮುಖ ಬೆಳವಣಿಗೆಗಳಿವು…
- ಉಕ್ರೇನ್ಗೆ ತನ್ನ ಹೀರೊಗಳನ್ನು ಗೌರವಿಸುತ್ತದೆ. ಎಲ್ಲ ಹೀರೊಗಳು ಜೀವಂತ ಮನೆಗಳಿಗೆ ಬರಬೇಕೆಂದು ಬಯಸುತ್ತದೆ. ಇದಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ತೆಗೆದುಕೊಂಡಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಮರಿಯುಪೋಲ್ನಲ್ಲಿ ನಮ್ಮ ಸೈನಿಕರು ಪ್ರಬಲ ಪ್ರತಿರೋಧ ತೋರಿದ ಕಾರಣದಿಂದಲೇ ನಮಗೆ ಸಿದ್ಧತೆ ಮಾಡಿಕೊಳ್ಳಲು, ಬೆಂಬಲ ಒಗ್ಗೂಡಿಸಿಕೊಳ್ಳಲು ಸಾಧ್ಯವಾಯಿತು ಎಂದು ಶ್ಲಾಘಿಸಿದ್ದಾರೆ.
- ಸ್ವೀಡನ್ ಮತ್ತು ಫಿನ್ಲೆಂಡ್ ದೇಶಗಳು ನ್ಯಾಟೊ ಒಕ್ಕೂಟಕ್ಕೆ ಸೇರುವ ಪ್ರಸ್ತಾವವನ್ನು ರಷ್ಯಾ ವಿರೋಧಿಸಿದೆ. ಈ ದೇಶಗಳಿಂದ ರಷ್ಯಾದ ಭದ್ರತೆ ಯಾವುದೇ ಆತಂಕವಿಲ್ಲ. ಆದರೆ ಇವರ ನಿರ್ಧಾರಕ್ಕೆ ಪ್ರತಿಕ್ರಿಯಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ರಷ್ಯಾ ಎಚ್ಚರಿಸಿದೆ.
- ತನ್ನ ವಿರುದ್ಧ ಹೇರಿರುವ ಆರ್ಥಿಕ ದಿಗ್ಬಂಧನಗಳಿಗೆ ರಷ್ಯಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಷ್ಯಾವನ್ನು ಆರ್ಥಿಕವಾಗಿ ಕುಗ್ಗಿಸಲು ಮಾಡುವ ಯಾವುದೇ ಪ್ರಯತ್ನ ವಿಶ್ವದ ಆಹಾರ ಬದ್ರತೆ ಮತ್ತು ನೆಮ್ಮದಿಯ ಮೇಲೆ ಪರಿಣಾಮ ಬೀರಲಿದೆ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಇಲಾಖೆ ಎಚ್ಚರಿಸಿದೆ.
- ವಿಶ್ವದ ಶೇ 30ರಷ್ಟು ಜನಸಂಖ್ಯೆ ಆಹಾರಕ್ಕಾಗಿ ರಷ್ಯಾ ಮತ್ತು ಉಕ್ರೇನ್ ದೇಶಗಳಲ್ಲಿ ಬೆಳೆಯುವ ಬೆಳೆಗಳನ್ನು ಅವಲಂಬಿಸಿದೆ ಎನ್ನುವುದನ್ನು ರಷ್ಯಾ ವಿರುದ್ಧ ದಿಗ್ಬಂಧನ ವಿಧಿಸುತ್ತಿರುವ ದೇಶಗಳು ಅರ್ಥ ಮಾಡಿಕೊಳ್ಳಬೇಕು ಎಂದು ರಷ್ಯಾ ಹೇಳಿದೆ. ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಗೋಧಿ ದರ ಹೆಚ್ಚಾಗುತ್ತಿದೆ.
- ಯುದ್ಧ ಆರಂಭವಾಗಿ ಮೂರು ತಿಂಗಳು ಸಮೀಪಿಸಿದರೂ ರಷ್ಯಾಕ್ಕೆ ಈವರೆಗೆ ನಿರ್ಣಾಯಕ ವಿಜಯ ಸಿಕ್ಕಿಲ್ಲ. ಪ್ರತಿದಿನ ಎನ್ನುವಂತೆ ಶೆಲ್ ದಾಳಿ ನಡೆಯುತ್ತಲೇ ಇದೆ. ಲುಹಾನ್ಸ್ಕ್ ಮತ್ತು ಡೊನೆಸ್ಕ್ ಪ್ರದೇಶಗಳಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ 20 ನಾಗರಿಕರು ಮೃತಪಟ್ಟಿದ್ದಾರೆ.
- ಉಕ್ರೇನ್ಗೆ ಭೇಟಿ ನೀಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟ ಕಾರ್ಯಕ್ರಮ ರೂಪುಗೊಂಡಿಲ್ಲ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.
- ಸಂಘರ್ಷದಲ್ಲಿ ಉಕ್ರೇನ್ ಪರವಾಗಿ ನಿಂತಿರುವ ಗ್ರೀಕ್ ದೇಶವನ್ನು ಅಮೆರಿಕ ಶ್ಲಾಘಿಸಿದೆ. ಪ್ರಜಾಪ್ರಭುತ್ವ ಕೊನೆಗೊಳಿಸಲು ಯತ್ನಿಸುವ ಶಕ್ತಿಗಳ ವಿರುದ್ಧ ವ್ಯಕ್ತವಾಗುವ ಪ್ರತಿರೋಧಕ್ಕೆ ಅಮೆರಿಕ ಬೆಂಬಲ ಇರುತ್ತದೆ ಎಂದು ಹೇಳಿದೆ.
- ಉಕ್ರೇನ್ನಲ್ಲಿ ಬೆಳೆಯುವ-ಉತ್ಪಾದನೆಯಾಗುವ ಉತ್ಪನ್ನಗಳು ಮತ್ತೆ ಜಾಗತಿಕ ಮಾರುಕಟ್ಟೆಗೆ ಬರುವಂತೆ ಮಅಡಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೇರಸ್ ಹೇಳಿದ್ದಾರೆ. ಈ ಬಗ್ಗೆ ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳ ನಡುವೆ ಚರ್ಚಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
- ರಷ್ಯಾ-ಉಕ್ರೇನ್ ಸಂಘರ್ಷ ಆರಂಭವಾದ ನಂತರ ಆಹಾರ ಧಾನ್ಯಗಳು, ಅಡುಗೆ ಎಣ್ಣೆ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ವಿಶ್ವದ 36 ದೇಶಗಳು ಆಹಾರಕ್ಕಾಗಿ ರಷ್ಯಾ ಮತ್ತು ಉಕ್ರೇನ್ ಮೇಲೆ ನೇರವಾಗಿ ಅವಲಂಬಿತವಾಗಿವೆ.
- ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ನಂತರ ಈವರೆಗೆ 60 ಲಕ್ಷ ಜನರು ದೇಶ ತೊರೆದಿದ್ದಾರೆ. 27,000 ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿದೆ.
ತಾಜಾ ಸುದ್ದಿಗೆ ಲಿಂಕ್ ಕ್ಲಿಕ್ ಮಾಡಿ
Published On - 10:45 am, Tue, 17 May 22