ರಾವಣನ ಬಳಿ ನಿಜಕ್ಕೂ ವಿಮಾನವಿತ್ತೇ? ಶ್ರೀಲಂಕಾ ಆರಂಭಿಸಿರುವ ಸಂಶೋಧನೆಗೆ ಭಾರತಕ್ಕೂ ಆಹ್ವಾನ
ಶ್ರೀಲಂಕಾದಲ್ಲಿ ಈಚಿನ ದಿನಗಳಲ್ಲಿ ರಾವಣನ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪ್ರೀತಿ ವ್ಯಕ್ತವಾಗುತ್ತಿದೆ. ರಾವನ ಹೆಸರಿನ ಉಪಗ್ರಹವನ್ನು ಶ್ರೀಲಂಕಾ ಈಚೆಗಷ್ಟೇ ಬಾಹ್ಯಾಕಾಶಕ್ಕೆ ಕಳುಹಿಸಿತ್ತು.
ಕೊಲಂಬೊ: ರಾಮಾಯಣ ಕಾಲದ ರಾವಣನ ಬಳಿಯಿದ್ದ ಪುಷ್ಪಕ ವಿಮಾನದ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ವಾಲ್ಮೀಕಿ ಮೈದುಂಬಿ ವರ್ಣಿಸಿರುವ ಪುಷ್ಪಕ ವಿಮಾನದ ವಿವರಗಳು ಸತ್ಯವೇ ಅಥವಾ ಕೇವಲ ಕಲ್ಪನೆಯೇ ಎಂಬ ಅಂಶವನ್ನು ಪರಿಶೀಲಿಸಲು ಇದೀಗ ಶ್ರೀಲಂಕಾದ ಸಂಶೋಧಕರು ಮುಂದಾಗಿದ್ದಾರೆ. ನಮ್ಮ ಪ್ರಾಚೀನ ಇತಿಹಾಸದಲ್ಲಿ ಹಾಸುಹೊಕ್ಕಾಗಿರುವ ತಂತ್ರಜ್ಞಾನದ ವಿವರಗಳನ್ನು ಖಚಿತಪಡಿಸಿಕೊಳ್ಳೋಣ. ಪೂರ್ವಜರ ಜ್ಞಾನದ ಬಗ್ಗೆ ಹೆಮ್ಮೆ ತಾಳೋಣ ಎಂದು ಶ್ರೀಲಂಕಾದ ತಜ್ಞರು ಭಾರತಕ್ಕೆ ಆಹ್ವಾನಿಸಿದ್ದಾರೆ.
ಶ್ರೀಲಂಕಾದ ರಾಜನಾಗಿದ್ದ ರಾವಣ ಕೇವಲ ಪೌರಾಣಿಕ ಪಾತ್ರವಲ್ಲ, ಆತ ಐತಿಹಾಸಿಕ ವ್ಯಕ್ತಿ ಎಂದು ನಿರೂಪಿಸಲು ಶ್ರೀಲಂಕಾದ ಸಂಶೋಧಕರು ಮುಂದಾಗಿದ್ದಾರೆ. ವಿಶ್ವದ ಮೊದಲ ಅನುಭವಿ ವೈಮಾನಿಕ ಎಂದು ಪ್ರತಿಪಾದಿಸುತ್ತಿರುವ ಅವರು, ರಾವಣನ ಆಳ್ವಿಕೆಯ ಅವಧಿಯಲ್ಲಿ ಶ್ರೀಲಂಕಾದಲ್ಲಿ ವಿಮಾನ ಸಂಚಾರವಿತ್ತು, ವಿಮಾನ ನಿಲ್ದಾಣಗಳೂ ಇದ್ದವು ಎಂದು ಪ್ರತಿಪಾದಿಸುತ್ತಿದ್ದಾರೆ.
ಎರಡು ವರ್ಷಗಳ ಹಿಂದೆಯೂ ಶ್ರೀಲಂಕಾ ಇಂಥದ್ದೇ ಪ್ರಯತ್ನವೊಂದನ್ನು ಮಾಡಿತ್ತು. ನಾಗರಿಕ ವಿಮಾನಯಾನ ಕ್ಷೇತ್ರದ ತಜ್ಞರು, ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಭೂವಿಜ್ಞಾನಿಗಳ ಸಮಾವೇಶವನ್ನು ಆಯೋಜಿಸಿ ರಾವಣನ ವೈಮಾನಿಕ ಸಾಹಸಗಳ ಬಗ್ಗೆ ಚರ್ಚಿಸಿದ್ದರು. ರಾವಣ ಜಗತ್ತಿನ ಮೊದಲ ವೈಮಾನಿಕ. ಅವನು ಶ್ರೀಲಂಕಾದಿಂದ ಭಾರತಕ್ಕೆ ವಿಮಾನದಲ್ಲಿಯೇ ಹೋಗಿದ್ದ ರಾವಣ, ಅಲ್ಲಿಂದ ಶ್ರೀಲಂಕಾಕ್ಕೆ ವಿಮಾನದಲ್ಲಿಯೇ ಹಿಂದಿರುಗಿದ್ದ ಎಂಬ ನಿರ್ಣಯಕ್ಕೆ ಬಂದಿದ್ದರು.
ಈ ಸಮಾವೇಶದ ನಂತರ ಶ್ರೀಲಂಕಾ ಸರ್ಕಾರ 50 ಲಕ್ಷ ಶ್ರೀಲಂಕನ್ ರೂಪಾಯಿ ಮೊತ್ತವನ್ನು ಈ ವಿಚಾರದ ಸಂಶೋಧನೆಗೆ ಬಿಡುಗಡೆ ಮಾಡಿತ್ತು. ಕೊವಿಡ್-19 ಲಾಕ್ಡೌನ್ ಕಾರಣದಿಂದಾಗಿ ಸಂಶೋಧನೆಗಳು ಸ್ಥಗಿತಗೊಂಡಿದ್ದವು. ಇದೀಗ ಅಧಿಕಾರಕ್ಕೆ ಬಂದಿರುವ ರಾಜಪಕ್ಸ ನೇತೃತ್ವದ ಸರ್ಕಾರವು ಈ ಸಂಶೋಧನೆಯಲ್ಲಿ ಆಸಕ್ತಿ ತೋರಿದೆ. ಈ ಯೋಜನೆಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವಾಗಿ ಶ್ರೀಲಂಕಾ ಸರ್ಕಾರ ಪರಿಗಣಿಸಿದೆ. ಮುಂದಿನ ವರ್ಷದ ಆರಂಭದಲ್ಲಿ ಸಂಶೋಧನಾ ಚಟುವಟಿಕೆಗಳು ಮತ್ತೆ ಆರಂಭವಾಗಬಹುದು ಎಂದು ಶ್ರೀಲಂಕಾ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ಧನತುಂಗೆ ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸದ ಬಗ್ಗೆ ಅತೀವ ಆಸಕ್ತಿಯಿರುವ ಶಶಿ ಈ ಹಿಂದೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸಿಇಒ ಸಹ ಆಗಿದ್ದರು. ರಾವಣ ಕೇವಲ ಪೌರಾಣಿಕ ಪಾತ್ರ ಅಲ್ಲ. ಆ ಹೆಸರಿನ ನಿಜವಾದ ರಾಜನೊಬ್ಬ ಇಲ್ಲಿ ಆಳ್ವಿಕೆ ಮಾಡಿದ್ದ. ಅವನ ಬಳಿ ವಿಮಾನ ಮತ್ತು ವಿಮಾನ ನಿಲ್ದಾಣಗಳು ಇದ್ದವು. ಪ್ರಾಚೀನ ಶ್ರೀಲಂಕನ್ನರು ಮತ್ತು ಭಾರತೀಯರು ಅತ್ಯುನ್ನತ ತಂತ್ರಜ್ಞಾನಗಳನ್ನು ಸಿದ್ಧಿಸಿಕೊಮಡಿದ್ದರು. ಈ ಅಂಶವನ್ನು ನಿರೂಪಿಸಲು ನಾವು ವಿಸ್ತೃತ ಸಂಶೋಧನೆ ನಡೆಸಬೇಕಿದೆ ಎಂದು ಅವರು ಹೇಳಿದ್ದಾರೆ.
ಶ್ರೀಲಂಕಾದ ಮುಂಚೂಣಿ ಪರಿಸರ ಹೋರಾಟಗಾರ್ತಿ ಸುನೆಲ ಜಯವರ್ಧನೆ ಸಹ ಈ ವಿಚಾರವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ‘ದಿ ಲೈನ್ ಆಫ್ ಲಂಕಾ – ಮಿಥ್ಸ್ ಅಂಡ ಮೆಮೊರೀಸ್ ಆಫ್ ಐಲೆಂಡ್’ ಹೆಸರಿನ ತಮ್ಮ ಪುಸ್ತಕದಲ್ಲಿ ರಾವಣನ ವೈಮಾನಿಕ ಸಾಹಸಗಳ ಬಗ್ಗೆ ಅಭಿಮಾನದಿಂದ ಬರೆದಿದ್ದಾರೆ. ‘ಬೆಳೆದವರ ಜಗತ್ತಿನ ರಾವಣನ ವಿಮಾನ ಕೇವಲ ಕಾಲ್ಪನಿಕ. ಅಮೆರಿಕ ರೈಟ್ ಸೋದರರು ವಿಮಾನದ ತಂತ್ರಜ್ಞಾನ ನೀಡಿದರು ಎಂದೇ ಓದಿಕೊಂಡವರು ತಿಳಿದಿದ್ದೇವೆ. ಆದರೆ ಅವರು ಈ ಸಾಹಸ ಮಾಡಲು ಮನುಷ್ಯನ ಮಿದುಳು ಶತಶತಮಾನಗಳ ಕಾಲ ಹದಗೊಂಡಿರಬೇಕಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
ಪ್ರಾಚೀನ ಪಠ್ಯಗಳಲ್ಲಿ ವಿಮಾನಗಳ ಬಗ್ಗೆ ಸಾಕಷ್ಟು ತಾಂತ್ರಿಕ ವಿವರಗಳಿವೆ. ಅವನ್ನು ಪೌರಾಣಿಕ ಎಂಬ ಹಣೆಪಟ್ಟಿ ಕಟ್ಟಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ನನ್ನ ಸಿದ್ಧಾಂತವನ್ನು ಶ್ರೀಲಂಕಾದ ಹಿರಿಯ ಪೈಲಟ್ ರೇ ವಿಜಿವರ್ಧನೆ ಸಹ ಒಪ್ಪಿಕೊಂಡಿದ್ದಾರೆ. ನೀರನ್ನು ಲ್ಯಾಂಡಿಂಗ್-ಟೇಕಾಫ್ಗೆ ಬಳಸುವ ಗ್ಲೈಡರ್ಗಳನ್ನು ಮಯೂರಂಗ ವಂಶದ ರಾಜರು (ರಾವಣನ ವಂಶ) ಹೊಂದಿದ್ದರು. ಶ್ರೀಲಂಕಾದ ಹಲವು ನಗರ-ಪ್ರದೇಶಗಳ ಹೆಸರು ವಿಮಾನ ಇಳಿಯುವ ಸ್ಥಳವನ್ನು ಸೂಚಿಸುವಂತಿವೆ ಎಂಬುದು ರೇ ವಿಜಿವರ್ಧನೆ ಅವರ ಅಭಿಪ್ರಾಯವಾಗಿತ್ತು ಎಂದು ಸುನೆಲ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಈಚಿನ ದಿನಗಳಲ್ಲಿ ರಾವಣನ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪ್ರೀತಿ ವ್ಯಕ್ತವಾಗುತ್ತಿದೆ. ರಾವನ ಹೆಸರಿನ ಉಪಗ್ರಹವನ್ನು ಶ್ರೀಲಂಕಾ ಈಚೆಗಷ್ಟೇ ಬಾಹ್ಯಾಕಾಶಕ್ಕೆ ಕಳುಹಿಸಿತ್ತು.
ಇದನ್ನೂ ಓದಿ: ವಿದೇಶೀ ವಿನಿಮಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ ಆಹಾರ ತುರ್ತುಸ್ಥಿತಿ ಘೋಷಿಸಿದ ಶ್ರೀಲಂಕಾ ಇದನ್ನೂ ಓದಿ: Rachita Ram: ನೂತನ ಗೆಟಪ್ನಲ್ಲಿ ರಚಿತಾ ರಾಮ್; ‘ಶಬರಿ ಸರ್ಚಿಂಗ್ ಫಾರ್ ರಾವಣ’ ಚಿತ್ರದ ಹೊಸ ಪೋಸ್ಟರ್ಗೆ ಫ್ಯಾನ್ಸ್ ಫಿದಾ