ಗಂಡ-ಹೆಂಡತಿ ಒಟ್ಟಿಗೆ ಮಲಗುವಂತಿಲ್ಲ, ಚುಂಬನ-ಅಪ್ಪುಗೆಯೂ ನಿಷೇಧ; ಶಾಂಘೈನಲ್ಲಿ ಕಠಿಣ ನಿರ್ಬಂಧಕ್ಕೆ ಸೋತ ಜನರು

ಅಗತ್ಯವಸ್ತುಗಳ ಪೂರೈಕೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಬಾಲ್ಕನಿಗೆ ಹೋಗಿ ಹಾಡುತ್ತ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ವಿಡಿಯೋ ಕೂಡ ವೈರಲ್ ಆಗಿದೆ.

ಗಂಡ-ಹೆಂಡತಿ ಒಟ್ಟಿಗೆ ಮಲಗುವಂತಿಲ್ಲ, ಚುಂಬನ-ಅಪ್ಪುಗೆಯೂ ನಿಷೇಧ; ಶಾಂಘೈನಲ್ಲಿ ಕಠಿಣ ನಿರ್ಬಂಧಕ್ಕೆ ಸೋತ ಜನರು
ಚೀನಾದಲ್ಲಿ ಕೊವಿಡ್​ 19 ನಿರ್ಬಂಧ ನಿಯಮಗಳನ್ನು ಘೋಷಣೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು
Updated By: Lakshmi Hegde

Updated on: Apr 07, 2022 | 5:35 PM

ಚೀನಾದ ಮಧ್ಯ ಕರಾವಳಿ ತೀರದ ಅತ್ಯಂತ ದೊಡ್ಡ ನಗರ ಶಾಂಘೈನಲ್ಲಿ ಕೊವಿಡ್​ 19 ನಿಂದ ಜನರು ಪರದಾಡುತ್ತಿದ್ದಾರೆ. ಅಲ್ಲಿ ಕಠಿಣ ಲಾಕ್​ಡೌನ್​ ಹೇರಲಾಗಿದ್ದು ಜನರು ಮನೆಬಿಟ್ಟು ಹೊರಗೆ ಕಾಲಿಡುವಂತಿಲ್ಲ. ಜೀವನ ನಡೆಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ ಶಾಂಘೈ ನಾಗರಿಕರಿಗೆ. ದಿನನಿತ್ಯ ಬೇಕಾಗುವ ಅಗತ್ಯ ವಸ್ತುಗಳ ಖರೀದಿ ಸಾಧ್ಯವಾಗುತ್ತಿಲ್ಲ, ಆಹಾರ-ಪದಾರ್ಥಗಳ ಕೊಳ್ಳಲೂ ಆಗುತ್ತಿಲ್ಲ. ಅಲ್ಲಿ ಸೂಪರ್​ ಮಾರ್ಕೆಟ್​ಗಳೆಲ್ಲ ಬಂದ್ ಆಗಿವೆ. ಶಾಂಘೈನಲ್ಲಿ ಸುಮಾರು 26 ಮಿಲಿಯನ್​ ಜನರಿದ್ದಾರೆ. ಚೀನಾದ ಉಳಿದೆಲ್ಲ ನಗರಗಳಿಗೆ ಹೋಲಿಸಿದರೆ ಇಲ್ಲಿ ನಿತ್ಯ ದಾಖಲಾಗುವ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಅತ್ಯಂತ ಹೆಚ್ಚು. ಹೀಗಾಗಿ ಸ್ಥಳೀಯ ಆಡಳಿತ ಕಠಿಣ ನಿರ್ಬಂಧಗಳನ್ನು ವಿಧಿಸಿದೆ.

ಶಾಂಘೈನಲ್ಲಿ ಉಂಟಾದ ಪರಿಸ್ಥಿತಿಯನ್ನು ತೋರಿಸುವ ಹಲವು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲಿನ ನಿವಾಸಿಗಳೇ ಅದನ್ನು ಟ್ವಿಟರ್​ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಕೊವಿಡ್​ 19 ನಿಯಂತ್ರಣ ನಿಯಮಗಳ ಪ್ರಕಟಣೆಯ ವಿಡಿಯೋವೊಂದನ್ನು ಅಲ್ಲಿನ ನಿವಾಸಿಯೊಬ್ಬರು ಪೋಸ್ಟ್ ಮಾಡಿಕೊಂಡಿದ್ದಾರೆ.  ಅದರಲ್ಲಿ ಆರೋಗ್ಯ ಕಾರ್ಯಕರ್ತೆಯೊಬ್ಬಳು, ಧ್ವನಿ ವರ್ಧಕ ಹಿಡಿದುಕೊಂಡು ವಿಚಿತ್ರ ನಿಯಮಗಳನ್ನು ಹೇಳುವುದನ್ನು ಕೇಳಬಹುದು.  ರಸ್ತೆಯ ಮೇಲೆ ಇನ್ನೂ ಒಂದಿಬ್ಬರ ಜತೆ ನಿಂತು ಪ್ರಕಟಣೆ ಹೊರಡಿಸಿದ ಮಹಿಳೆ, ಇವತ್ತು ರಾತ್ರಿಯಿಂದ ದಂಪತಿ ಒಟ್ಟಿಗೇ ಮಲಗುವಂತಿಲ್ಲ, ಪ್ರತ್ಯೇಕವಾಗಿ ಮಲಗಬೇಕು. ಚುಂಬಿಸಿಕೊಳ್ಳುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳಲೂ ಅವಕಾಶವಿಲ್ಲ. ಪ್ರತ್ಯೇಕವಾಗಿಯೇ ಊಟ-ತಿಂಡಿ ಮಾಡಬೇಕು ಎಂದು ಆಕೆ ಹೇಳಿದ್ದಾಳೆ.  ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಟ್ವಿಟರ್​ ಬಳಕೆದಾರರು, ಇದು ನಿಜಕ್ಕೂ ಫನ್ನಿ ಮತ್ತು ವಿಚಿತ್ರ ನಿಯಮ ಎಂದು ಹೇಳಿದ್ದಾರೆ.

ಹಾಗೇ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಅಗತ್ಯವಸ್ತುಗಳ ಪೂರೈಕೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಬಾಲ್ಕನಿಗೆ ಹೋಗಿ ಹಾಡುತ್ತ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದರು. ಅದು ವೈರಲ್ ಆಗುತ್ತಿದ್ದಂತೆ, ಕೊವಿಡ್ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ನೀವು ಸ್ವತಂತ್ರರಾಗಬೇಕು ಎಂಬ ಬಯಕೆಯನ್ನು ಸದ್ಯದ ಮಟ್ಟಿಗೆ ತಡೆದುಕೊಳ್ಳಿ ಎಂಬ ಸಂದೇಶವನ್ನು ಸಾರುವ ಡ್ರೋನ್​ವೊಂದು ಹಾರಾಡಿದೆ. ಒಟ್ಟಾರೆ ಶಾಂಘೈನಲ್ಲೀಗ ಜನರಿಗೆ ಗೃಹಬಂಧನವಾದಂತೆ ಆಗಿದೆ.

ಇದನ್ನೂ ಓದಿ:‘ಕೆಜಿಎಫ್​ 2’ ಸಿನಿಮಾದಲ್ಲಿ ಇರಲಿದೆ ಬಿಗ್​ ಸರ್​ಪ್ರೈಸ್​; ಚಿತ್ರತಂಡದಿಂದ ದೊಡ್ಡ ಪ್ಲ್ಯಾನ್​