ಪಾಕಿಸ್ತಾನದಲ್ಲಿ ಮತ್ತೊಂದು Surgical Strike: ಬಲೂಚಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರನ್ನು ಹೊಸಕಿದ ಇರಾನ್ ಕಮಾಂಡೊಗಳು

ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಸರ್ಕಾರಗಳ ಬೆಂಬಲದೊಂದಿಗೆ ಸಕ್ರಿಯವಾಗಿರುವ ಭಯೋತ್ಪಾದನಾ ಸಂಘಟನೆಯ ಶಿಬಿರವೊಂದನ್ನು ಕಮಾಂಡೊಗಳು ಧ್ವಂಸ ಮಾಡಿ, ತಮ್ಮ ದೇಶದ ಇಬ್ಬರು ಗಡಿ ಭದ್ರತಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಇರಾನ್​ಗೆ ಕರೆದೊಯ್ದಿದ್ದಾರೆ.

ಪಾಕಿಸ್ತಾನದಲ್ಲಿ ಮತ್ತೊಂದು Surgical Strike: ಬಲೂಚಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರನ್ನು ಹೊಸಕಿದ ಇರಾನ್ ಕಮಾಂಡೊಗಳು
ಇರಾನ್​ನ ಪ್ರತಿಷ್ಠಿತ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್​ ಕಾರ್ಪ್ಸ್​ ಕಮಾಂಡೊಗಳು (ಸಂಗ್ರಹ ಚಿತ್ರ)
Ghanashyam D M | ಡಿ.ಎಂ.ಘನಶ್ಯಾಮ

|

Feb 04, 2021 | 6:15 PM

ಇರಾನ್​ನ ಪ್ರತಿಷ್ಠಿತ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್​ ಕಾರ್ಪ್ಸ್​ (Islamic Revolutionary Guard Corps – IRGC) ಕಮಾಂಡೊಗಳು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಮಂಗಳವಾರ ತಡರಾತ್ರಿ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಈ ಹಿಂದೆ ಪಾಕ್ ನೆಲದಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ, ಭಯೋತ್ಪಾದನಾ ಶಿಬಿರಗಳನ್ನು ಧ್ವಂಸ ಮಾಡಿದ್ದ ಸಂಗತಿಯನ್ನು ಈ ಸಂದರ್ಭ ಹಲವರು ನೆನಪಿಸಿಕೊಳ್ಳುತ್ತಿದ್ದಾರೆ.

ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಸರ್ಕಾರಗಳ ಬೆಂಬಲದೊಂದಿಗೆ ಸಕ್ರಿಯವಾಗಿರುವ ಭಯೋತ್ಪಾದನಾ ಸಂಘಟನೆಯ ಶಿಬಿರವೊಂದನ್ನು ಸರ್ಜಿಕಲ್ ಸ್ಟ್ರೈಕ್​ನಲ್ಲಿ ಕಮಾಂಡೊಗಳು ಧ್ವಂಸ ಮಾಡಿ, ತಮ್ಮ ದೇಶದ ಇಬ್ಬರು ಗಡಿ ಭದ್ರತಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಇರಾನ್​ಗೆ ಕರೆದೊಯ್ದಿದ್ದಾರೆ.

ಗುಪ್ತಚರ ಸಂಸ್ಥೆ ನೀಡಿದ ಕರಾರುವಾಕ್ ಮಾಹಿತಿ ಆಧರಿಸಿ, ಪಾಕ್ ನೆಲದಲ್ಲಿ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ನಡೆಸಿದೆವು. ಪಾಕಿಸ್ತಾನದಲ್ಲಿ ನೆಲೆ ಸ್ಥಾಪಿಸಿಕೊಂಡಿದ್ದ ಭಯೋತ್ಪಾದಕರು ಅಪಹರಿಸಿದ್ದ ನಮ್ಮ ದೇಶದ ಇಬ್ಬರು ಗಡಿಭದ್ರತಾ ಯೋಧರನ್ನು ಬಂಧಮುಕ್ತಗೊಳಿಸಿ ಸ್ವದೇಶಕ್ಕೆ ವಾಪಸ್ ಕರೆತಂದಿದ್ದೇವೆ. ಈ ಯೋಧರನ್ನು ಎರಡೂವರೆ ವರ್ಷಗಳ ಹಿಂದೆ ಜೈಷ್-ಉಲ್-ಅದ್ಲ್ ಭಯೋತ್ಪಾದಕರ ಗುಂಪು ಅಪಹರಿಸಿ, ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು ಎಂದು ಐಆರ್​ಜಿಸಿ ಬಿಡುಗಡೆ ಮಾಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ನಡೆದಿದೆ. ಈ ಕುರಿತು ವರದಿ ಮಾಡಿರುವ ಕೆಲ ಇರಾನ್ ಮಾಧ್ಯಮಗಳು ‘ಪಾಕ್ ಆಕ್ರಮಿತ ಬಲೂಚಿಸ್ತಾನ್’ ಎಂದು ಉಲ್ಲೇಖಿಸಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಬಲೂಚಿಸ್ತಾನದಲ್ಲಿದ್ದ ಪಾಕಿಸ್ತಾನದ ಸೇನಾ ತುಕಡಿಗಳಿಗೆ ಕಾರ್ಯಾಚರಣೆ ಬಗ್ಗೆ ಇರಾನ್ ಯಾವುದೇ ಮಾಹಿತಿ ನೀಡಿರಲಿಲ್ಲ. ಭಯೋತ್ಪಾದಕರ ಅಡಗುತಾಣಕ್ಕೆ ರಕ್ಷಣೆ ನೀಡುತ್ತಿದ್ದ ಕೆಲ ಪಾಕ್ ಸೈನಿಕರೂ ಇರಾನ್ ನಡೆಸಿದ ಸರ್ಜಿಕಲ್ ಸ್ಟ್ರೈಕ್​ನಲ್ಲಿ ಹತರಾಗಿದ್ದಾರೆ ಎಂದು ಟರ್ಕಿಯ ಮಾಧ್ಯಮಗಳು ಹೇಳಿವೆ.

ಪಾಕಿಸ್ತಾನ ಮತ್ತು ಸೌದಿ ಸರ್ಕಾರಗಳ ಬೆಂಬಲವಿದ್ದ ಭಯೋತ್ಪಾದಕರು ಇರಾನ್ ಯೋಧರನ್ನು 2018ರಲ್ಲಿ ಅಪಹರಿಸಿದ್ದರು ಎಂದು ಐಆರ್​ಜಿಸಿ ಮೂಲಗಳನ್ನು ಉಲ್ಲೇಖಿಸಿ ಹಲವು ಜಾಲತಾಣಗಳು ವರದಿ ಮಾಡಿವೆ. ಆದರೆ ಪಾಕಿಸ್ತಾನ ಅಥವಾ ಇರಾನ್ ಸರ್ಕಾರ ಈವರೆಗೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Explainer | ರೈಲ್ವೆ ಇಲಾಖೆಯ ಗ್ರೂಪ್​ ಸಿ ಅಧಿಕಾರಿಗೆ ಸೇನಾ ಮೆಡಲ್, ರಕ್ಷಣಾ ಇತಿಹಾಸದಲ್ಲಿದು ಮಹತ್ವದ ವಿದ್ಯಮಾನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada