ರಷ್ಯಾ ಆಟಾಟೋಪಕ್ಕೆ ಕಡಿವಾಣ: ಫಿನ್​ಲೆಂಡ್, ಸ್ವೀಡನ್​ಗೆ ನ್ಯಾಟೊ ಸದಸ್ಯತ್ವ ನೀಡಲು ಅಮೆರಿಕ ಸೆನೆಟ್ ಸಮ್ಮತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 04, 2022 | 6:47 AM

ಮಿತ್ರರಾಷ್ಟ್ರಗಳಾಗಿರುವ ಸ್ವೀಡನ್ ಮತ್ತು ಫಿನ್​ಲೆಂಡ್​ಗೆ ಅಗತ್ಯ ಬೆಂಬಲ ಒದಗಿಸಲು ನಮ್ಮ ಬದ್ಧತೆಯನ್ನು ಅಮೆರಿಕ ಸೆನೆಟ್​ನ ಈ ನಿರ್ಧಾರವು ಸಾರಿ ಹೇಳಿದೆ.

ರಷ್ಯಾ ಆಟಾಟೋಪಕ್ಕೆ ಕಡಿವಾಣ: ಫಿನ್​ಲೆಂಡ್, ಸ್ವೀಡನ್​ಗೆ ನ್ಯಾಟೊ ಸದಸ್ಯತ್ವ ನೀಡಲು ಅಮೆರಿಕ ಸೆನೆಟ್ ಸಮ್ಮತಿ
ನ್ಯಾಟೊ ಮುಖ್ಯಸ್ಥ ಜೆನ್ಸ್​ ಸ್ಟೋಲ್​ಟನ್ಸ್​ಬರ್ಗ್​
Follow us on

ವಾಷಿಂಗ್​ಟನ್: ರಷ್ಯಾದೊಂದಿಗೆ ಹಲವು ಕಾರಣಗಳಿಂದ ಸಂಬಂಧ ಹಳಸಿರುವ ಫಿನ್​ಲೆಂಡ್ ಮತ್ತು ಸ್ವೀಡನ್ ದೇಶಗಳಿಗೆ ನ್ಯಾಟೊ (The North Atlantic Treaty Organization – NATO) ಸದಸ್ಯತ್ವ ನೀಡಲು ಅಮೆರಿಕದ ಸೆನೆಟ್ ಸಮ್ಮತಿಸಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯ ನಂತರ ಈ ಎರಡೂ ದೇಶಗಳು ರಷ್ಯಾ ಆಕ್ರಮಣದ ಭೀತಿ ಎದುರಿಸಿದ್ದವು. ಮಿಲಿಟರಿಗೆ ನೇಮಕಾತಿ ಹೆಚ್ಚಿಸುವುದೂ ಸೇರಿದಂತೆ ಹಲವು ರೀತಿಯಲ್ಲಿ ಸ್ವದೇಶದಲ್ಲಿ ಯುದ್ಧ ಸಿದ್ಧತೆ ತೀವ್ರಗೊಳಿಸಿದ್ದವು. ತಮ್ಮ ಸಂಸತ್​ಗಳ ಒಪ್ಪಿಗೆ ಪಡೆದು ನ್ಯಾಟೊ ಸದಸ್ಯತ್ವಕ್ಕೂ ಅರ್ಜಿ ಹಾಕಿದ್ದವು. ನ್ಯಾಟೊ ಸದಸ್ಯ ರಾಷ್ಟ್ರಗಳ ಪೈಕಿ ಪ್ರಬಲ ಸೇನೆ ಹೊಂದಿರುವ ಟರ್ಕಿಯಿಂದ ತಕರಾರು ಎದುರಾಗಿತ್ತು. ಮಾತುಕತೆಯ ನಂತರ ಟರ್ಕಿ ಸಹ ಫಿನ್​ಲೆಂಡ್ ಮತ್ತು ಸ್ವೀಡನ್ ಸೇರ್ಪಡೆಯ ವಿರೋಧದ ತೀವ್ರತೆ ಕಡಿಮೆ ಮಾಡಿತ್ತು. ಇದೀಗ ನಡೆದಿರುವ ಮಹತ್ವದ ಬೆಳವಣಿಗೆಯಲ್ಲಿ ನ್ಯಾಟೊ ಒಕ್ಕೂಟಕ್ಕೆ ಫಿನ್​ಲೆಂಡ್ ಮತ್ತು ಸ್ವೀಡನ್ ಸೇರ್ಪಡೆಗೆ ಅಮೆರಿಕದ ಸೆನೆಟ್ ಒಪ್ಪಿಗೆ ಸೂಚಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕಾದ ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರ ನೆಡ್ ಪ್ರೈಸ್, ಬಹುಕಾಲದಿಂದ ಅಮೆರಿಕದ ಮಿತ್ರರಾಷ್ಟ್ರಗಳಾಗಿರುವ ಸ್ವೀಡನ್ ಮತ್ತು ಫಿನ್​ಲೆಂಡ್​ಗೆ ಅಗತ್ಯ ಬೆಂಬಲ ಒದಗಿಸಲು ನಮ್ಮ ಬದ್ಧತೆಯನ್ನು ಅಮೆರಿಕ ಸೆನೆಟ್​ನ ಈ ನಿರ್ಧಾರವು ಸಾರಿ ಹೇಳಿದೆ. ಈ ಎರಡೂ ದೇಶಗಳ ಸೇರ್ಪಡೆಯಿಂದ ನ್ಯಾಟೊದ ಬಲ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

Published On - 6:47 am, Thu, 4 August 22