ಕಂದಹಾರ್: ಅಫ್ಘಾನಿಸ್ತಾನದ ಖ್ಯಾತ ಹಾಸ್ಯನಟ ಹಾಗೂ ಪೊಲೀಸ್ ಅಧಿಕಾರಿ ನಜರ್ ಮೊಹಮ್ಮದ್ (Nazar Mohammad) ಅಲಿಯಾಸ್ ಖಾಶಾ ಜ್ವಾನ್ (Khasha Zwan) ಎಂಬುವವರನ್ನು ಅಪಹರಿಸಿದ್ದ ತಾಲಿಬಾನ್ ಉಗ್ರರು (Taliban Terrorist) ಅವರನ್ನು ಹತ್ಯೆ ಮಾಡಿದ್ದಾರೆ ಎಂದು ನಜರ್ ಮೊಹಮ್ಮದ್ ಕುಟುಂಬಸ್ಥರು ಆರೋಪಿಸಿದ್ದರು. ಅದಕ್ಕೆ ಪೂರಕವೆಂಬಂತೆ ಕಾರಿನಲ್ಲಿ ಉಗ್ರರು ನಟ ನಜರ್ ಮೊಹಮ್ಮದ್ ಅವರ ಕೆನ್ನೆಗೆ ಹೊಡೆದು, ಹಿಂಸೆ ನೀಡಿರುವ ಶಾಕಿಂಗ್ ವಿಡಿಯೋವೊಂದು ಎಲ್ಲೆಡೆ ಹರಿದಾಡಿತ್ತು. ಆ ವಿಡಿಯೋ ವೈರಲ್ ಆದ ಬಳಿಕ ತಾವೇ ನಜರ್ ಮೊಹಮ್ಮದ್ ಅವರನ್ನು ಕೊಲೆ ಮಾಡಿರುವುದಾಗಿ ತಾಲಿಬಾನ್ ಒಪ್ಪಿಕೊಂಡಿದೆ.
ಖಾಶಾ ಜ್ವಾನ್ ಎಂದೇ ಕರೆಸಿಕೊಳ್ಳುತ್ತಿದ್ದ ನಟ ನಜರ್ ಮೊಹಮ್ಮದ್ ಅವರ ಕತ್ತು ಸೀಳಿ, ಬಳಿಕ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. 3 ದಿನಗಳ ಹಿಂದೆ ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಕಂದಹಾರ್ ಬಳಿ ನಟ ಖಾಶಾ ಜ್ವಾನ್ ಅವರ ಮೃತದೇಹ ಪತ್ತೆಯಾಗಿತ್ತು. ಆ ಕೊಲೆಗೂ ಹಿಂದಿನ ದಿನ ಅಂದರೆ ನಟನನ್ನು ಅಪಹರಣ ಮಾಡಿದ ದಿನ ಉಗ್ರರು ಅವರಿಗೆ ಚಿತ್ರಹಿಂಸೆ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಪರಿಚಿತ ದುಷ್ಕರ್ಮಿಗಳು ಖಾಶಾ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿ, ಅವರನ್ನು ಅಪಹರಣ ಮಾಡಿದ್ದರು.
Taliban executed this poor Comedian #Khasha Zwan that it’s “HARAAM” in Islam to make people laugh.
The video is moments before his death. pic.twitter.com/mXpLK8bZ19
— Fazila Baloch?☀️ (@IFazilaBaloch) July 28, 2021
ಬಳಿಕ, ನಟ ಖಾಶಾ ಅವರ ಕುಟುಂಬಸ್ಥರು ನೀಡಿದ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸಿದಾಗ ಅದು ತಾಲಿಬಾನ್ ಸಂಘಟನೆಯ ಉಗ್ರರ ಕೃತ್ಯ ಎಂಬುದು ಬಯಲಾಗಿತ್ತು. ಅದಾದ ಬಳಿಕ ಕಂದಹಾರ್ ಬಳಿ ನಟನ ಮೃತದೇಹ ಪತ್ತೆಯಾಗಿತ್ತು. ಕಂದಹಾರ್ ಪೊಲೀಸ್ ಇಲಾಖೆಯಲ್ಲೂ ಖಾಶ್ ಜ್ವಾನ್ ಸೇವೆ ಸಲ್ಲಿಸಿದ್ದರು. ಈ ಕೃತ್ಯ ತಮ್ಮದೇ ಎಂದು ತಾಲಿಬಾನ್ ಈಗಾಗಲೇ ಒಪ್ಪಿಕೊಂಡಿದೆ.
‘ನಜರ್ ಮೊಹಮ್ಮದ್ ಕೇವಲ ಕಾಮಿಡಿಯನ್ ಮಾತ್ರವಲ್ಲ ಪೊಲೀಸ್ ಕೂಡ ಆಗಿದ್ದ. ಆತ ಈ ಹಿಂದೆ ನಮ್ಮ ವಿರುದ್ಧ ಅನೇಕ ಬಾರಿ ಗುಂಡಿನ ದಾಳಿ ನಡೆಸಿದ್ದ. ನಾವು ಆತನನ್ನು ಅಪಹರಿಸಿ ಕಾರಿನಲ್ಲಿ ಕರೆತರುವಾಗ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಹೀಗಾಗಿ, ನಮ್ಮ ಹುಡುಗರು ಆತನಿಗೆ ಹೊಡೆದಿದ್ದರು. ಆಮೇಲೆ ನಮ್ಮ ಮೇಲೆ ಕಿರುಚಾಡಿ ಆತನೇ ನಮಗೆ ಈ ಕೊಲೆ ಮಾಡಲು ಪ್ರೇರೇಪಣೆ ನೀಡಿದ್ದ. ಹೀಗಾಗಿ, ಕೋಪದಿಂದ ಆತನನ್ನು ಕೊಲೆ ಮಾಡಿದೆವು. ಪೊಲೀಸ್ ಅಧಿಕಾರಿಯಾಗಿದ್ದ ಆತ ನಮ್ಮ ತಂಡದ ಅನೇಕರ ಸಾವಿಗೆ ಕಾರಣನಾಗಿದ್ದ’ ಎಂದು ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ಹಾಸ್ಯ ನಟನ ಹತ್ಯೆಗೂ ಮುನ್ನ ಚಿತ್ರಹಿಂಸೆ ನೀಡಿದ ತಾಲಿಬಾನ್ ಉಗ್ರರು; ಶಾಕಿಂಗ್ ವಿಡಿಯೋ ವೈರಲ್