
ವಾಷಿಂಗ್ಟನ್, ಸೆಪ್ಟೆಂಬರ್ 10: ಇನ್ನೇನು ಎಲ್ಲಾ ಸರಿ ಹೋಯಿತು, ಟ್ರಂಪ್ ಭಾರತದ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದಾರೆ, ಮತ್ತೆ ಉಭಯ ದೇಶಗಳ ಸಂಬಂಧ ಹಳಿಗೆ ಬರುತ್ತದೆ ಎಂದು ಎಲ್ಲರೂ ಕಾತುರವಾಗಿದ್ದಾರೆ. ಡೊನಾಲ್ಡ್ ಟ್ರಂಪ್(Donald Trump) ಮತ್ತೆ ತನ್ನ ನರಿ ಬುದ್ಧಿಯ ಪ್ರದರ್ಶನ ಮಾಡಿದ್ದಾರೆ. ಭಾರತವು ಅಮೆರಿಕದ ಮಿತ್ರ, ಶೀಘ್ರ ನಮ್ಮ ಸಂಬಂಧ ಸರಿಯಾಗುತ್ತೆ ಎಂದು ಹೇಳುತ್ತಾ ಭಾರತವನ್ನು ಬಲಿಪಶು ಮಾಡಲು ಮುಂದಾಗಿದ್ದಾರೆ.
ಭಾರತ ಹಾಗೂ ಚೀನಾ ಮೇಲೆ ಶೇ.100ರಷ್ಟು ತೆರಿಗೆಯನ್ನು ಹೇರಿ ಆಗ ರಷ್ಯಾದ ಮೇಲೆ ಒತ್ತಡ ಹಾಕಬಹುದು ಆಗ ರಷ್ಯಾ ಉಕ್ರೇನ್ ಯುದ್ಧ ನಿಲ್ಲುತ್ತದೆ ಎಂದು ಟ್ರಂಪ್ ಯುರೋಪಿಯನ್ ಒಕ್ಕೂಟವನ್ನು ಒತ್ತಾಯಿಸಿದ್ದಾರೆ. ಇತ್ತ ಅಮೆರಿಕವು ನೀವು ರಷ್ಯಾದಿಂದ ತೈಲ ಆಮದು ನಿಲ್ಲಿಸದಿದ್ದರೆ ಸುಂಕ ಹೆಚ್ಚಳ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಈಗಾಗಲೇ ಇದ್ದ ಶೇ.25ರಷ್ಟು ಸುಂಕಕ್ಕೆ ಹೆಚ್ಚುವರಿಯಾಗಿ ಮತ್ತೆ ಶೇ.25ರಷ್ಟು ಸುಂಕವನ್ನು ವಿಧಿಸಿದ್ದಾರೆ.
ಮತ್ತಷ್ಟು ಓದಿ: ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಟ್ರಂಪ್: ಮತ್ತೆ ಮೋದಿಯ ಹೊಗಳಿದ ಅಮೆರಿಕ ಅಧ್ಯಕ್ಷ!
ಅಷ್ಟೇ ಅಲ್ಲದೆ ಮತ್ತಷ್ಟು ಸುಂಕ ವಿಧಿಸುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಆದರೆ ಇದ್ಯಾವುದಕ್ಕೂ ಪ್ರಧಾನಿ ಮೋದಿ ಬಗ್ಗಲಿಲ್ಲ. ಕೆಲ ಸಮಯದ ಬಳಿಕ ಟ್ರಂಪ್ ಟ್ರೂಥ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿ, ಭಾರತ ನಮ್ಮ ಒಳ್ಳೆಯ ಸ್ನೇಹಿತ ಎಂದು ಹೊಗಳಿದ್ದರು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ ನಾವು ಕೂಡ ಟ್ರಂಪ್ ಜತೆ ಮಾತುಕತೆಗೆ ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದರು.
ಆದರೆ ಟ್ರಂಪ್ ಎದುರಿನಲ್ಲಿ ಚೆಂದವಾಗಿ ಮಾತನಾಡುತ್ತಾ, ಹಿಂದಿನಿಂದ ನರಿ ಬುದ್ಧಿ ತೋರಿಸಿದ್ದಾರೆ. ಭಾರತ ಮತ್ತು ಚೀನಾದ ಮೇಲೆ ಶೇ.100 ರಷ್ಟು ಸುಂಕ ವಿಧಿಸುವಂತೆ ಡೊನಾಲ್ಡ್ ಟ್ರಂಪ್ ಮಂಗಳವಾರ ಯುರೋಪಿಯನ್ ಒಕ್ಕೂಟದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಅಮೆರಿಕದ ಅಧಿಕಾರಿ ಮತ್ತು ಯುರೋಪಿಯನ್ ಒಕ್ಕೂಟದ ರಾಜತಾಂತ್ರಿಕರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್‌ಪಿ ಈ ಮಾಹಿತಿಯನ್ನು ನೀಡಿದೆ. ಟ್ರಂಪ್ ಅವರ ಈ ಕ್ರಮವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಒತ್ತಡ ಹೇರುವ ತಂತ್ರವೆಂದು ಪರಿಗಣಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತ ಮತ್ತು ಚೀನಾ ವಿರುದ್ಧ ಸಮಗ್ರ ಸುಂಕ ವಿಧಿಸಲು ಟ್ರಂಪ್ ಯುರೋಪಿಯನ್ ಒಕ್ಕೂಟವನ್ನು ಪ್ರೋತ್ಸಾಹಿಸಿದ್ದಾರೆ ಎಂದು ಹೇಳಿದ್ದಾರೆ. ಭಾರತ ಸೇರಿದಂತೆ ರಷ್ಯಾದ ತೈಲವನ್ನು ಖರೀದಿಸುವ ದೇಶಗಳ ಮೇಲೆ ಸುಂಕವನ್ನು ಹೆಚ್ಚಿಸಬೇಕು ಎಂಬುದು ಟ್ರಂಪ್ ಒತ್ತಾಯವಾಗಿದೆ.
ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಅಧಿಕಾರಿಗಳ ನಡುವಿನ ಸಂಭಾಷಣೆಯಲ್ಲಿ, ಡೊನಾಲ್ಡ್ ಟ್ರಂಪ್ ಚೀನಾ ಮತ್ತು ಭಾರತದಂತಹ ರಷ್ಯಾದ ತೈಲ ಖರೀದಿದಾರರ ಮೇಲೆ 50 ರಿಂದ 100 ಪ್ರತಿಶತದಷ್ಟು ತೆರಿಗೆ ವಿಧಿಸಲು ಸೂಚಿಸಿದ್ದಾರೆ. ರಷ್ಯಾದ ಯುದ್ಧ ಯಂತ್ರಕ್ಕೆ ಹಣಕಾಸಿನ ಮೂಲ ಚೀನಾ ಮತ್ತು ಭಾರತದ ತೈಲ ಖರೀದಿ.
ಚೀನಾ ಮತ್ತು ಭಾರತ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರರು ಎಂಬುದು ಟ್ರಂಪ್ ವಾದ. ರಷ್ಯಾದ ಆರ್ಥಿಕತೆಯು ಅವರ ಹಣದ ಮೇಲೆ ನಿಂತಿದೆ. 2022 ರಿಂದ ರಷ್ಯಾ ಉಕ್ರೇನ್‌ನಲ್ಲಿ ನಿರಂತರವಾಗಿ ಹಿಡಿತ ಸಾಧಿಸುತ್ತಿರುವುದಕ್ಕೆ ಇದೇ ಕಾರಣ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ