ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಟ್ರಂಪ್: ಮತ್ತೆ ಮೋದಿಯ ಹೊಗಳಿದ ಅಮೆರಿಕ ಅಧ್ಯಕ್ಷ!
ಭಾರತದ ಜೊತೆಗಿನ ಅಮೆರಿಕದ ಸಂಬಂಧ ಇನ್ನೇನು ಸಂಪೂರ್ಣವಾಗಿ ಕಡಿದುಹೋಯಿತು ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದಾದ ಕೆಲವೇ ಕ್ಷಣಗಳಲ್ಲಿ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ! ಹಾಗಾದರೆ ಟ್ರಂಪ್ ಹೇಳಿದ್ದೇನೆ? ತಿಳಿಯಲು ಮುಂದೆ ಓದಿ.

ವಾಷಿಂಗ್ಟನ್, ಸೆಪ್ಟೆಂಬರ್ 6: ಕರಾಳ ಚೀನಾಕ್ಕಾಗಿ ಅಮೆರಿಕವು ಭಾರತ ಮತ್ತು ರಷ್ಯಾವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅದಾದ ಕೆಲವೇ ಕ್ಷಣಗಳಲ್ಲಿ ವರಸೆ ಬದಲಿಸಿದ್ದಾರೆ. ಭಾರತ (India) ಮತ್ತು ಅಮೆರಿಕದ ಬಾಂಧವ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ಭಾರತ ಮತ್ತು ರಷ್ಯಾವನ್ನು ನಾವು ಕಳೆದುಕೊಂಡೆವು ಎಂದು ಸಾಮಾಜಿಕ ಮಾಧ್ಯಮ ಟ್ರೂತ್‌ನಲ್ಲಿ ಅವರು ಸಂದೇಶ ಪ್ರಕಟಿಸಿದ್ದರು. ಇದಾದ ಕೆಲವು ಹೊತ್ತಿನ ನಂತರ ಶ್ವೇತ ಭವನದ ಬಳಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ, ಭಾರತವನ್ನು ಕಳೆದುಕೊಂಡಿದ್ದೇವೆ ಎಂದು ನನಗೆ ಅನಿಸುವುದಿಲ್ಲ. ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ ನನಗೆ ಹತಾಶೆಯಾಗಿದೆ. ಅದಕ್ಕಾಗಿ ಅವರ ಮೇಲೆ ದೊಡ್ಡ ಪ್ರಮಾಣದಲ್ಲಿ, ಶೇಕಡ 50ರ ತೆರಿಗೆ ವಿರೋಧಿಸಿದ್ದೇನೆ ಎಂದು ಹೇಳಿದ್ದಾರೆ.
ಡೊನಾಲ್ಟ್ ಟ್ರಂಪ್ ಹೇಳಿದ್ದೇನು?
‘ನಾನು ಮೋದಿ ಅವರೊಂದಿಗೆ ಎಂದಿಗೂ ಸ್ನೇಹದಿಂದಿರುತ್ತೇನೆ. ಅವರೊಬ್ಬ ಅತ್ಯುತ್ತಮ ಪ್ರಧಾನ ಮಂತ್ರಿ. ಈ ಕ್ಷಣದಲ್ಲಿ ಅವರು ಏನು ಮಾಡುತ್ತಿದ್ದಾರೋ ಅದನ್ನು ನಾನು ಇಷ್ಟಪಡುವುದಿಲ್ಲ ಅಷ್ಟೇ. ಆದರೆ, ಭಾರತ ಮತ್ತು ಅಮೆರಿಕದ ನಡುವೆ ವಿಶೇಷವಾದ ಸಂಬಂಧ ಇದೆ. ಆ ಬಗ್ಗೆ ಚಿಂತೆ ಮಾಡಬೇಕಿಲ್ಲ’ ಎಂದು ಟ್ರಂಪ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಮೂಲಕ ಟ್ರಂಪ್ ಇದೀಗ ಭಾರತದ ಕುರಿತ ಹೇಳಿಕೆಗಳ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದಂತೆ ಕಾಣಿಸುತ್ತಿದೆ. ಏತನ್ಮಧ್ಯೆ, ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ಅಮೆರಿಕದ ಆಗ್ರಹವನ್ನು ಭಾರತ ತಿರಸ್ಕರಿಸಿದೆ.
ಇದನ್ನೂ ಓದಿ: ಭಾರತ ಅಮೆರಿಕದ ಕ್ಷಮೆ ಯಾಚಿಸಲಿದೆ ಎಂದ ವಾಣಿಜ್ಯ ಕಾರ್ಯದರ್ಶಿ! ಸುಂಕ ತಪ್ಪಿಸಿಕೊಳ್ಳಲು ಭಾರತಕ್ಕೆ 3 ಷರತ್ತು
ಟ್ರಂಪ್ ಭಾರತದ ಕುರಿತು ಡ್ಯಾಮೇಜ್ ಕಂಟ್ರೋಲ್ ಮಾಡುವಂಥ ಮಾತುಗಳನ್ನಾಡಿರುವ ಹೊತ್ತಿನಲ್ಲೇ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ಭಾರತ ಒಂದೆರಡು ತಿಂಗಳಲ್ಲಿ ಅಮೆರಿಕದ ಕ್ಷಮೆಯಾಚಿಸಲಿದೆ ಎನ್ನುವ ಮೂಲಕ ಮೊಂಡುತನ ಮೆರೆದಿದ್ದಾರೆ. ಅಲ್ಲದೆ, ಭಾರತಕ್ಕೆ ಹೆಚ್ಚುವರಿ ಸುಂಕದಿಂದ ವಿನಾಯಿತಿ ನೀಡಲು ಆ ದೇಶವು ರಷ್ಯಾ, ಚೀನಾ ಜೊತೆಗಿನ ಸಂಬಂಧವನ್ನು ತೊರೆದು ಅಮೆರಿಕ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು. ಬ್ರಿಕ್ಸ್‌ನ ಭಾಗವಾಗುವುದನ್ನು ನಿಲ್ಲಿಸಬೇಕು ಎಂದು ಷರತ್ತುಗಳನ್ನು ವಿಧಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




