ತನ್ನನ್ನು ಕೊಲ್ಲಲು ಇಲ್ಲವೇ ರೇಪ್ ಮಾಡಲು ಮುಂದಾಗಿದ್ದ ಸೆಕ್ಸ್ ಅಪರಾಧಿಯನ್ನು (sex offender) ಪೊಲೀಸರಿಗೆ ಹಿಡಿದುಕೊಟ್ಟ ಶಾಲಾಬಾಲಕಿಯೊಬ್ಬಳು ತಾನು ಅನುಭವಿಸಿದ ಯಾತನೆ ಬಗ್ಗೆ ಕೊನೆಗೂ ಹೇಳಿಕೊಂಡಿದ್ದಾಳೆ. ಫೆಬ್ರುವರಿ 2019ರಲ್ಲಿ ಕೈಯಲ್ಲಿ ಚಾಕುವೊಂದನ್ನು ಹಿರಿದು ತನ್ನ ಮೇಲೆ ನೇಥನ್ ರಾಸನ್ (Nathan Rawson) ಆಕ್ರಮಣ ನಡೆಸಲು ಮುಂದಾದಾಗ ಅಲೆಕ್ಸಾಂಡ್ರಾ ಮುರೆಸಾನ್ ಗೆ (Alexandra Murasen) ಕೇವಲ 15 ರ ಪ್ರಾಯ. ಪಶ್ಚಿಮ ಯಾರ್ಕ್ ಶೈರ್ ನ ಲೀಡ್ಸ್ ನಲ್ಲಿರುವ ತನ್ನ ಶಾಲೆಗೆ ಅವಳು ನಡೆದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ರಾಸನ್, ತನ್ನನ್ನು ಕೊಲ್ಲಬಹುದು ಇಲ್ಲವೇ ಅತ್ಯಾಚಾರವೆಸಗಬಹುದು ಎಂಬ ಭೀತಿ ಅವಳಲ್ಲಿದ್ದರೂ ಕ್ಷಿಪ್ರವಾಗಿ ಯೋಚಿಸುವ ಕ್ಷಮತೆ ಹೊಂದಿರುವ ಅಲೆಕ್ಸಾಂಡ್ರಾ ಹಲ್ಲೆಕೋರನ ಫೋಟೋಗಳನ್ನು ಕ್ಲಿಕ್ಕಿಸಿದ್ದಳು.
ಅಲೆಕ್ಸಾಂಡ್ರಾಳಿಗೆ ಶೌರ್ಯ ಪ್ರಶಸ್ತಿ
ಥರಗುಟ್ಟುವ ಚಳಿಯಲ್ಲಿ ಒಂದು ಜಮೀನಲ್ಲಿ ರಾಸನ್ ನಿಂತಿದ್ದ ಪೋಟೋ ಅಂತಿಮವಾಗಿ ಅವನನ್ನು ಸೆರೆಹಿಡಿಯಲು ಪೊಲೀಸರಿಗೆ ನೆರವಾಗಿತ್ತು. ವೆಸ್ಟ್ ಯಾರ್ಕ್ ಶೈರ್ ಪೊಲೀಸ್ ಅವನ ಫೋಟೋವನ್ನು ಶೇರ್ ಮಾಡಿ ಅವನ ಸುಳಿವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿತ್ತು. ರಾಸನ್ ನನ್ನು ಹಿಡಿದು ಜೇಲಿಗಟ್ಟಲು ನೆರವಾದ ಅಲೆಕ್ಸಾಂಡ್ರಾಳಿಗೆ ಪೊಲೀಸರು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಂದಹಾಗೆ, ಅವಳಿಗೆ ಈಗ 19ರ ಪ್ರಾಯ.
ರಾಸನ್ ಸೆರೆಸಿಕ್ಕ ನಂತರದ ದಿನಗಳಲ್ಲಿ ಒಬ್ಬಂಟಿಯಾಗಿ ತಿರುಗಾಡಲು ಭಯವಾಗುತ್ತಿತ್ತು ಆದರೆ ಪೊಲೀಸರಿಂದ ಸನ್ಮಾನಿಸಲ್ಪಟ್ಟ ಮೇಲೆ ತನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿತು ಎಂದು ಧೈರ್ಯಶಾಲಿ ಯುವತಿ ಹೇಳಿದ್ದಾಳೆ.
ಅಲೆಕ್ಸಾಂಡ್ರಾ ಹೇಳಿದ್ದು
‘ಅವನು ನನ್ನತ್ತ ಬರುವಾಗ ಅವನ ಕೈಯಲ್ಲಿದ್ದ ಕತ್ತಿಯ ಹಿಡಿಕೆ ಕಡೆ ನನ್ನ ಗಮನ ಹೋಯಿತು. ಅದನ್ನು ಹಿಡಿದು ಜೋರಾಗಿ ಎಳೆಯಲಾರಂಭಿಸಿದೆ. ನನ್ನಲ್ಲಿ ಅದೆಲ್ಲಿಂದ ಧೈರ್ಯ ಬಂತೋ ಗೊತ್ತಿಲ್ಲ. ನನಗೆ ಗೊತ್ತಿಲ್ಲದಂತೆ ಮೈಯೆಲ್ಲ ಅದುರತೊಡಗಿತ್ತು. ನನ್ನ ಮನಸ್ಸಿಗೆ ತೋಚಿದನ್ನು ನಾನು ಮಾಡಿದೆ,’ ಎಂದು ಅಲೆಕ್ಸಾಂಡ್ರಾ ಹೇಳಿದ್ದಾಳೆ.
‘ಎರಡು ವರ್ಷಗಳ ಕಾಲ ರಗ್ಬೀ ಆಡಿದ್ದು ನನಗೆ ನೆರವಾಯಿತು, ಅಂತಿಮವಾಗಿ ಅವನ ಕೈಯಿಂದ ಚಾಕು ಕಿತ್ತುಕೊಳ್ಳುವಲ್ಲಿ ಸಫಲಳಾದೆ’ ಎಂದು ಅಲೆಕ್ಸಾಂಡ್ರಾ ಹೇಳಿದ್ದಾಳೆ. ಅಲೆಕ್ಸಾಂಡ್ರಾಳ ಸೊಂಟ ಹಿಡಿದಿದ್ದ ರಾಸನ್ ಅವಳಿಗೆ ಚಾಕು ತೋರಿಸಿ ತನ್ನೊಂದಿಗೆ ಕಾಡಿನೊಳಗೆ ನಡೆಯುವಂತೆ ಹೇಳಿದ್ದ. ಅವನೊಂದಿಗೆ ತಾನು ಹೋರಾಡಲೇಬೇಕು ಎಂದು ನಿರ್ಧರಿಸಿಕೊಂಡ ಅಲೆಕ್ಸಾಂಡ್ರಾ, ಹಲ್ಲೆಕೋರನ ಕೈಯಲ್ಲಿದ್ದ ಚಾಕು ಕಿತ್ತಿಕೊಳ್ಳಲು ಮುಂದಾದಳು. ಆ ಪ್ರಯತ್ನನದಲ್ಲಿದ್ದಾಗ ಅವಳ ಕೈಗೆ ಗಾಯವಾದರೂ ಅವಳು ಎದೆಗುಂದಲಿಲ್ಲ.
ಅವನಾಟ ಬಾಲೆಯ ಮುಂದೆ ನಡೆಯಲಿಲ್ಲ!
ಹದಿನೈದರ ಬಾಲೆಯ ಮುಂದೆ ತನ್ನ ಆಟ ನಡೆಯದು ಅಂತ ಖಾತ್ರಿಯಾದ ಕೂಡಲೇ ರಾಸನ್ ಅಲ್ಲಿಂದ ಓಡಲಾರಂಭಿಸಿದ್ದ. ಆದರೆ ನಮ್ಮ ಕಥಾನಾಯಕಿ ತಡಮಾಡದೆ ತನ್ನ ಮೊಬೈಲ್ ಫೋನಲ್ಲಿ ಅವನ ಫೋಟೋಗಳನ್ನು ಕ್ಲಿಕ್ಕಿಸಿದಳು. ಆಮೇಲೆ ಅಂಬ್ಯಲೆನ್ಸ್ ಒಂದಕ್ಕೆ ಫೋನ್ ಮಾಡಿ ತನ್ನ ಕೈಗಾದ ಗಾಯಕ್ಕೆ ಚಿಕಿತ್ಸೆ ಮಾಡಿಸಿಕೊಂಡಳು. ಅವಳು ತೆಗೆದ ಪೋಟೋಗಳಿಂದ ಪೊಲೀಸರಿಗೆ ರಾಸನ್ ನನ್ನು ಪತ್ತೆಮಾಡವುದು ಸಾಧ್ಯವಾಯಿತು.
ಕಳೆದ ವರ್ಷ ಮೇನಲ್ಲಿ ಲೀಡ್ಸ್ ಕ್ರೌನ್ ಕೋರ್ಟ್ ಅವನಿಗೆ 13 ವರ್ಷ 8 ತಿಂಗಳು ಕಾರಾಗೃಹವಾಸದ ಶಿಕ್ಷೆ ವಿಧಿಸಿತು. ಅಪಹರಣ, ಗಾಯಗೊಳಿಸಿದ್ದು, ಹರಿತವಾದ ಆಯುಧ ಹೊಂದಿದ್ದಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸದ ಎರಡು ಕಳುವು ಪ್ರಕರಣಗಳಲ್ಲಿ ತಾನು ತಪ್ಪಿತಸ್ಥನೆಂದು ರಾಸನ್ ಅಂಗೀಕರಿಸಿದ. ಫೆಬ್ರವರಿ 2016ರಲ್ಲಿ ರಾಸನ್ ಲೀಡ್ಸ್ನ ಬೀದಿಯೊಂದರಲ್ಲಿ ಮಹಿಳೆಯೊಬ್ಬಳನ್ನು ಹಿಂಬಾಲಿಸಿದ್ದ ರಾಸನ್ ಅಲೆಕ್ಸಾಂಡ್ರಾಳನ್ನು ಹೆದರಿಸಿದಂತೆಯೇ ಆಕೆಯನ್ನು ಹೆದರಿಸಿ ರೇಪ್ ಮಾಡಿದ್ದ.
ಅಪರೂಪದ ಘಟನೆ
‘ಆ ಘಟನೆಯನ್ನು ಹೇಗೆ ವರ್ಣಿಸಬೇಕೆಂದು ನನಗೆ ಅರ್ಥವಾಗುತ್ತಿಲ್ಲ. ಇದು ಪ್ರತಿದಿನ ನಡೆಯುವ ವಿಷಯವಲ್ಲ. ನನ್ನ ಮಮ್ಮಿ ಮತ್ತು ಡ್ಯಾಡ್ ನನ್ನ ಬಗ್ಗೆ ನಿಜವಾಗಿಯೂ ಅತಂಕಿತರಾಗಿದ್ದರು. ನನಗೆ ನೆರವಾಗಲು ಅವರಿಗೆ ಸಾಧ್ಯವಾಗಬಹುದಾಗಿದ್ದ ಎಲ್ಲ ಪ್ರಯತ್ನಗಳನ್ನು ಮಾಡಿದರು. ಅವರು ನನ್ನನ್ನು ಚಿಕಿತ್ಸೆಗೆ ಕರೆದೊಯ್ಯಲು ಬಯಸಿದ್ದರು. ಆದರೆ ನಾನು ಹೆಚ್ಚು ಮಾತನಾಡುವ ಮತ್ತು ಚಿಕ್ಕಪುಟ್ಟ ಗಾಯಗಳಿಗೆಲ್ಲ ಡಾಕ್ಟರ್ ಬಳಿ ಹೋಗುವ ಜಾಯಮಾನದವಳಲ್ಲ,’ ಎಂದು ಅಲೆಕ್ಸಾಂಡ್ರಾ ಹೇಳಿದ್ದಾಳೆ.
‘ಮೊದಮೊದಲು, ನಾನು ಹೊರಗೆ ಹೋಗಲು ಸ್ವಲ್ಪ ಹೆದರುತ್ತಿದ್ದೆ, ಆದರೆ ಅದೇ ಸಮಯದಲ್ಲಿ, ನಾನು ಬೆಳೆಯುತ್ತಿದ್ದರಿಂದ, ಅದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು,’ ಎಂದು ಶೌರ್ಯ ಪ್ರದರ್ಶನಕ್ಕಾಗಿ ಲೀಡ್ಸ್ ಜಿಲ್ಲೆ ನೀಡುವ ಪ್ರಶಸ್ತಿಯನ್ನು ವೆಸ್ಟ್ ಯಾರ್ಕ್‌ಷೈರ್ ಪೊಲೀಸ್‌ನಿಂದ ಪಡೆದಿರುವ ಅಲೆಕ್ಸಾಂಡ್ರಾ ಹೇಳಿದ್ದಾಳೆ. ‘ಪ್ರಶಸ್ತಿ ಸ್ವೀಕರಿಸಿದ ರಾತ್ರಿ ಅದ್ಭುತವಾಗಿತ್ತು. ನೂರಾರು ಜನರ ಸಮ್ಮುಖದಲ್ಲಿ ವೇದಿಕೆ ಹತ್ತಿ ಹೋಗಿ ಪ್ರಶಸ್ತಿ ಪತ್ರ ಸ್ವೀಕರಿಸುವುದು ಸಾಮಾನ್ಯ ಸಂಗತಿಯಲ್ಲ,’ ಎಂದು ಆಕೆ ಹೇಳಿದ್ದಾಳೆ.
‘ನಿಮ್ಮ ಧೈರ್ಯಕ್ಕೆ ನಮ್ಮ ಸಲಾಂ!’
ಫೆಬ್ರವರಿ 15, 2019 ರಂದು ಚಾಕುವಿನಿಂದ ಹೆದರಿಸಿ ನಿಮ್ಮನ್ನು ಅಪಹರಿಸಲು ಯತ್ನಿಸಿದ ವ್ಯಕ್ತಿಯನ್ನು ಕೆಚ್ಚೆದೆಯಿಂದ ಎದುರಿಸಿ ನೀವು ಪ್ರದರ್ಶಿಸಿದ ಶೌರ್ಯಕ್ಕಾಗಿ ಈ ಪ್ರಶಸ್ತಿ ಪತ್ರ,’ ಎಂದು ಆಕೆಗೆ ನೀಡಿರುವ ಪ್ರಮಾಣಪತ್ರದಲ್ಲಿ ಬರೆಯಲಾಗಿದೆ.
‘ಚಾಕುವಿನಿಂದಾದ ಗಾಯದ ಹೊರತಾಗಿಯೂ ನೀವು ಆ ವ್ಯಕ್ತಿಯನ್ನು ನಿಶ್ಯಸ್ತ್ರಗೊಳಿಸುವಲ್ಲಿ ಯಶಸ್ವಿಯಾಗಿದ್ದೀರಿ ಮತ್ತು ನಿಮ್ಮ ಫೋನ್‌ನಲ್ಲಿ ಅವನ ಚಿತ್ರಗಳನ್ನು ಸೆರೆ ಹಿಡಿದಿರುವಿರಿ. ಅದು ಅಪರಾಧಿಯ ತ್ವರಿತ ಬಂಧನಕ್ಕೆ ಕಾರಣವಾಯಿತು,’ ಎಂದು ಅದರಲ್ಲಿ ಹೇಳಲಾಗಿದೆ. ಮತ್ತಷ್ಟು ಕ್ರೈಮ್
ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ