ಟೋಕಿಯೋ: ಕಳೆದ ನಾಲ್ಕು ತಿಂಗಳಿನಿಂದ ಕೊರೊನಾದಿಂದ ಬಳಲಿ ಬೇಸತ್ತು ಹೋಗಿದ್ದ ಜಪಾನ್ ದೇಶದ ರಾಜಧಾನಿ ಟೋಕಿಯೋ ಈಗ ತುಸು ಸುಧಾರಿಸಿಕೊಳ್ಳುತ್ತಿದ್ದೆ. ಹಾಗಾಗಿ, ಇದೀಗ ನಗರದ ಹಲವಾರು ಮನರಂಜನಾ ಸಂಸ್ಥೆಗಳು ಪುನಃ ಬಾಗಿಲು ತೆರೆದು ಜನರನ್ನು ಸ್ವಾಗತಿಸುತ್ತಿವೆ. ಇದರಲ್ಲಿ ಟೋಕಿಯೋದ ಜನಪ್ರಿಯ ಡಿಸ್ನಿಲ್ಯಾಂಡ್ ಮತ್ತು ಡಿಸ್ನಿ ಸೀ ಥೀಮ್ ಪಾರ್ಕ್ಗಳು ಕೂಡ ಒಂದು.
1983ರಲ್ಲಿ ಸ್ಥಾಪನೆಯಾಗಿದ್ದ ಥೀಮ್ ಪಾರ್ಕ್ಗೆ ಪ್ರತಿ ವರ್ಷ ಸರಿಸುಮಾರು 18 ಮಿಲಿಯನ್ ಜನ ಭೇಟಿ ನೀಡುತ್ತಾರೆ. ಹೀಗಾಗಿ, ಸುಮಾರು ನಾಲ್ಕು ತಿಂಗಳ ಬಳಿಕ ಇಂದಿನಿಂದ ಮತ್ತೊಮ್ಮೆ ಪ್ರವಾಸಿಗರನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಬೆಳಗ್ಗೆ 8ರಿಂದ ಆರಂಭಗೊಳ್ಳುವ ಪಾರ್ಕ್ ರಾತ್ರಿ 8ರ ವರೆಗೆ ತೆರೆದಿರುತ್ತದೆ. ಆದರೆ, ಸದ್ಯಕ್ಕೆ ಯಾವುದೇ ಕವಾಯತ್ತು ಅಥವಾ ಶೋಗಳನ್ನು ನಡೆಸುವುದಿಲ್ಲ. ಕೇವಲ ರೋಲರ್ ಕೋಸ್ಟರ್ ಹಾಗೂ ಇತರೆ ಆಟಗಳು ಮಾತ್ರ ಲಭ್ಯವಿರುತ್ತೆ.
ಜೊತೆಗೆ, ಪಾರ್ಕ್ನ ಆಡಳಿತ ಮಂಡಳಿ ಕೆಲವು ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ. ಡಿಸ್ನಿಲ್ಯಾಂಡ್ಗೆ ಭೇಟಿ ಕೊಡುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಪಾರ್ಕ್ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸ್ ಮಾಡಲಾಗುವುದು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹ ಸೂಚಿಸಲಾಗುವುದು. ಇದಲ್ಲದೆ, ಇವೆಲ್ಲಾ ಮಾಹಿತಿಯನ್ನು ಟಿಕೆಟ್ನ ಹಿಂದೆ ಸಹ ನಮೂದಿಸಲಾಗುವುದು ಎಂದು ಪಾರ್ಕ್ನ ಆಡಳಿತ ಮಂಡಳಿ ತಿಳಿಸಿದೆ.
Published On - 1:10 pm, Wed, 1 July 20