ವಾಷಿಂಗ್ಟನ್: ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ರಷ್ಯಾ ಸೇನೆಯಲ್ಲಿ (Russia Ukraine War) ಜೀವಹಾನಿ ಆಘಾತಕಾರಿ ಮಟ್ಟಕ್ಕೆ ತಲುಪಿದೆ ಎಂದು ಅಮೆರಿಕ ಸೇನೆಯ (American Military) ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಫೆಬ್ರುವರಿಯಿಂದ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಈವರೆಗೆ ರಷ್ಯಾ ಸೇನೆಯ ಸುಮಾರು 1 ಲಕ್ಷ ಸೈನಿಕರು ಮೃತಪಟ್ಟಿರಬಹುದು ಎಂದು ಅಂದಾಜಿಸಿದ್ದಾರೆ. ಉಕ್ರೇನ್ ಸೇನೆಯು ಹೆಚ್ಚೂ ಕಡಿಮೆ ಇಷ್ಟೇ ಪ್ರಮಾಣದ ಜೀವಹಾನಿ ಅನುಭವಿಸಿರಬಹುದು ಎಂದು ವಿಶ್ಲೇಷಿಸಲಾಗಿದೆ.
‘ಸುಮಾರು 1 ಲಕ್ಷ ರಷ್ಯಾ ಯೋಧರು ಸತ್ತಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ಉಕ್ರೇನ್ ಪಾಳಯದಲ್ಲಿಯೇ ಇಷ್ಟೇ ನಷ್ಟಗಳಾಗಿವೆ. ಲೆಕ್ಕವಿಲ್ಲದಷ್ಟು ನಾಗರಿಕರು ಕಷ್ಟ-ನಷ್ಟ ಅನುಭವಿಸಿದ್ದಾರೆ ಎಂದು ಅಮೆರಿಕ ಸೇನೆಯ ಜನರಲ್ ಮಾರ್ಕ್ ಮಿಲೆ ನ್ಯೂಯಾರ್ಕ್ನ ಎಕನಾಮಿಕ್ ಕ್ಲಬ್ ಸಂವಾದದಲ್ಲಿ ಹೇಳಿದ್ದಾರೆ. ಕಳೆದ 8 ತಿಂಗಳುಗಳಿಂದ ರಷ್ಯಾ-ಉಕ್ರೇನ್ ಸಂಘರ್ಷ ನಡೆಯುತ್ತಿದ್ದು, ಈವರೆಗೆ ಸುಮಾರು 40,000 ಉಕ್ರೇನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು. ಈ ಲೆಕ್ಕಾಚಾರಂತೆ ಈ ಸಂಘರ್ಷದಿಂದ ಮೃತಪಟ್ಟವರ ಒಟ್ಟು ಸಂಖ್ಯೆಯು ಸುಮಾರು 2.40 ಲಕ್ಷವಾಗುತ್ತದೆ. ಇದು ಈವರೆಗೆ ಬಿಡುಗಡೆಯಾಗಿರುವ ಜೀವಹಾನಿ ಅಂಕಿಅಂಶಗಳಲ್ಲಿಯೇ ಅತ್ಯಂತ ಹೆಚ್ಚು.
ಇಷ್ಟು ಜೀವಹಾನಿಯ ನಂತರವೂ ಉಕ್ರೇನ್ ದಾಳಿಯಿಂದ ಏನು ಸಾಧಿಸಬೇಕಿತ್ತೋ ಅದನ್ನು ಸಾಧಿಸಲು ರಷ್ಯಾಕ್ಕೆ ಸಾಧ್ಯವಾಗಿಲ್ಲ. ಇನ್ನೂ ಎಷ್ಟು ದಿನ ಈ ಆಕ್ರಮಣವನ್ನು ಮುಂದುವರಿಸಲು ಸಾಧ್ಯ ಎನ್ನುವ ಬಗ್ಗೆ ಗೊಂದಲಗಳಿವೆ ಎಂದು ಅಮೆರಿಕ ಸೇನಾಧಿಕಾರಿ ಹೇಳಿದ್ದಾರೆ. ನಿನ್ನೆಯಷ್ಟೇ (ನ 9) ರಷ್ಯಾ ಸೇನೆಯು ಉಕ್ರೇನ್ನ ಪ್ರಮುಖ ನಗರ ಖೆರ್ಸೋನ್ನಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಘೋಷಿಸಿತ್ತು. ಇದು ಉಕ್ರೇನ್ ಯುದ್ಧದಲ್ಲಿ ರಷ್ಯಾಕ್ಕೆ ಆದ ದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗಿತ್ತು. ಉಕ್ರೇನ್ ಪಡೆಗಳು ಖಾರ್ಕಿವ್ ಉತ್ತರ ಪ್ರಾಂತ್ಯದಲ್ಲಿ ಮುನ್ನಡೆ ಸಾಧಿಸಿದ ಬಳಿಕ ನಡೆದ ಅತಿಪ್ರಮುಖ ಸೇನಾ ಬೆಳವಣಿಗೆ ಇದು ಎಂದು ವಿಶ್ಲೇಷಿಸಲಾಗಿತ್ತು.
ಕಳೆದ ಸೆಪ್ಟೆಂಬರ್ನಲ್ಲಿ ರಷ್ಯಾ ಪಡೆಗಳು ಖೆರ್ಸೊನ್ ನಗರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದವು. ಈ ಪ್ರದೇಶದಿಂದ ರಷ್ಯಾ ಸಂಪೂರ್ಣವಾಗಿ ಸೇನೆ ಹಿಂಪಡೆದರೆ ಸಾವಿರಾರು ಕಿಲೋಮೀಟರ್ ವಿಸ್ತೀರ್ಣದ ಪ್ರದೇಶದಿಂದ ರಷ್ಯಾ ಹಿಂದೆ ಸರಿದಂತೆ ಅಗುತ್ತದೆ. ಇದು ಉಕ್ರೇನ್ ಯುದ್ಧದಲ್ಲಿ ನಡೆದ ಪ್ರಮುಖ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.