ಪೋಲ್ಯಾಂಡ್ ಮತ್ತಿತರ ನ್ಯಾಟೋ ಒಕ್ಕೂಟದ ದೇಶಗಳು ಹಾಗೂ ಪೂರ್ವ ಯುರೋಪಿನ ರಾಷ್ಟ್ರಗಳ ಮೂಲಕ ಉಕ್ರೇನ್ಗೆ ಯುದ್ಧ ವಿಮಾನಗಳನ್ನು ಕಳಿಸಲು ವ್ಯವಸ್ಥೆ ಮಾಡಿ ಎಂದು ಯುಎಸ್ ಜನಪ್ರತಿನಿಧಿಗಳು ಅಧ್ಯಕ್ಷ ಜೋ ಬೈಡನ್ರನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ವೈಟ್ ಹೌಸ್, ಉಕ್ರೇನ್ಗೆ ಫೈಟರ್ ಏರ್ಕ್ರಾಫ್ಟ್ ಟ್ರಾನ್ಸ್ಫರ್ ಮಾಡಲು ನಮ್ಮ ವಿರೋಧವಿಲ್ಲ. ಆದರೆ ಅದನ್ನು ಅಲ್ಲಿಗೆ ಕಳಿಸಲು ಅಡ್ಡಿಯಾಗುವ ಸವಾಲುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಯುರೋಪಿಯನ್ ರಾಷ್ಟ್ರಗಳ ಜತೆ ವಿಡಿಯೋ ಕಾಲ್ನಲ್ಲಿ ಮಾತನಾಡಿ, ರಷ್ಯಾ ವಿರುದ್ಧ ಹೋರಾಟಕ್ಕೆ ನಮಗೂ ರಷ್ಯಾ ನಿರ್ಮಿತ ವಿಮಾನಗಳೇ ಸಿಗುವಂತೆ ಮಾಡಿ ಎಂದು ಹತಾಶ ಬೇಡಿಕೆ ಇಟ್ಟಿದ್ದರು. ಈ ವಿಡಿಯೋ ಕಾನ್ಫರೆನ್ಸ್ನಲ್ಲಿ ಯುಎಸ್ನ ಹಲವು ಪ್ರಮುಖ ಜನಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ಉಕ್ರೇನ್ ಅಧ್ಯಕ್ಷರ ಬೇಡಿಕೆಯ ಬೆನ್ನಲ್ಲೇ ಅವರು ತಮ್ಮ ಅಧ್ಯಕ್ಷರಿಗೆ ಒತ್ತಾಯ ಮಾಡುತ್ತಿದ್ದಾರೆ. ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್ಗೆ ಯುದ್ಧ ವಿಮಾನಗಳನ್ನು ಒದಗಿಸಲು ಒತ್ತಡ ತರುತ್ತಿದ್ದಾರೆ.
ಈ ಬಗ್ಗೆ ಯುಎಸ್ ರಾಜ್ಯ ಕಾರ್ಯದರ್ಶಿ ಅಂಟೋನಿ ಬ್ಲಿಂಕನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ಗೆ ಪತ್ರ ಬರೆದಿರುವ ಸೆನೆಟ್ ಫಾರಿನ್ ರಿಲೇಶನ್ಸ್ ಕಮಿಟಿ ಅಧ್ಯಕ್ಷ ಬಾಬ್ ಮೆನೆಂಡೆಜ್, ಪೂರ್ವ ಯುರೋಪ್ನ ಬಹುತೇಕ ದೇಶಗಳ ವಾಯುಪಡೆಗಳಲ್ಲಿ ಇರುವುದು ರಷ್ಯಾ ನಿರ್ಮಿತ ಯುದ್ಧವಿಮಾನಗಳು. ಅವುಗಳನ್ನು ಈಗ ಉಕ್ರೇನ್ಗೆ ವರ್ಗಾಯಿಸಿದರೆ ಆ ದೇಶಕ್ಕೆ ತುಂಬ ಸಹಾಯವಾಗುತ್ತದೆ. ಉಕ್ರೇನ್ ಸೇನೆಯಲ್ಲಿರುವ ಪೈಲಟ್ಗಳಿಗೆ ಹೆಚ್ಚುವರಿ ತರಬೇತಿ ಅಗತ್ಯವಿಲ್ಲದೆ, ಅವರು ವಿಮಾನ ಹಾರಿಸಬಹುದು ಎಂದು ಹೇಳಿದ್ದಾರೆ.
ಇದಕ್ಕೆ ವೈಟ್ ಹೌಸ್ನ ಮಾಧ್ಯಮ ಕಾರ್ಯದರ್ಶಿ ಜೆನ್ ಪ್ಸಾಕಿ ಪ್ರತಿಕ್ರಿಯೆ ನೀಡಿದ್ದು, ವಿಮಾನಗಳನ್ನು ಉಕ್ರೇನ್ಗೆ ಕಳಿಸಲು ನಮ್ಮ ತಕರಾರು ಏನೂ ಇಲ್ಲ. ಹಾಗೇ, ರಷ್ಯಾ ನಿರ್ಮಿತ ವಿಮಾನಗಳನ್ನು ಉಕ್ರೇನ್ಗೆ ನೀಡುವ ದೇಶಗಳಲ್ಲಿ ಯುಎಸ್ ನಿರ್ಮಿತ ಯುದ್ಧ ವಿಮಾನಗಳನ್ನು ಕಳಿಸುವುದಕ್ಕೆ ಖಂಡಿತ ಒಪ್ಪಿಗೆ ಇದೆ. ಆದರೆ ಹಾಗೇ, ಕಳಿಸುವುದು ಅಷ್ಟು ಸುಲಭವಲ್ಲ. ಈ ಬಗ್ಗೆ ಇನ್ನಷ್ಟು ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನು ಅಮೆರಿಕದಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಎರಡೂ ಪಕ್ಷಗಳ ಜನಪ್ರತಿನಿಧಿಗಳು ಈ ಒತ್ತಾಯ ಮುಂದಿಡುತ್ತಿದ್ದಾರೆ. ಯುರೋಪಿಯನ್ ರಾಷ್ಟ್ರಗಳು ಉಕ್ರೇನ್ಗೆ ರಷ್ಯಾದ MiGs ವಿಮಾನಗಳನ್ನು ಕಳಿಸಲಿ, ಹೀಗೆ ತಮ್ಮ ಬಳಿ ಇರುವ ರಷ್ಯಾ ವಿಮಾನಗಳನ್ನು ಉಕ್ರೇನ್ಗೆ ಕಳಿಸಿದ ರಾಷ್ಟ್ರಗಳಿಗೆ ವಾಷಿಂಗ್ಟನ್, ಯುಎಸ್ನ F-16s ವಿಮಾನಗಳನ್ನು ತ್ವರಿತವಾಗಿ ಕಳಿಸಬೇಕು ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ:ಇಂಡಿಯನ್ ಆರ್ಮಿಯಲ್ಲಿ ಸಿಗದ ಅವಕಾಶ; ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್ ಸೇನೆ ಸೇರಿದ ತಮಿಳುನಾಡು ಯುವಕ
Published On - 1:44 pm, Tue, 8 March 22