ರಷ್ಯಾದಿಂದ ಭಾರತ ತೈಲ ಖರೀದಿ ನಿಲ್ಲಿಸಿದೆ ಎಂದ ಡೊನಾಲ್ಡ್ ಟ್ರಂಪ್! ಇದು ನಿಜವೇ? ಇಲ್ಲಿದೆ ವಿವರ
ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧವನ್ನು ತಾನೇ ನಿಲ್ಲಿಸಿದ್ದು ಎಂದು ಈವರೆಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಹೊಸ ವರಸೆ ತೆಗೆದಿದ್ದಾರೆ. ತಮ್ಮಿಂದಾಗಿ ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದೆ ಎಂದು ಅವರು ಹೇಳಿದ್ದಾರೆ. ಆದರೆ ರಷ್ಯಾದಿಂದ ತೈಲ ಆಮದು ಸ್ಥಗಿತಗೊಳಿಸಿರುವ ಬಗ್ಗೆ ಭಾರತ ಸರ್ಕಾರ ಅಧಿಕೃತ ಹೇಳಿಕೆ ನೀಡಿಲ್ಲ.

ಅಲಾಸ್ಕಾ, ಆಗಸ್ಟ್ 16: ಅಮೆರಿಕದ ಸುಂಕ ನೀತಿಯಿಂದಾಗಿ ಭಾರತವು (India) ರಷ್ಯಾದಿಂದ (Russia) ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೊಂಡಿದ್ದಾರೆ. ಆದರೆ, ಭಾರತ ಸರ್ಕಾರ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಇದರೊಂದಿಗೆ, ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧವನ್ನು ತಾನೇ ನಿಲ್ಲಿಸಿದ್ದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಲೇ ಇರುವ ಟ್ರಂಪ್ ಇದೀಗ ಮತ್ತೊಂದು ಸುಳ್ಳು ಹೇಳುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಅಲಾಸ್ಕಾದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭೇಟಿಯ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಪುಟಿನ್ ಅವರೊಂದಿಗಿನ ಅವರ ಸಂಭಾಷಣೆಯು ಮುಖ್ಯವಾಗಿ ಉಕ್ರೇನ್ ಬಗ್ಗೆ ಕೇಂದ್ರೀಕರಿಸಿತ್ತು.
ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ರಷ್ಯಾ ತನ್ನ ದೊಡ್ಡ ತೈಲ ಗ್ರಾಹಕರನ್ನು ಕಳೆದುಕೊಂಡಿದೆ. ಭಾರತವು ತನ್ನ ಒಟ್ಟು ತೈಲ ವ್ಯಾಪಾರದ ಸುಮಾರು ಶೇ 40 ರಷ್ಟನ್ನು ರಷ್ಯಾದೊಂದಿಗೆ ಮಾಡುತ್ತಿತ್ತು. ಅಮೆರಿಕ ಹೆಚ್ಚಿನ ಸುಂಕ ವಿಧಿಸಿದ್ದರಿಂದ ಭಾರತವು ರಷ್ಯಾದೊಂದಿಗಿನ ತೈಲ ವ್ಯವಹಾರ ಸ್ಥಗಿತಗೊಳಿಸಿದೆ. ಈಗ ಭಾರತದ ಮೇಲೆ ಇನ್ನಷ್ಟು ಸುಂಕ ವಿಧಿಸಿದರೆ ಅದು ರಷ್ಯಾಕ್ಕೆ ಅತ್ಯಂತ ಹಾನಿಕಾರಕವಾಗಲಿದೆ ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.
ಇದಕ್ಕೂ ಮೊದಲು, ಟ್ರಂಪ್ ಮತ್ತು ಪುಟಿನ್ ಅಲಾಸ್ಕಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಇಬ್ಬರೂ ಕೇವಲ 12 ನಿಮಿಷಗಳ ಕಾಲ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಮಯದಲ್ಲಿ, ಉಭಯ ನಾಯಕರು ಅಭಿಪ್ರಾಯಗಳನ್ನು ಮಾತ್ರ ವ್ಯಕ್ತಪಡಿಸಿದರು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.
ಆಗಸ್ಟ್ 6 ರಂದು ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸಿತ್ತು. ರಷ್ಯಾದೊಂದಿಗೆ ಭಾರತ ಮಾಡುತ್ತಿರುವ ವ್ಯವಹಾರಕ್ಕೆ ಅಡ್ಡಿಪಡಿಸುವ, ಮುಖ್ಯವಾಗಿ ರಷ್ಯಾದಿಂದ ತೈಲ ಆಮದು ಸ್ಥಗಿತಗೊಳಿಸುವಂತೆ ಮಾಡುವುದಕ್ಕಾಗಿ ಅಮೆರಿಕ ಈ ಕ್ರಮ ಕೈಗೊಂಡಿದೆ ಎನ್ನಲಾಗಿತ್ತು.
ಆರ್ಥಿಕ ಬೆದರಿಕೆಗಳಿಗೆ ಜಗ್ಗಲ್ಲವೆಂದ ಪ್ರಧಾನಿ ಮೋದಿ
ಅಮೆರಿಕದ ಸುಂಕ ವಿಧಿಸುವ ನಡೆಯನ್ನು ಭಾರತ ಖಂಡಿಸಿತ್ತು. ಆದಾಗ್ಯೂ, ಆರ್ಥಿಕವಾಗಿ ಒತ್ತಡ ಹೇರುವ ತಂತ್ರಗಳಿಗೆ, ಬೆದರಿಕೆಗಳಿಗೆ ಭಾರತ ಬಗ್ಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಖಡಕ್ ಸಂದೇಶ ರವಾನಿಸಿದ್ದರು.
ಇದನ್ನೂ ಓದಿ: ಅಮೆರಿಕ – ರಷ್ಯಾ ಮಧ್ಯೆ ಮೂಡದ ಒಮ್ಮತ: ಭಾರತಕ್ಕೆ ಮತ್ತಷ್ಟು ತೆರಿಗೆ ಬರೆ ಎಳೆಯುತ್ತಾರಾ ಟ್ರಂಪ್?
ಸದ್ಯ, ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಣ ಮಾತುಕತೆ ವಿಫಲವಾಗಿದ್ದು, ಅಮೆರಿಕವು ಭಾರತದ ಮೇಲೇ ಇನ್ನಷ್ಟು ಸುಂಕ ವಿಧಿಸುತ್ತದೆಯೇ ಎಂಬ ಸಂದೇಹ ಮೂಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




