ರಷ್ಯಾ – ಉಕ್ರೇನ್ ಮಧ್ಯೆ ಕದನ ವಿರಾಮ ಅಲ್ಲ, ಶೀಘ್ರದಲ್ಲೇ ಶಾಶ್ವತ ಶಾಂತಿ ಒಪ್ಪಂದ: ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ!
ಅಲಾಸ್ಕಾದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಮಾತುಕತೆಯ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಶ್ವತ ಶಾಂತಿ ಒಪ್ಪಂದದ ಸಾಧ್ಯತೆ ಇದೆ ಎಂದು ಘೋಷಿಸಿದ್ದಾರೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗಿನ ಮುಂದಿನ ಮಾತುಕತೆಯು ಈ ಒಪ್ಪಂದವನ್ನು ಅಂತಿಮಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.

ಅಲಾಸ್ಕಾ, ಆಗಸ್ಟ್ 16: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ದ್ವಿಪಕ್ಷೀಯ ಮಾತುಕತೆಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಹತ್ವದ ಘೋಷಣೆ ಮಾಡಿದ್ದಾರೆ. ಪುಟಿನ್ ಜತೆಗಿನ ಮಾತುಕತೆ ಅತ್ಯಂತ ಚೆನ್ನಾಗಿ ನಡೆದಿದೆ. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಕದನ ವಿರಾಮ ಅಲ್ಲ, ಶಾಶ್ವತ ಶಾಂತಿ ಒಪ್ಪಂದ ಏರ್ಪಡಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕವೂ ಟ್ರಂಪ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹ ಅಮೆರಿಕಕ್ಕೆ ಬರಲಿದ್ದು, ಅವರ ಜತೆಗೂ ಮಾತುಕತೆ ನಡೆಯಲಿದೆ. ನಂತರದಲ್ಲಿ ಒಪ್ಪಂದ ಏರ್ಪಡಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
‘‘ಅಲಾಸ್ಕಾದಲ್ಲಿ ಒಂದು ಅದ್ಭುತ ಮತ್ತು ಅತ್ಯಂತ ಯಶಸ್ವಿ ದಿನ! ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಭೆ ತುಂಬಾ ಚೆನ್ನಾಗಿ ನಡೆಯಿತು, ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ನ್ಯಾಟೋದ (NATO) ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಯುರೋಪಿಯನ್ ನಾಯಕರೊಂದಿಗೆ ತಡರಾತ್ರಿಯ ಫೋನ್ ಕರೆಯೂ ನಡೆಯಿತು. ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧ ಕೊನೆಗೊಳಿಸಲು ನೇರವಾಗಿ ಶಾಂತಿ ಒಪ್ಪಂದ ಮಾಡಿಕೊಳ್ಳುವುದೇ ಉತ್ತಮ ಮಾರ್ಗವೆಂದು ಎಲ್ಲರೂ ನಿರ್ಧರಿಸಿದ್ದಾರೆ. ಇದರಿಂದ ಯುದ್ಧ ಕೊನೆಯಾಗಲಿದೆ. ಇದು ಕೇವಲ ಕದನ ವಿರಾಮ ಒಪ್ಪಂದವಲ್ಲ, ಶಾಶ್ವತ ಶಾಂತಿ ಒಪ್ಪಂದ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸೋಮವಾರ ಮಧ್ಯಾಹ್ನ ವಾಷಿಂಗ್ಟನ್ ಡಿಸಿ, ಓವಲ್ ಕಚೇರಿಗೆ ಬರಲಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ನಾವು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಸಭೆ ನಿಗದಿಪಡಿಸುತ್ತೇವೆ. ಇದು ಲಕ್ಷಾಂತರ ಜನರ ಜೀವಗಳನ್ನು ಉಳಿಸುವ ಸಾಧ್ಯತೆಯಿದೆ’’ ಎಂದು ಎಕ್ಸ್ ಸಂದೇಶದಲ್ಲಿ ಟ್ರಂಪ್ ಉಲ್ಲೇಖಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಸಂದೇಶ
US President Donald Trump posts, “A great and very successful day in Alaska! The meeting with President Vladimir Putin of Russia went very well, as did a late-night phone call with President Zelenskyy of Ukraine, and various European Leaders, including the highly respected… pic.twitter.com/05eOoaql1o
— Press Trust of India (@PTI_News) August 16, 2025
ಇದರೊದಿಗೆ, ರಷ್ಯಾ ಹಾಗೂ ಉಕ್ರೇನ್ ನಡುವಣ ವರ್ಷಗಳ ಯುದ್ಧ ಕೊನೆಯಾಗುವ ಸಾಧ್ಯತೆ ಗೋಚರಿಸಿದೆ. ಆದಾಗ್ಯೂ, ಈ ಹೇಳಿಕೆ ಬಿಡುಗಡೆ ಮಾಡುವ ಕೆಲವೇ ಕ್ಷಣಗಳ ಮುನ್ನ ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಟ್ರಂಪ್, ಉಕ್ರೇನ್ ಯದ್ಧವು ಪ್ರಾದೇಶಿಕ ವಿನಾಯಿತಿಗಳೊಂದಿಗೆ ಕೊನೆಗೊಳ್ಳಲಿದೆ. ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಭೂ ವಿನಿಮಯ ಒಪ್ಪಂದ ಏರ್ಪಡಲಿದೆ. ಅದೇ ರೀತಿ, ಉಕ್ರೇನ್ಗೆ ಅಮೆರಿಕವು ಸಂಭಾವ್ಯ ಭದ್ರತೆಯ ಖಾತರಿ ಒದಗಿಸುವ ಬಗ್ಗೆಯೂ ಚರ್ಚೆಯಾಗಿದೆ ಎಂದಿದ್ದರು.
ಇದನ್ನೂ ಓದಿ: ರಷ್ಯಾದಿಂದ ಭಾರತ ತೈಲ ಖರೀದಿ ನಿಲ್ಲಿಸಿದೆ ಎಂದ ಡೊನಾಲ್ಡ್ ಟ್ರಂಪ್! ಇದು ನಿಜವೇ? ಇಲ್ಲಿದೆ ವಿವರ
ಅಲ್ಲದೆ, ಈ ಒಪ್ಪಂದವು ವೊಲೊಡಿಮಿರ್ ಝೆಲೆನ್ಸ್ಕಿ ಜತೆಗಿನ ಮಾತುಕತೆಯ ನಂತರವೇ ಅಂತಿಮಗೊಳ್ಳಲಿದೆ. ಅವರು ನಮ್ಮ ಆಗ್ರಹಕ್ಕೆ ಒಪ್ಪದೆ ಇರಲೂಬಹುದು. ಆದರೆ, ಉಕ್ರೇನ್ ಒಪ್ಪಂದಕ್ಕೆ ಒಪ್ಪಿಕೊಳ್ಳಬೇಕು ಎಂದು ಟ್ರಂಪ್ ಆಗ್ರಹಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಅಂತಿಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








