
ವಾಷಿಂಗ್ಟನ್, ಜನವರಿ 20: ಅಮೆರಿಕ ಮತ್ತು ಫ್ರಾನ್ಸ್ ನಡುವಿನ ರಾಜಕೀಯ ಮತ್ತು ರಾಜತಾಂತ್ರಿಕ ಉದ್ವಿಗ್ನತೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಫ್ರಾನ್ಸ್ಗೆ ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ ಶೇ.200ರಷ್ಟು ಸುಂಕ ವಿಧಿಸುವ ಕುರಿತು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಗಾಜಾ ಶಾಂತಿ ಮಂಡಳಿಗೆ ಸೇರಲು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರನ್ ನಿರಾಕರಿಸಿದ್ದಕ್ಕೆ, ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ.
ಯುದ್ಧಪೀಡಿತ ಪ್ರದೇಶಗಳಲ್ಲಿ, ವಿಶೇಷವಾಗಿ ಗಾಜಾದಲ್ಲಿ ಪುನರ್ನಿರ್ಮಾಣ ಮತ್ತು ಶಾಂತಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವುದು ಶಾಂತಿ ಮಂಡಳಿಯ ಉದ್ದೇಶವಾಗಿದೆ ಎಂದು ಟ್ರಂಪ್ ಆಡಳಿತ ಹೇಳಿಕೊಂಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ನಾನು ಅವರ ವೈನ್ ಮತ್ತು ಷಾಂಪೇನ್ ಮೇಲೆ ಶೇ.200 ಸುಂಕ ವಿಧಿಸುತ್ತೇನೆ. ಅವರಾಗಿಯೇ ಮಂಡಳಿಗೆ ಸೇರುತ್ತಾರೆ ಅವರನ್ನು ನಾನು ಬಲವಂತಪಡಿಸುವುದಿಲ್ಲ ಎಂದು ಹೇಳಿದರು. ಗಾಜಾದಲ್ಲಿ ಮಂಡಳಿಗೆ ಸೇರಲು ಅಮೆರಿಕದ ಆಹ್ವಾನವನ್ನು ಫ್ರಾನ್ಸ್ ತಿರಸ್ಕರಿಸಿದರೆ, ಸುಂಕದ ರೂಪದಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆಯು ಅಮೆರಿಕ ಮತ್ತು ಫ್ರಾನ್ಸ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಬಹುದು, ಏಕೆಂದರೆ ಎರಡೂ ದೇಶಗಳು ಈಗಾಗಲೇ ಗ್ರೀನ್‌ಲ್ಯಾಂಡ್ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿವೆ.
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾರ್ವೆ ಪ್ರಧಾನಿ ಜೊನಾಸ್ ಗಹರ್ ಅವರಿಗೆ ವೈಯಕ್ತಿಕವಾಗಿ ಕಳುಹಿಸಿದ ಪತ್ರದಲ್ಲಿ ನೊಬೆಲ್ ಪ್ರಶಸ್ತಿ ಸಿಗದಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: ಶಾಂತಿ ಪುರಸ್ಕಾರ ಇಲ್ಲ, ಶಾಂತಿ ನನ್ನ ಜವಾಬ್ದಾರಿಯಲ್ಲ ಎನ್ನುತ್ತಾ ಗಾಜಾ ಶಾಂತಿ ಮಂಡಳಿ ತೆರೆದ ಟ್ರಂಪ್, 2 ದಿನಗಳಲ್ಲಿ ಕೊಟ್ಟ ಹೇಳಿಕೆಗಳೇನು?
ಅದರಲ್ಲಿ ನನಗೆ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿಲ್ಲ, ಹಾಗಾಗಿ ಶಾಂತಿ ಜವಾಬ್ದಾರಿ ನನ್ನದಲ್ಲ, ಗ್ರೀನ್ ಲ್ಯಾಂಡ್ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಸಬಹುದು ಎನ್ನುವ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಫ್ರಾನ್ಸ್, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಪ್ಯಾರಿಸ್ ಒತ್ತಿ ಹೇಳಿದೆ.
ಗಾಜಾ ಪುನರ್ನಿರ್ಮಾಣಕ್ಕಾಗಿ ಶಾಂತಿ ಮಂಡಳಿಯನ್ನು ಘೋಷಿಸಿದರು ಮತ್ತು ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳನ್ನು ಸೇರಲು ಆಹ್ವಾನಿಸಿದರು. ಈ ಆಹ್ವಾನವನ್ನು ಜಾಗತಿಕವಾಗಿ ಹೆಚ್ಚು ಉತ್ಸಾಹದಿಂದ ಸ್ವೀಕರಿಸಲಾಗಿಲ್ಲ. ಹೆಚ್ಚಿನ ದೇಶಗಳು ಮೌನವಾಗಿವೆ, ಆದರೆ ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ಕೆಲವು ಭಾಗವಹಿಸಲು ನಿರಾಕರಿಸಿವೆ.
ಈ ಶಾಂತಿ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ದೇಶಗಳು 1 ಬಿಲಿಯನ್ ಡಾಲರ್ ಅಂದರೆ ಸರಿಸುಮಾರು ಒಂಬತ್ತು ಸಾವಿರ ಕೋಟಿ ರೂ. ಪಾವತಿಸಬೇಕಾಗುತ್ತದೆ.
ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ