ಅಮೆರಿಕ: ಏರ್​ ಶೋ ವೇಳೆ 2ನೇ ವಿಶ್ವಯುದ್ಧ ಕಾಲದ ವಿಮಾನಗಳು ಪರಸ್ಪರ ಡಿಕ್ಕಿ: ಮೂವರ ಸಾವು

ಅಮೆರಿಕದ ಟೆಕ್ಸಾಸ್​ ನಗರದ ಬಳಿ ನಡೆದ ವಿಮಾನಗಳ ವೈಮಾನಿಕ ಪ್ರದರ್ಶನದ ವೇಳೆ 2ನೇ ವಿಶ್ವಯುದ್ಧ ಕಾಲದ ವಿಮಾನಗಳು ಪರಸ್ಪರ ಡಿಕ್ಕಿಯಾಗಿವೆ. ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಅಮೆರಿಕ: ಏರ್​ ಶೋ ವೇಳೆ 2ನೇ ವಿಶ್ವಯುದ್ಧ ಕಾಲದ ವಿಮಾನಗಳು ಪರಸ್ಪರ ಡಿಕ್ಕಿ: ಮೂವರ ಸಾವು
ಏರ್​ ಶೋ ವೇಳೆ 2ನೇ ವಿಶ್ವಯುದ್ಧ ಕಾಲದ ವಿಮಾನಗಳು ಪರಸ್ಪರ ಡಿಕ್ಕಿ
Updated By: ಆಯೇಷಾ ಬಾನು

Updated on: Nov 13, 2022 | 7:44 AM

ಎರಡನೇ ವಿಶ್ವಯುದ್ಧದ ಸ್ಮರಣಾರ್ಥಕವಾಗಿ ಶನಿವಾರ(ನ.12) ನಡೆದ ವೈಮಾನಿಕ ಪ್ರದರ್ಶನದಲ್ಲಿ 2ನೇ ವಿಶ್ವಯುದ್ಧ ಕಾಲದ ಎರಡು ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ಘಟನೆ ಅಮೆರಿಕದ ಟೆಕ್ಸಾಸ್​ ನಗರದ ಬಳಿ ನಡೆದಿದೆ. ಹಾಗೂ ಇನ್ನೊಂದೆಡೆ ಇನ್ನೂ ಕೆಲ ಸಿಬ್ಬಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಬಾಂಬರ್ ಮತ್ತು ಬೆಲ್ ಪಿ-63 ಕಿಂಗ್‌ಕೋಬ್ರಾ ಎಂಬ ಎರಡನೇ ವಿಶ್ವಯುದ್ಧ ಕಾಲದ ಎರಡು ಯುದ್ಧವಿಮಾನಗಳು ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್‌ಪೋರ್ಟ್‌ನಲ್ಲಿ ನಡೆದ ಏರ್‌ಶೋನಲ್ಲಿ ಭಾಗಿಯಾಗಿದ್ದವು. ಆದ್ರೆ ಮಧ್ಯಾಹ್ನ ಸುಮಾರಿಗೆ ಪ್ರದರ್ಶನದ ವೇಳೆ ಎರಡೂ ಯುದ್ಧವಿಮಾನಗಳ ವಿಂಗ್ಸ್ ತಗುಲಿ ಅವಘಡ ಸಂಭವಿಸಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತಿಳಿಸಿದೆ.

ಘಟನೆ ಬಳಿಕ ತುರ್ತು ಘಟಕ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು ಘಟನೆ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರ ಮೃತ ದೇಹ ಪತ್ತೆಯಾಗಿರುವ ಮಾಹಿತಿ ಸಿಕ್ಕಿದ್ದು ಇನ್ನಷ್ಟು ಸಿಬ್ಬಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಲಾದ ವಿಡಿಯೋದಲ್ಲಿ B-17 ಬಾಂಬರ್ ಯುದ್ಧ ವಿಮಾನ ನೆಲದಿಂದ ನೇರವಾಗಿ ಆಕಾಶದೆತ್ತರಕ್ಕೆ ಹಾರುತ್ತಿದ್ದು ಮತ್ತೊಂದೆಡೆಯಿಂದ P-63 ಕಿಂಗ್‌ಕೋಬ್ರಾ ಯುದ್ಧ ವಿಮಾನ ಎಡದಿಂದ ಹಾರಿ ಬಂದಿದೆ. ಬಳಿಕ ಎರಡೂ ವಿಮಾನಗಳ ನಡುವೆ ಪರಸ್ಪರ ಘರ್ಷಣೆಯಾಗಿದ್ದು ಏರ್​ ಶೋನಲ್ಲಿ ನೆರೆದಿದ್ದ ಮಂದಿ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ನೋಡು ನೋಡುತ್ತಿದ್ದಂತೆಯೇ ವಿಮಾನಗಳ ನಡುವೆ ಅಪಘಾತವಾಗಿದ್ದು ನೋಡುಗರು ಶಾಕ್ ಆಗಿದ್ದಾರೆ. ಇನ್ನು ಯುದ್ಧವಿಮಾನ ಅವಘಡಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.

ಎರಡನೇ ವಿಶ್ವ ಯುದ್ಧ ಸಮಯದ ಚಿಕ್ಕ ವಿಮಾನ P-63 ಕಿಂಗ್‌ಕೋಬ್ರಾವು B-17 ವಿಮಾನದ ಮೇಲೆ ಅಪ್ಪಳಿಸುತ್ತಿದ್ದಂತೆ ಎರಡು ವಿಮಾನಗಳು ಜ್ವಾಲೆಯಿಂದ ಆವರಿಸಿ ಛಿದ್ರವಾದವು. ಅಪಘಾತದ ಸದ್ದು ಕೇಳಿದ ಏರ್​ ಶೋಗೆ ಬಂದಿದ್ದ ಕೆಲ ಮಂದಿ ಹೊರಗೆ ದೌಡಾಯಿಸಿದರು. ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ದುರಂತದ ಬಗ್ಗೆ ಜನರು ದುಃಖ ವ್ಯಕ್ತಪಡಿಸಿದ್ದಾರೆ.

Published On - 7:44 am, Sun, 13 November 22