ಯುನೈಟೆಡ್ ಕಿಂಗ್ಡಮ್ ನ ವಿದೇಶಾಂಗ ಕಚೇರಿ ಮಂತ್ರಿ ಲಾರ್ಡ್ ಜಕ್ ಗೊಲ್ಡ್ಸ್ಮಿತ್ (Lord Zak Goldsmith) ಅವರು ಪಾಕಿಸ್ತಾನದ ಪದಚ್ಯುತ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan) ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿ ಆ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಖೇದ ವ್ಯಕ್ತಪಡಿಸಿದ ನಂತರ ಬ್ರಿಟನ್ ಸರ್ಕಾರವು (UK government) ಗೋಲ್ಡ್ಸ್ಮಿತ್ ಅವರ ಅನಿಸಿಕೆ ಸರ್ಕಾರದ ನಿಲುವನ್ನು ಬಿಂಬಿಸುವುದಿಲ್ಲ ಎಂದು ಹೇಳಿ ಆವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.
‘ಕಳೆದ ರಾತ್ರಿ ಪಾಕಿಸ್ತಾನದ ವಿದ್ಯಮಾನಗಳನ್ನು ಕಂಡು ದುಃಖವಾಯಿತು. ಇಮ್ರಾನ್ ಖಾನ್ ಒಬ್ಬ ಒಳ್ಳೆಯ ಮತ್ತು ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ವಿಶ್ವ ರಾಜಕಾರಣದ ಹಿನ್ನೆಲೆಯಿದ ನೋಡಿದ್ದೇಯಾದರೆ, ಅತಿ ಕಡಿಮೆ ಭ್ರಷ್ಟ ರಾಜಕಾರಣಿಗಳಲ್ಲಿ ಅವರೊಬ್ಬರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರು ಸ್ಪಷ್ಟ ಬಹುಮತದೊಂದಿಗೆ ಪುನಃ ಅಧಿಕಾರಕ್ಕೆ ಬರಲಿದ್ದಾರೆ ಅನ್ನೋದರಲ್ಲಿ ನನಗೆ ಅನುಮಾನವೇ ಇಲ್ಲ,’ ಅಂತ ಅವರು ಟ್ವೀಟ್ ಮಾಡಿರುವುದನ್ನು ನ್ಯೂಸ್ ಇಂಟರ್ ನ್ಯಾಶನಲ್ ವರದಿ ಮಾಡಿದೆ.
Sad to see last night’s events in Pakistan.
Imran Khan is a good and decent man, one of the least corruptible politicians on the world stage.
I have no doubt he will be returned with a big majority in the upcoming elections.— Zac Goldsmith (@ZacGoldsmith) April 10, 2022
ಇಮ್ರಾನ್ ಖಾನ್ ಅವರ ಮೊದಲ ಪತ್ನಿ ಜೆಮಿಮಾ ಗೋಲ್ಡ್ಸ್ಮಿತ್ ಅವರ ಕಿರಿಯ ಸಹೋದರನಾಗಿರುವ ಲಾರ್ಡ್ ಜಕ್ ಗೋಲ್ಡ್ ಸ್ಮಿತ್ ಅವರು ಪಾಕಿಸ್ತಾನದಲ್ಲಿ ಸಂಭವಿಸಿದ ಘಟನೆಗಳಿಂದ ತನಗೆ ಬಹಳ ಬೇಸರವಾಗಿದೆ ಎಂದು ಹೇಳಿದ್ದಾರೆ.
ಪೆಸಿಫಿಕ್ ಮತ್ತು ಅಂತರಾಷ್ಟ್ರೀಯ ಪರಿಸರದ ವಿದೇಶಾಂಗ ಕಚೇರಿ ಸಚಿವರಾಗಿರುವ ಲಾರ್ಡ್ ಗೋಲ್ಡ್ ಸ್ಮಿತ್ ಅವರು ಸರ್ಕಾರದ ಪರವಾಗಿ ಮಾತನಾಡುತ್ತಿದ್ದಾರೆಯೇ ಎಂದು ಡೌನಿಂಗ್ ಸ್ಟ್ರೀಟ್ ಅನ್ನು ಕೇಳಲಾಗಿತ್ತು. ಗೋಲ್ಡ್ಸ್ಮಿತ್ ಅವರ ಟ್ವೀಟ್ ಕುರಿತ ಪ್ರಶ್ನೆಗೆ ಉತ್ತರಿಸಿದ ವಕ್ತಾರರೊಬ್ಬರು, ‘ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ನಾವು ಆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುತ್ತೇವೆಯೇ ಹೊರತು ಅದರ ಆಂತರಿಕ ರಾಜಕೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನಾವು ಪಾಕಿಸ್ತಾನದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದೇವೆ ಮತ್ತು ಅಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆಜ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಪಾಕಿಸ್ತಾನದ ರಾಜಕೀಯ ವ್ಯವಸ್ಥೆಯನ್ನು ನಾವು ಗೌವವಿಸುತ್ತೇವೆ, ಆದರೆ ಅಲ್ಲಿನ ರಾಜಕೀಯ ವ್ಯವಹಾರಗಳಲ್ಲಿ ನಾವು ತಲೆ ಹಾಕಲ್ಲ,’ ಎಂದು ಯುನೈಟೆಡ್ ಕಿಂಗ್ ಡಮ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಅವರ ಉಪ ವಕ್ತಾರ ಹೇಳಿದ್ದಾರೆ.
ಜಕ್ ಮತ್ತು ಜೆಮಿಮಾ ಗೋಲ್ಡ್ ಸ್ಮಿತ್ ಅವರ ಇನ್ನೊಬ್ಬ ಸಹೋದರ ಬೆನ್ ಗೋಲ್ಡ್ಸ್ಮಿತ್ ಸಹ ಟ್ವೀಟ್ ಮೂಲಕ ಇಮ್ರಾನ್ ಖಾನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
‘ನನ್ನ ಭಾವ ಇಮ್ರಾನ್ ಖಾನ್ ಒಬ್ಬ ಸಭ್ಯ ಮತ್ತು ಆದರಣೀಯ ವ್ಯಕ್ತಿಯಾಗಿದ್ದಾರೆ. ದೇಶಕ್ಕಾಗಿ ಒಳ್ಳೆಯದನ್ನು ಮಾಡಬೇಕೆನ್ನುವ ಉತ್ಕಟ ಆಸೆಯೇ ಅವರ ಪ್ರೇರೇಪಣೆಯಾಗಿತ್ತು. ಒಬ್ಬ ಪ್ರಧಾನ ಮಂತ್ರಿಯಾಗಿ ಅವರ ಸಾಧನೆ ಆಸಾಧಾರಣ ಮಟ್ಟದ್ದು. ನಮ್ಮ ಜಮಾನಾದ ಅತಿದೊಡ್ಡ ಸಮಸ್ಯೆಯಾಗಿರುವ ಪರಿಸರದ ಹಿನ್ನೆಲೆಯಿಂದ ನೋಡಿದ್ದೇಯಾದರೆ ಅವರ ಪ್ರಯತ್ನಗಳಿಂದಾಗಿ ಪಾಕಿಸ್ತಾನ ಇಂದು ವಿಶ್ವನಾಯಕ ಎನಿಸಿಕೊಂಡಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಜಕ್ ಅವರ ಟ್ವೀಟ್ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂಬ ಅರೋಪದ ಹಿನ್ನಲೆಯಲ್ಲಿ ಅದನ್ನು ಡಿಲೀಟ್ ಮಾಡಲಾಗಿದೆ. ನ್ಯೂಸ್ ಇಂಟರ್ ನ್ಯಾಶನಲ್ ವರದಿಯ ಪ್ರಕಾರ ಟ್ವೀಟ್ ಅನ್ನು ಅಳಿಸುವಂತೆ ಯುಕೆ ಸರ್ಕಾರ ಜಕ್ ಗೋಲ್ಡ್ಸ್ಮಿತ್ ಅವರ ಮೇಲೆ ಒತ್ತಡ ಹೇರಿತ್ತು.
ಇದನ್ನೂ ಓದಿ: ಹೊಸ ಸರ್ಕಾರ ಬರುತ್ತದೆ ಎಂಬ ಭಯದಿಂದ ದೇಶ ಬಿಟ್ಟು ದುಬೈಗೆ ಪರಾರಿಯಾದ ಇಮ್ರಾನ್ ಖಾನ್ ಮೂರನೇ ಪತ್ನಿಯ ಸೇಹಿತೆ