ಹೊಸ ಸರ್ಕಾರ ಬರುತ್ತದೆ ಎಂಬ ಭಯದಿಂದ ದೇಶ ಬಿಟ್ಟು ದುಬೈಗೆ ಪರಾರಿಯಾದ ಇಮ್ರಾನ್ ಖಾನ್ ಮೂರನೇ ಪತ್ನಿಯ ಸೇಹಿತೆ
ಇಮ್ರಾನ್ ಖಾನ್ ತನ್ನ ಆಪ್ತರಿಂದ ನೆರವು, ಸಹಕಾರ ಬಯಸುತ್ತಿದ್ದಾರೆ. ಸಹಾಯ ಮಾಡಿ ಎಂದು ಬಾಯ್ಬಿಟ್ಟು ಕೇಳುತ್ತಿದ್ದಾರೆ. ಆದರೆ ಅವರ ಆಪ್ತವಲಯದವರೆಲ್ಲ ಒಬ್ಬೊಬ್ಬರಾಗಿ ಪಾಕಿಸ್ತಾನ ತೊರೆಯುತ್ತಿದ್ದಾರೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ರ ಮೂರನೇ ಪತ್ನಿ ಬುಶ್ರಾ ಬೀಬಿ ಅವರ ಆತ್ಮೀಯ ಸ್ನೇಹಿತೆಯೊಬ್ಬರು ಬಂಧನದ ಭೀತಿಯಿಂದ ದೇಶವನ್ನು ತೊರೆದು ಓಡಿಹೋಗಿದ್ದಾರೆ. ಈಕೆಯ ಪತಿಯಂತೂ ಈಗಾಗಲೇ ಯುಎಸ್ಗೆ ಹೋಗಿಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪತನವಾಗುವ ಸಾಧ್ಯತೆ ದಟ್ಟವಾಗಿದೆ. ಹಾಗೊಮ್ಮೆ ದೇಶದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬಂದರೆ ತನ್ನ ಬಂಧನವಾಗಬಹುದು ಎಂದು ಹೆದರಿ ಈ ದಂಪತಿ ದೇಶಬಿಟ್ಟಿದ್ದಾರೆ. ಅಂದಹಾಗೇ ಈಕೆಯ ಹೆಸರು ಫರಾಹ್ ಖಾನ್. ಬುಶ್ರಾ ಬೀಬಿಗೆ ಪರಮಾಪ್ತೆಯಾಗಿದ್ದ ಇವರು ಸರ್ಕಾರಿ ನೌಕರರ ವರ್ಗಾವಣೆ ವಿಚಾರದಲ್ಲಿ ಭಯಂಕರ ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ.
ಪಾಕಿಸ್ತಾನದಲ್ಲಿ ರಾಜಕೀಯ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗಿದೆ. ಸದ್ಯದ ಮಟ್ಟಿಗೆ ಇಮ್ರಾನ್ ಖಾನ್ ಸೇಫ್ ಆಗಿದ್ದಾರೆ. ಅವರ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿ, ಸಂಸತ್ತಿನ ಕಲಾಪವನ್ನು ಏಪ್ರಿಲ್ 25ರವರೆಗೆ ಮುಂದೂಡಿ ಉಪಸಭಾಪತಿ ಖಾಸಿಂ ಖಾನ್ ಸೂರಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಪಾಕಿಸ್ತಾನದ ಹಂಗಾಮಿ ಪ್ರಧಾನಿಯನ್ನಾಗಿ ಗುಲ್ಜಾರ್ ಅಹ್ಮದ್ರನ್ನು ನೇಮಕ ಮಾಡಲಾಗಿದೆ. ಅಷ್ಟೇ ಅಲ್ಲ ಇನ್ನು 90 ದಿನಗಳ ಒಳಗೆ ಚುನಾವಣೆ ನಡೆಸುವಂತೆಯೂ ಇಮ್ರಾನ್ ಖಾನ್ ಕರೆ ನೀಡಿದ್ದಾರೆ. ಇಷ್ಟೆಲ್ಲ ಆದರೂ ಮತ್ತೊಮ್ಮೆ ಇಮ್ರಾನ್ ಖಾನ್ ಅಧಿಕಾರಕ್ಕೆ ಏರುವ ಯಾವ ಲಕ್ಷಣಗಳೂ ಇಲ್ಲ. ಇದೇ ಹೊತ್ತಲ್ಲಿ ಇಮ್ರಾನ್ ಖಾನ್ ತನ್ನ ಆಪ್ತರಿಂದ ನೆರವು, ಸಹಕಾರ ಬಯಸುತ್ತಿದ್ದಾರೆ. ಸಹಾಯ ಮಾಡಿ ಎಂದು ಬಾಯ್ಬಿಟ್ಟು ಕೇಳುತ್ತಿದ್ದಾರೆ. ಆದರೆ ಅವರ ಆಪ್ತವಲಯದವರೆಲ್ಲ ಒಬ್ಬೊಬ್ಬರಾಗಿ ಪಾಕಿಸ್ತಾನ ತೊರೆಯುತ್ತಿದ್ದಾರೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇದೀಗ ದೇಶ ಬಿಟ್ಟು ದುಬೈಗೆ ಹೋಗಿರುವ ಫರಾಹ್ ಖಾನ್ ಇಮ್ರಾನ್ ಖಾನ್ ಪತ್ನಿಯ ಆಪ್ತೆ. ಆದರೆ ಇವಳು ಅದೆಷ್ಟೋ ಮಂದಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ಅವರ ಕೆಲಸ ಕೊಡಿಸುವ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದರು. ಅವರಿಂದ ಭರ್ಜರಿ ಹಣ ಪಡೆದು ಬೇಕಾದಲ್ಲಿ ವರ್ಗಾವಣೆ ಮಾಡಿಸಿಕೊಡುತ್ತಿದ್ದರು ಎಂಬುದು ಪಾಕ್ ಪ್ರತಿಪಕ್ಷಗಳ ಆರೋಪ. ಈಕೆ ಎಲ್ಲ ಹಗರಣಗಳು, ಭ್ರಷ್ಟಾಚಾರದ ತಾಯಿಯಿದ್ದಂತೆ ಎಂದು ಟೀಕಿಸಿವೆ. ಸುಮಾರು 6 ಬಿಲಿಯನ್ ಪಾಕಿಸ್ತಾನಿ ಹಣದ ಸ್ಕ್ಯಾಮ್ ಆರೋಪ ಈಕೆಯ ಮೇಲಿದೆ. ಹೀಗೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಫರಾಹ್ ಖಾನ್, ಒಂದೊಮ್ಮೆ ಪಾಕಿಸ್ತಾನದಲ್ಲಿ ಹೊಸ ಸರ್ಕಾರ ಬಂದರೆ ತಾನು ಅರೆಸ್ಟ್ ಆಗುತ್ತೇನೆ ಎಂದು ಮುನ್ನೆಚ್ಚರಿಕೆ ವಹಿಸಿ ಪರಾರಿಯಾಗಿದ್ದಾರೆ.
Published On - 9:55 am, Wed, 6 April 22