ಕೊರೊನಾ ಕಾಲದಲ್ಲಿ ಬ್ರಿಟನ್ ತಲುಪಲು ನಿಗದಿಪಡಿಸಲಾಗಿದ್ದ ಎಲ್ಲಾ ಟ್ರಾವೆಲ್ ಕಾರಿಡಾರ್ಗಳನ್ನು ಮುಂದಿನ ಸೋಮವಾರದಿಂದ ಬಂದ್ ಮಾಡಲಾಗುವುದು ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ಕೊರೊನಾ ಮಹಾಮಾರಿಯ ವಿವಿಧ ಪ್ರಭೇದಗಳು ವಿಶ್ವದೆಲ್ಲೆಡೆ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಮಾಹಿತಿ ನೀಡಿದ್ದಾರೆ.
ಇದೀಗ, ವಿದೇಶದಿಂದ ಬ್ರಿಟನ್ಗೆ ಆಗಮಿಸಲು ಇಚ್ಛಿಸುವವರು ವಿಮಾನ ಹತ್ತುವ ಮುನ್ನ ನೆಗೆಟಿವ್ ಕೊವಿಡ್ ವರದಿ ನೀಡಬೇಕು ಎಂಬ ನಿಯಮವನ್ನು ಜಾರಿಮಾಡಲಾಗಿದೆ. ಈ ಹೊಸ ನಿಯಮಗಳು ಫೆಬ್ರವರಿ 15ರವರೆಗೆ ಜಾರಿಯಲ್ಲಿ ಇರಲಿದೆ ಎಂದು ಬ್ರಿಟನ್ ಪ್ರಧಾನಿ ಜಾನ್ಸನ್ ತಿಳಿಸಿದ್ದಾರೆ. ಜೊತೆಗೆ ಇದೀಗ, ಇಂಗ್ಲೆಂಡ್ಗೆ ಆಗಮಿಸುವವರು ಕಡ್ಡಾಯವಾಗಿ 10 ದಿನ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಬೇಕು ಎಂದು ಹೇಳಲಾಗಿದೆ.
ಏನಿದು ಟ್ರಾವೆಲ್ ಕಾರಿಡಾರ್?
ಕಳೆದ ಕೆಲವು ತಿಂಗಳಿಂದ ಅತಿ ಕಡಿಮೆ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದ ದೇಶಗಳಿಂದ ಇಂಗ್ಲೆಂಡ್ಗೆ ಆಗಮಿಸುವವರಿಗೆ ಕ್ವಾರಂಟೈನ್ ನಿಯಮವನ್ನು ರದ್ದುಪಡಿಸಿ ಬ್ರಿಟನ್ ಸರ್ಕಾರ ಈ ಟ್ರಾವೆಲ್ ಕಾರಿಡಾರ್ ಎಂಬ ಯೋಜನೆಯನ್ನು ಜಾರಿಮಾಡಿತ್ತು. ಆದರೆ ಇದೀಗ, ಈ ಯೋಜನೆಯನ್ನು ಇಂಗ್ಲೆಂಡ್ ಸರ್ಕಾರ ವಾಪಸ್ ಪಡೆದಿದೆ.