ವಾಷಿಂಗ್ಟನ್: ರಷ್ಯಾ ದಾಳಿಯನ್ನು ಹಿಮ್ಮೆಟ್ಟಿಸಲು ಅವಿರತ ಪ್ರಯತ್ನಿಸುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡ್ಮಿರ್ ಝೆಲೆನ್ಸ್ಕಿ (Volodymyr Zelensky) ಅಮೆರಿಕದ ಸೆನೆಟ್ ಸದಸ್ಯರನ್ನು ಉದ್ದೇಶಿಸಿ ಶನಿವಾರ (ಫೆ.5) ಭಾಷಣ ಮಾಡಲಿದ್ದಾರೆ. ಉಕ್ರೇನ್ (Ukraine) ಸರ್ಕಾರದ ವಿನಂತಿಯ ಮೇಲೆ ನಡೆಯಲಿರುವ ಝೂಂ ಮೀಟಿಂಗ್ನಲ್ಲಿ ಈ ಸಂವಾದ ನಡೆಯಲಿದೆ. ಉಕ್ರೇನ್ನಲ್ಲಿ ಸಂಕಷ್ಟ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಕೆಲ ಜನಪ್ರತಿನಿಧಿಗಳು ಅಧ್ಯಕ್ಷ ಜೋ ಬಿಡೆನ್ ಅವರಿಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡಿದ್ದಾರೆ. ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುವುದನ್ನೂ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಮನವಿಗಳನ್ನು ಅಧ್ಯಕ್ಷ ಜೋ ಬಿಡೆನ್ ಈವರೆಗೆ ತಳ್ಳಿ ಹಾಕುತ್ತಲೇ ಇದ್ದರು. ರಷ್ಯಾದಿಂದ ಕಚ್ಚಾ ತೈಲದ ಆಮದು ನಿರ್ಬಂಧಿಸಿದರೆ ಜಾಗತಿಕ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಾಗಬಹುದು ಎಂಬ ಭೀತಿ ವ್ಯಕ್ತವಾಗಿದೆ. ಈಗಾಗಲೇ ಹಣದುಬ್ಬರದಿಂದ ನಲುಗಿರುವ ಅಮೆರಿಕದ ಜನರಿಗೆ ತೈಲಬೆಲೆ ಏರಿಕೆಯಿಂದ ಮತ್ತಷ್ಟು ಸಮಸ್ಯೆಗಳಾಗುತ್ತವೆ ಎಂದು ಬೈಡೆನ್ ಹೆದರಿದ್ದರು. ಉಕ್ರೇನ್ ಮೇಲೆ ದಾಳಿ ಮಾಡಿದ ನಂತರ ರಷ್ಯಾ ವಿರುದ್ಧ ತಿರುಗಿ ಬಿದ್ದಿರುವ ಅಮೆರಿಕದ ಜನರು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ವ್ಲಾದಿಮಿರ್ ಪುಟಿನ್ ಅವರನ್ನು ರಷ್ಯಾದಲ್ಲಿಯೇ ಹತ್ಯೆ ಮಾಡಬೇಕು ಎಂದು ರಿಪಬ್ಲಿಕನ್ ಪಕ್ಷದ ಸೆನೆಟರ್ ಲಿಂಡ್ಸೆ ಗ್ರಾಹಮ್ ಕರೆ ನೀಡಿದ್ದಾರೆ.
ಉಕ್ರೇನ್ ಮೇಲೆ ದಂಡೆತ್ತಿ ಬಂದಿರುವ ರಷ್ಯಾವನ್ನು ಹದ್ದುಬಸ್ತಿನಲ್ಲಿಡಲು ನ್ಯಾಟೊ ಮಿಲಿಟರಿ ಕಾರ್ಯಾಚರಣೆ ನಡೆಸಬೇಕು. ಉಕ್ರೇನ್ ದೇಶದ ವಾಯುಗಡಿಯಲ್ಲಿ ಕಟ್ಟುನಿಟ್ಟಾಗಿ ವಿಮಾನ ಹಾರಾಟ ನಿರ್ಬಂಧ ಹೇರಬೇಕು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆಗ್ರಹಿಸಿದ್ದರು. ಆದರೆ ಹೀಗೆ ಮಾಡಿದರೆ ರಷ್ಯಾವನ್ನು ಇನ್ನಷ್ಟು ಕೆರಳಿಸಿದಂತೆ ಆಗುತ್ತದೆ. ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ನೇರವಾಗಿ ಯುದ್ಧಕ್ಕೆ ನಿಲ್ಲಬೇಕಾಗಬಹುದು ಎಂದು ಬೈಡೆನ್ ಹೆದರಿದ್ದರು. ರಷ್ಯಾ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಬೇಕು ಎಂದು ಅಮೆರಿಕದ ಸೆನೆಟ್ ಕಾರ್ಯಕರ್ತರು ಇಂದಿಗೂ ಒತ್ತಾಯಿಸುತ್ತಲೇ ಇದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲಿನ ಯುದ್ಧ ಖಂಡಿಸಿ ನೇರ ಪ್ರಸಾರದಲ್ಲಿ ರಾಜೀನಾಮೆ ನೀಡಿದ ರಷ್ಯಾದ ಟಿವಿ ಚಾನೆಲ್ ಸಿಬ್ಬಂದಿ ವರ್ಗ: ಪ್ರಸಾರ ಸ್ಥಗಿತ
ಇದನ್ನೂ ಓದಿ: Ukraine Crisis: 9,000 ರಷ್ಯನ್ ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡ ಉಕ್ರೇನ್; ಬೆಳವಣಿಗೆಯ 10 ಮುಖ್ಯಾಂಶಗಳು ಇಲ್ಲಿವೆ