ಆಂಧ್ರಪ್ರದೇಶದ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಸಾವಿನ ಕುರಿತು ತ್ವರಿತ ಮತ್ತು ನ್ಯಾಯಯುತ ತನಿಖೆಗೆ ಅಮೆರಿಕ ಭರವಸೆ

|

Updated on: Sep 14, 2023 | 3:08 PM

Jaahnavi Kandula: ವಿಡಿಯೊದಲ್ಲಿ, ಪೊಲೀಸ್ ಅಧಿಕಾರಿ ಡೇನಿಯಲ್ ಆಡೆರೆರ್ ಈ ಭೀಕರ ಅಪಘಾತದ ಬಗ್ಗೆ ನಗುತ್ತಾ, ಕಾರನ್ನು ಓಡಿಸುತ್ತಿದ್ದ ತನ್ನ ಸಹೋದ್ಯೋಗಿ ಕೆವಿನ್ ಡೇವ್ ವಿರುದ್ಧ ಕ್ರಿಮಿನಲ್ ತನಿಖೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಕಂದುಲಾ ಸಾವು ಮತ್ತು ವಿಡಿಯೊ ಬಗ್ಗೆ ಅಮೆರಿಕದ ಶಾಸಕರು ಮತ್ತು ಭಾರತೀಯ-ಅಮೆರಿಕನ್ನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಸಾವಿನ ಕುರಿತು ತ್ವರಿತ ಮತ್ತು ನ್ಯಾಯಯುತ ತನಿಖೆಗೆ ಅಮೆರಿಕ ಭರವಸೆ
ಜಾಹ್ನವಿ ಕಂದುಲಾ
Image Credit source: Twitter/omkaraRoots
Follow us on

ವಾಷಿಂಗ್ಟನ್ ಸೆಪ್ಟೆಂಬರ್ 14: ಸಿಯಾಟಲ್‌ನಲ್ಲಿ ನಡೆದ ಅಪಘಾತದಲ್ಲಿ ಆಂಧ್ರಪ್ರದೇಶದ (Andhra Pradesh) ವಿದ್ಯಾರ್ಥಿನಿ ಜಾಹ್ನವಿ ಕಂದುಲಾ (Jaahnavi Kandula) ಸಾವಿನ ಕುರಿತು ತ್ವರಿತ ಮತ್ತು ನ್ಯಾಯಯುತ ತನಿಖೆ ನಡೆಸುವುದಾಗಿ ಅಮೆರಿಕ (US) ಸರ್ಕಾರ ಭಾರತಕ್ಕೆ ಭರವಸೆ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ವೇಗವಾಗಿ ಬಂದ ಪೊಲೀಸ್ ಕಾರು ಡಿಕ್ಕಿ ಹೊಡೆದು ಭಾರತೀಯ ವಿದ್ಯಾರ್ಥಿನಿ ಸಾವಿಗೀಡಾದ ಘಟನೆ ಜನವರಿಯಲ್ಲಿ ನಡೆದಿತ್ತು.

ಸಿಯಾಟಲ್ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಪೊಲೀಸ್  ಸಿಬ್ಬಂದಿಯೊಬ್ಬರು ಅಪಘಾತದ ಬಗ್ಗೆ ಮಾತನಾಡುತ್ತಾ ನಗುತ್ತಿರುವ ದೃಶ್ಯ ಆಕ್ರೋಶಕ್ಕೆ ಕಾರಣವಾಗಿದೆ. ಭಾರತೀಯ ದೂತಾವಾಸವು ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಮತ್ತು ಜಾಹ್ನವಿ ಕಂದುಲಾ ಅವರ ಸಾವಿಗೆ ಕಾರಣರಾದವರ ವಿರುದ್ಧ ಮತ್ತು ವಿಡಿಯೊದಲ್ಲಿ ತಮಾಷೆ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ನಂತರ ಅಮೆರಿಕ ಸರ್ಕಾರವು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.

ವಿಡಿಯೊದಲ್ಲಿ, ಪೊಲೀಸ್ ಅಧಿಕಾರಿ ಡೇನಿಯಲ್ ಆಡೆರೆರ್ ಈ ಭೀಕರ ಅಪಘಾತದ ಬಗ್ಗೆ ನಗುತ್ತಾ, ಕಾರನ್ನು ಓಡಿಸುತ್ತಿದ್ದ ತನ್ನ ಸಹೋದ್ಯೋಗಿ ಕೆವಿನ್ ಡೇವ್ ವಿರುದ್ಧ ಕ್ರಿಮಿನಲ್ ತನಿಖೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಕಂದುಲಾ ಸಾವು ಮತ್ತು ವಿಡಿಯೊ ಬಗ್ಗೆ ಅಮೆರಿಕದ ಶಾಸಕರು ಮತ್ತು ಭಾರತೀಯ-ಅಮೆರಿಕನ್ನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಜಾಹ್ನವಿ ಕಂದುಲಾ ಭಾರತದಿಂದ ಪದವಿ ಶಿಕ್ಷಣಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ವೇಗವಾಗಿ ಬಂದ ಪೋಲೀಸ್ ಕಾರು ಡಿಕ್ಕಿ ಹೊಡೆದು ಆಕೆ ಕ್ರಾಸ್‌ವಾಕ್‌ನಲ್ಲಿ ಕೊಲ್ಲಲ್ಪಟ್ಟಳು. ಆದರೆ ಆಕೆಯ ಬದುಕು ‘ಸೀಮಿತ ಮೌಲ್ಯವನ್ನು ಹೊಂದಿದೆ’ ಎಂದು ಅಧಿಕಾರಿ ಆಡೆರೆರ್ ಹೇಳಿದರು. 20 ರ ಹರೆಯದಲ್ಲಿ ಇಲ್ಲಿಗೆ ಬಂದ ನನ್ನ ತಂದೆಯ ಬಗ್ಗೆ ನಾನು ಯೋಚಿಸಿದೆ. ಆಡೆರೆರ್ ಅವರೇ, ಪ್ರತಿಯೊಬ್ಬ ಭಾರತೀಯ ವಲಸಿಗರ ಜೀವನವು ಅನಂತ ಮೌಲ್ಯವನ್ನು ಹೊಂದಿದೆ ಎಂದು ಭಾರತೀಯ-ಅಮೆರಿಕನ್ ಶಾಸಕ ರೋ ಖನ್ನಾ ಹೇಳಿದ್ದಾರೆ. ಮಾನವ ಜೀವನವು “ಸೀಮಿತ ಮೌಲ್ಯ” ಎಂದು ಭಾವಿಸುವ ಯಾರಾದರೂ ಕಾನೂನು ಜಾರಿಯಲ್ಲಿ ಸೇವೆ ಸಲ್ಲಿಸಬಾರದು ಎಂದು ಖನ್ನಾ ಹೇಳಿದ್ದಾರೆ.

ಭಾರತೀಯ-ಅಮೆರಿಕನ್ ಕಾಂಗ್ರೆಸ್ ಮಹಿಳೆ ಪ್ರಮೀಳಾ ಜಯಪಾಲ್, ಇದು ಭಯಾನಕವಾಗಿದೆ. ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ ನ್ಯಾಯ ಮತ್ತು ಸಂಬಂಧಪಟ್ಟವರಿಗೆ ಉತ್ತರದಾಯಿತ್ವವನ್ನು ನಾನು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

ಕಂದುಲಾ ಕುಟುಂಬಕ್ಕೆ ಬರೆದ ಪತ್ರದಲ್ಲಿ, ಸಿಯಾಟಲ್ ಸಿಟಿ ಮೇಯರ್ ಬ್ರೂಸ್ ಹ್ಯಾರೆಲ್, ಒಬ್ಬ ವ್ಯಕ್ತಿ ಮಾಡಿದ ಕಾಮೆಂಟ್‌ಗಳು ನಗರದ ಭಾವನೆಗಳನ್ನು ಅಥವಾ ಸಮುದಾಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ. ಜಾಹ್ನವಿಯವರ ಸಾವು ನಮ್ಮ ಇಡೀ ಸಮುದಾಯಕ್ಕೆ ನಷ್ಟವಾಗಿದೆ. ಅದ್ಭುತವಾದ ಕೆಲಸಗಳನ್ನು ಮಾಡಲು ಮತ್ತು ಪ್ರೀತಿಪಾತ್ರರೊಂದಿಗೆ ಆ ಸಂತೋಷವನ್ನು ಹಂಚಿಕೊಳ್ಳಬೇಕಿದ್ದ ಯುವತಿಯ ಬದುಕಿಗೆ ಆದ ನಷ್ಟ ಇದು ಎಂದು ಎಂದು ಹ್ಯಾರೆಲ್ ಕಂದುಲಾ ಕುಟುಂಬಕ್ಕೆ ನೀಡಿದ ಸಂವಹನದಲ್ಲಿ ಹೇಳಿದ್ದಾರೆ.

ಇಡೀ ಘಟನೆಯನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹಿರಿಯ ಆಡಳಿತ ಅಧಿಕಾರಿಗಳು ಯುಎಸ್‌ನಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರಿಗೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮಗುವನ್ನು ಕಾರಿನಲ್ಲೇ ಮಲಗಿಸಿ ಮರೆತು ಹೋಗಿದ್ದ ತಂದೆ, 7 ಗಂಟೆಯ ಬಳಿಕ ವಾಪಸಾಗುವಷ್ಟರಲ್ಲಿ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು

ಜಾಹ್ನವಿ ಕಂದುಲಾ ಯಾರು?

23ರ ಹರೆಯದ ಜಾಹ್ನವಿ ಕಂದುಲಾ ಆಂಧ್ರಪ್ರದೇಶದವರಾಗಿದ್ದು, ಸೌತ್ ಲೇಕ್ ಯೂನಿಯನ್‌ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು.2021 ರಲ್ಲಿ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಯುಎಸ್‌ಗೆ ಹೋಗಿದ್ದು ಈ ಡಿಸೆಂಬರ್‌ನಲ್ಲಿ ಪದವಿ ಪಡೆಯಬೇಕಿತ್ತು.

ಜನವರಿ 23 ರಂದು ಏನಾಯಿತು?

ಕಂದುಲಾ ರಸ್ತೆ ದಾಟುತ್ತಿದ್ದಾಗ ಪೊಲೀಸ್ ಕಾರಿಗೆ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ. ದಿ ಸಿಯಾಟಲ್ ಟೈಮ್ಸ್ ಪ್ರಕಾರ, ಕೆವಿನ್ ಡೇವ್, ಕಾರನ್ನು ಓಡಿಸುತ್ತಿದ್ದ ಪೋಲೀಸ್ ಅಧಿಕಾರಿ ಗಂಟೆಗೆ 119 ಕಿಮೀ ವೇಗದಲ್ಲಿ ಹೋಗುತ್ತಿದ್ದರು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಂದುಲಾ ದೇಹವು 100 ಅಡಿಗಿಂತ ಹೆಚ್ಚು ಎಸೆಯಲ್ಪಟ್ಟಿತ್ತು, ಕಂದುಲಾ ಅವರನ್ನು ಹಾರ್ಬರ್ವ್ಯೂ ಮೆಡಿಕಲ್ ಸೆಂಟರ್‌ಗೆ ಕರೆದೊಯ್ಯಲಾಗಿದ್ದರೂ, ತೀವ್ರ ಗಾಯಗಳಿಂದ ಆಕೆ ಮೃತಪಟ್ಟಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Thu, 14 September 23