
ವಾಷಿಂಗ್ಟನ್, ನವೆಂಬರ್ 28: ಅಮೆರಿಕದ ಶ್ವೇತಭವನದ ಹೊರಗೆ ಅಫ್ಘಾನ್ ಪ್ರಜೆಯೊಬ್ಬ ಇಬ್ಬರು ನ್ಯಾಷನಲ್ ಗಾರ್ಡ್ಗಳ ಮೇಲೆ ಗುಂಡಿನ ದಾಳಿ(Firing) ನಡೆಸಿದ್ದ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ. ಈ ಹೊತ್ತಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಅಫ್ಘಾನಿಸ್ತಾನ ಸೇರಿ 18 ದೇಶಗಳ ಜನರ ಗ್ರೀನ್ ಕಾರ್ಡ್‌ಗಳನ್ನು ಮರುಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ದಾಳಿಕೋರ 29 ವರ್ಷದ ಅಫ್ಘಾನ್ ಪ್ರಜೆಯಾಗಿದ್ದು, ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪಡೆಗಳೊಂದಿಗೆ ಕೆಲಸ ಮಾಡಿದ್ದ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಆಡಳಿತವು 19 ದೇಶಗಳ ಜನರಿಗೆ ನೀಡಲಾದ ಗ್ರೀನ್ ಕಾರ್ಡ್‌ಗಳನ್ನು ಮರುಪರಿಶೀಲಿಸುವುದಾಗಿ ಘೋಷಿಸಿದೆ. ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಯ ಮುಖ್ಯಸ್ಥ ಜೋಸೆಫ್ ಅಡ್ಲೋ ಈ ಘೋಷಣೆ ಮಾಡಿದ್ದಾರೆ. ಭೀತಿ ಇರುವ ದೇಶದ ಜನರ ಗ್ರೀನ್ ಕಾರ್ಡ್‌ಗಳನ್ನು ಸಂಪೂರ್ಣವಾಗಿ ಮತ್ತು ಕಟ್ಟುನಿಟ್ಟಾಗಿ ಮರುಪರಿಶೀಲಿಸುವಂತೆ ನಿರ್ದೇಶಿಸಿದ್ದಾರೆ ಎಂದು ಅಡ್ಲೋ ಹೇಳಿದ್ದಾರೆ.
ಜೋಸೆಫ್ ಅಡ್ಲೋ ಯಾವ 19 ದೇಶಗಳ ಗ್ರೀನ್ ಕಾರ್ಡ್ ಹೊಂದಿರುವವರು ಪರಿಶೀಲನೆಗೆ ಒಳಪಡುತ್ತಾರೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಕಳವಳಕಾರಿ ದೇಶಗಳ ಪಟ್ಟಿಯಲ್ಲಿ 19 ದೇಶಗಳನ್ನು ಜೂನ್‌ನಲ್ಲಿ ಟ್ರಂಪ್ ಆಡಳಿತ ಗುರುತಿಸಿತ್ತು.
ಈ ದೇಶಗಳಲ್ಲಿ ಅಫ್ಘಾನಿಸ್ತಾನ, ಬರ್ಮಾ, ಚಾಡ್, ಕಾಂಗೋ ಗಣರಾಜ್ಯ, ಈಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್, ಯೆಮೆನ್, ಬುರುಂಡಿ, ಕ್ಯೂಬಾ, ಲಾವೋಸ್, ಸಿಯೆರಾ ಲಿಯೋನ್, ಟೋಗೊ, ತುರ್ಕಮೆನಿಸ್ತಾನ್ ಮತ್ತು ವೆನೆಜುವೆಲಾ ಸೇರಿವೆ.
ಮತ್ತಷ್ಟು ಓದಿ: ಅಮೆರಿಕದ ಶ್ವೇತ ಭವನದ ಬಳಿ ಗುಂಡಿನ ದಾಳಿ, ಇಬ್ಬರು ನ್ಯಾಷನಲ್ ಗಾರ್ಡ್ಗಳಿಗೆ ಗಾಯ
ಗುರುವಾರ ವಾಷಿಂಗ್ಟನ್ ಡಿಸಿಯಲ್ಲಿ ನ್ಯಾಷನಲ್ ಗಾರ್ಡ್ಗಳ ಮೇಲೆ ದಾಳಿ ಮಾಡಿದವನನ್ನು ರಹಮಾನಲ್ಲಾ ಲಕನ್ವಾಲ್ ಎಂದು ಗುರುತಿಸಲಾಗಿದೆ. ಆತ ಅಫ್ಘಾನಿಸ್ತಾನದವನಾಗಿದ್ದು 2021ರಲ್ಲಿ ಅಮೆರಿಕಕ್ಕೆ ಬಂದಿದ್ದ.ಅಫ್ಘಾನಿಸ್ತಾನದಲ್ಲಿ ಸಿಐಎ ಜತೆ ಕೆಲಸ ಮಾಡಿದ್ದ, ಅಲ್ಲಿ ತಾಲಿಬಾನ್ ಸರ್ಕಾರ ಅಧಿಕಾರವಹಿಸಿಕೊಂಡ ಬಳಿಕ ಬೈಡನ್ ಸರ್ಕಾರದ ಪುನರ್ವಸತಿ ನೀತಿಯಡಿಯಲ್ಲಿ ಆತ ಅಮೆರಿಕಕ್ಕೆ ಬಂದಿದ್ದ.
ಗ್ರೀನ್ ಕಾರ್ಡ್ ಪರಿಶೀಲನೆಯ ಕುರಿತು ಎಡ್ಲೋ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅಮೆರಿಕ ಜನರ ಭದ್ರತೆ ಅತ್ಯಂತ ಮುಖ್ಯ. ಹಿಂದಿನ ಆಡಳಿತದ ಅಜಾಗರೂಕ ಪುನರ್ವಸತಿ ನೀತಿಗಳಿಗೆ ಅಮೆರಿಕ ಜನರು ಬೆಲೆ ತೆರುವುದಿಲ್ಲ.ಗ್ರೀನ್ ಕಾರ್ಡ್ ಮರು-ಪರಿಶೀಲನಾ ಪ್ರಕ್ರಿಯೆಯನ್ನು ಹೇಗೆ ನಡೆಸಲಾಗುತ್ತದೆ ಎಂಬುದರ ಕುರಿತು ಎಡ್ಲೋ ವಿವರಗಳನ್ನು ನೀಡಿಲ್ಲ. ಜೂನ್‌ನಲ್ಲಿ ಯುಎಸ್ ವಲಸೆ ಸಂಸ್ಥೆಯು ಹಲವಾರು ದೇಶಗಳ, ವಿಶೇಷವಾಗಿ ಅಫ್ಘಾನಿಸ್ತಾನದ ಗ್ರೀನ್ ಕಾರ್ಡ್ ಹೊಂದಿರುವವರ ಮೇಲೆ ಕಠಿಣ ಪರಿಶೀಲನೆಯನ್ನು ಘೋಷಿಸಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ