
ವಾಷಿಂಗ್ಟನ್, ಆಗಸ್ಟ್ 11: ಕಳೆದ ತಿಂಗಳು ನ್ಯಾಟೋ ಸಭೆಯಲ್ಲಿ ಪಾಲ್ಗೊಳ್ಳಲು ಟರ್ಕಿಗೆ ಹೋಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ ಬೆದರಿಕೆ ಹಿನ್ನೆಲೆಯಲ್ಲಿ ರಹಸ್ಯ ಕಾರ್ಯಾಚರಣೆ ಮೂಲಕ ತಪ್ಪಿಸಿಕೊಂಡ ಘಟನೆ ನಡೆದಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇರಾನ್ನಿಂದ ಹತ್ಯೆಯ ಗಂಭೀರ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಟ್ರಂಪ್ ಅವರನ್ನು ಮಾಮೂಲಿಯ ಏರ್ ಫೋರ್ಸ್ ಒನ್ ವಿಮಾನ ಬಿಟ್ಟು ಸಣ್ಣ ವಿಮಾನವೊಂದರಲ್ಲಿ ರಹಸ್ಯವಾಗಿ ಟರ್ಕಿಯಿಂದ ಹೊರಗೆ ಕರೆದೊಯ್ಯಲಾಗಿತ್ತು ಎಂದು ವಾಷಿಂಗ್ಟನ್ ಪೋಸ್ಟ್ನಲ್ಲಿ (The Washington Post) ಹೇಳಲಾಗಿದೆ.
ಟರ್ಕಿಯ ಅಂಕಾರಾದಲ್ಲಿ ಜುಲೈನಲ್ಲಿ ನಡೆದ ನ್ಯಾಟೋ (NATO) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ, ಇರಾನ್ ಮತ್ತು ಅದರ ಬೆಂಬಲಿತ ಗುಂಪುಗಳಿಂದ ಟ್ರಂಪ್ ಅವರ ವಿಮಾನದ ಮೇಲೆ ಕ್ಷಿಪಣಿ ದಾಳಿ ಅಥವಾ ಹತ್ಯೆಯ ಯತ್ನ ನಡೆಯಬಹುದು ಎಂಬ ನಂಬಲರ್ಹ ಗುಪ್ತಚರ ಮಾಹಿತಿ ಯುಎಸ್ ಸೀಕ್ರೆಟ್ ಸರ್ವಿಸ್‌ಗೆ ದೊರಕಿತ್ತು.
ಕ್ಯಾಮೆರಾಗಳ ಮುಂದೆ ಹಾಗೂ ಪತ್ರಕರ್ತರ ಕಣ್ಣೆದುರು ಟ್ರಂಪ್ ಅವರು ಹಳೆಯ ‘ಏರ್ ಫೋರ್ಸ್ ಒನ್’ (Air Force One) ವಿಮಾನವನ್ನು ಏರಿದ್ದರು. ಆದರೆ ವಿಮಾನವೇರಿದ ಕೆಲವೇ ನಿಮಿಷಗಳಲ್ಲಿ, ವಿಮಾನದ ಹಿಂಭಾಗಕ್ಕೆ ಆಹಾರ ಸರಬರಾಜು ಮಾಡುವ ಏರ್‌ಪೋರ್ಟ್ ಕ್ಯಾಟರಿಂಗ್ ಟ್ರಕ್ (Catering Truck) ಮೂಲಕ ಟ್ರಂಪ್ ಅವರನ್ನು ಯಾರಿಗೂ ತಿಳಿಯದಂತೆ ಮತ್ತೊಂದು ಸಣ್ಣ ಯುದ್ಧ ವಿಮಾನವಾದ ‘ಏರ್ ಫೋರ್ಸ್ C-32A’ (Air Force C-32A) ಗೆ ರಹಸ್ಯವಾಗಿ ಸ್ಥಳಾಂತರಿಸಲಾಯಿತು.
ಇದನ್ನೂ ಓದಿ: ಟ್ರಂಪ್ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್; ಎಲ್ಲಾ ಸೇನಾ ರಜೆಗಳು ರದ್ದು; ಇರಾನ್ ಮೇಲೆ ನಡೆಯುತ್ತಾ ದೊಡ್ಡ ದಾಳಿ?
ಟ್ರಂಪ್ ಏರ್ ಫೋರ್ಸ್ ಒನ್‌ನಲ್ಲೇ ಪ್ರಯಾಣಿಸುತ್ತಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಮತ್ತು ಶ್ವೇತಭವನದ ಹಲವು ಸಿಬ್ಬಂದಿ ನಂಬಿದ್ದರು. ಪ್ರಯಾಣದ ಸಮಯದಲ್ಲಿ ವಿಮಾನದ ಕಿಟಕಿ ಪರದೆಗಳನ್ನು (Window shades) ಮುಚ್ಚಿಡುವಂತೆ ಪತ್ರಕರ್ತರಿಗೆ ಸೂಚಿಸಲಾಗಿತ್ತು. ಟ್ರಂಪ್ ಅವರನ್ನು ಕ್ಯಾಟರಿಂಗ್ ಟ್ರಕ್ಗೆ ವರ್ಗಾಯಿಸಿದ್ದು ಯಾರ ಕಣ್ಣಿಗೂ ಬೀಳಲಿಲ್ಲ.
ಟ್ರಂಪ್ ಅವರು ಅಂಕಾರಾಕ್ಕೆ (ಟರ್ಕಿಯ ನಗರ) ಕತಾರ್ ಸರ್ಕಾರ ನೀಡಿದ್ದ ಹೊಸ ಬೋಯಿಂಗ್ 747-8 ವಿಮಾನದಲ್ಲಿ ಬಂದಿದ್ದರು. ಆದರೆ, ಹಳೆಯ ಏರ್ ಫೋರ್ಸ್ ಒನ್ ವಿಮಾನದಲ್ಲಿ ಇರುವ ಕ್ಷಿಪಣಿ ನಿರೋಧಕ ಮತ್ತು ಲೇಸರ್ ತಂತ್ರಜ್ಞಾನದ ಫೀಚರ್ಗಳು ಹೊಸ ಬೋಯಿಂಗ್ ವಿಮಾನದಲ್ಲಿ ಇರಲಿಲ್ಲ. ಹೀಗಾಗಿ, ಟರ್ಕಿಯಿಂದ ಹೊರಹೋಗಲು ಹಳೆಯ ಏರ್ ಫೋರ್ಸ್ ಒನ್ ಅನ್ನೇ ಬಳಸಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ.
ಬ್ರಿಟನ್‌ನ ಸೇನಾ ನೆಲೆಗೆ ತಲುಪಿದ ನಂತರ, ಪತ್ರಕರ್ತರು “ವಿಮಾನದ ಕಿಟಕಿಗಳನ್ನು ಏಕೆ ಮುಚ್ಚಲು ಹೇಳಲಾಗಿತ್ತು?” ಎಂದು ಕೇಳಿದಾಗ, ಟ್ರಂಪ್: “ನಾವು ಬಹುಶಃ ಅಪಾಯಕಾರಿ ಹಾರಾಟದಲ್ಲಿದ್ದೆವು… ಆದರೆ ನಾನು ಹೋದರೆ, ನೀವು ನನ್ನ ಜೊತೆಯೇ ಹೋಗುತ್ತೀರಲ್ಲವೇ?” ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು. ಶ್ವೇತಭವನದ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿ, “ಅಧ್ಯಕ್ಷರ ಮೇಲೆ ಹಲವು ಶತ್ರುಗಳ ಕಣ್ಣಿದೆ, ಅವರ ಸುರಕ್ಷತೆಗಾಗಿ ನಾವು ಅಗತ್ಯವಿರುವ ಎಲ್ಲಾ ತಂತ್ರಜ್ಞಾನ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಆಗಸ್ಟ್ 29ರಂದು ಅಮೆರಿಕದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ
ಕುತೂಹಲ ಎಂದರೆ, ಟರ್ಕಿಯಲ್ಲಿ ಪತ್ರಕರ್ತರ ಜೊತೆ ಏರ್ ಫೋರ್ಸ್ ಒನ್ ವಿಮಾನ ಏರಿದ್ದ ಟ್ರಂಪ್ ಅವರನ್ನು ಯಾರಿಗೂ ತಿಳಿಯದಂತೆ ರಹಸ್ಯವಾಗಿ ಸಣ್ಣ ವಿಮಾನಕ್ಕೆ ಸಾಗಿಸಲಾಯಿತು. ಬ್ರಿಟನ್ಗೆ ವಿಮಾನಗಳು ತಲುಪಿದಾಗ ಟ್ರಂಪ್ ಅವರು ಮತ್ತೆ ಏರ್ ಫೋರ್ಸ್ ಒನ್ ವಿಮಾನದಲ್ಲಿ ಕಾಣಿಸಿಕೊಂಡಿದ್ದರು. ಹೇಗೆ ಅವರನ್ನು ವಾಪಸ್ ಹಳೆಯ ವಿಮಾನಕ್ಕೆ ತರಲಾಯಿತು ಎಂಬುದು ಗೊತ್ತಾಗಿಲ್ಲ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ