ಯುಎಸ್ ಅಧ್ಯಕ್ಷ ಜೋ ಬೈಡನ್ (Joe Biden) ಅವರೊಂದಿಗೆ ಇದು ಪದೇಪದೆ ಆಗುತ್ತಿದೆ ಮಾರಾಯ್ರೇ. ಕಾರ್ಯಕ್ರಮವೊಂದರಲ್ಲಿ ಉಪಸ್ಥಿತರಿದ್ದವರನ್ನು ಉದ್ದೇಶಿಸಿ ಮಾತಾಡಿದ ಅವರು ಮಾತು ಮುಗಿಸಿದ ಬಳಿಕ ಎಲ್ಲೋ ಕಳೆದುಹೋದವರಂತೆ ವರ್ತಿಸಿದ್ದು ಇಂಟರ್ನೆಟ್ ಬಳಕೆದಾರರನ್ನು (users) ಆಘಾತಕ್ಕೊಳಪಡಿಸಿದೆ. ಬುಧವಾರ ಅವರು ನ್ಯೂ ಯಾರ್ಕ್ (New York) ನಗರದಲ್ಲಿ ನಡೆದ ಗ್ಲೋಬಲ್ ಫಂಡ್‌ನ ಏಳನೇ ಸಮ್ಮೇಳನವನ್ನು (GFSRC) ಉದ್ದೇಶಿಸಿ ಮಾತನಾಡುತ್ತಿದ್ದರು. ಭಾಷಣದ ನಂತರ, ಅವರು ವೇದಿಕೆಯಿಂದ ಕೆಳಗಿಳಿಯಲು ಮುಂದಾಗುತ್ತಾರೆ, ಸ್ವಲ್ಪ ದೂರ ನಡೆದು ನಿಂತುಬಿಡುತ್ತಾರೆ ಮತ್ತು ಅಂತಿಮವಾಗಿ ಎಲ್ಲೋ ಕಳೆದುಹೋದವರಂತೆ ವರ್ತಿಸುತ್ತಾರೆ!
Where ya going, Big Guy? pic.twitter.com/hvMjZlprWb
— RNC Research (@RNCResearch) September 21, 2022
ಅವರು ಏನನ್ನೋ ಹೇಳುತ್ತಾರೆ, ಆದರೆ ಸಭಿಕರ ಕಿವಿಗಡಚಿಕ್ಕುವ ಚಪ್ಪಾಳೆ ಸದ್ದಿನಿಂದಾಗಿ ಅವರು ಹೇಳಿದ್ದು ಕೇಳಿಸುವುದಿಲ್ಲ. ಈ ವೀಡಿಯೊವನ್ನು ಅನೇಕ ಬಳಕೆದಾರರು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಏಡ್ಸ್, ಕ್ಷಯರೋಗ (ಟಿಬಿ) ಮತ್ತು ಮಲೇರಿಯಾ ರೋಗಗಳ ವಿರುದ್ಧ ನಡೆಯುತ್ತಿರುವ ಅಭಿಯಾನಗಳಿಗೆ ಹಣ ಸಂಗ್ರಹಿಸಲು ಸದರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖಾಂತರ 1.13 ಲಕ್ಷ ಕೋಟಿ ರೂ. ಗಳನ್ನು ಸಂಗ್ರಹಿಸಲಾಗಿದ್ದು, ಜಂಟಿ ಆರೋಗ್ಯ ಸಂಸ್ಥೆಯೊಂದಕ್ಕೆ ಸಂಗ್ರಹವಾಗಿರುವ ದಾಖಲೆ ಮೊತ್ತ ಇದಾಗಿದೆ.
ತಮ್ಮ ಬಾಷಣದಲ್ಲಿ ಬೈಡನ್ ಅವರು ಸಭೆಯಲ್ಲಿ ಭಾಗವಹಿಸಿ ಧಾರಾಳವಾಗಿ ಧನಸಹಾಯ ಮಾಡಿದ ಎಲ್ಲರಿಗೆ ಧನ್ಯವಾದ ಸಮರ್ಪಿಸಿ ಅಭಿನಂದಿಸಿದರು. ‘ಮಹತ್ತರ ಉದ್ದೇಶಕ್ಕಾಗಿ ನಡೆದಿರುವ ಹೋರಾಟದಲ್ಲಿ ಉದಾರವಾಗಿ ದೇಣಿಗೆ ನೀಡಿದ ಎಲ್ಲರಿಗೂ ಧನ್ಯವಾದಗಳು. ಜನರ ಅಮೂಲ್ಯ ಜೀವಗಳನ್ನು ಉಳಿಸಲು ನಡೆಯುತ್ತಿರುವ ಹೋರಾಟವಿದು, ತಾರತಮ್ಯದ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಎಲ್ಲಾ ಸಮುದಾಯಗಳು ಆರೋಗ್ಯದಿಂದ ಮತ್ತು ಸದೃಢರಾಗಿರಬೇಕು ಅನ್ನೋದನ್ನು ಖಚಿತಪಡಿಸಿಕೊಳ್ಳಲು ಹೋರಾಟ ನಡೆಸಲಾಗುತ್ತಿದೆ. ಈ ನಿಟ್ಟಿನೆಡೆ ಪ್ರಯತ್ನವಂತೂ ಆರಂಭವಾಗಿದೆ. ಜಗತ್ತಿನಾದ್ಯಂತ ವಾಸವಾಗಿರುಬವ ಜನರ ಘನತೆ-ಗೌರವಗಳಿಂದ ಬಾಳಬೇಕೆನ್ನುವುದು ನಮ್ಮೆಲ್ಲರ ಉದ್ದೇಶವಾಗಿದೆ,’ ಎಂದು ಬೈಡೆನ್ ಹೇಳಿದರು.
‘ಜನರ ಬದುಕಿನ ಶ್ರೇಯೋಭಿವೃದ್ಧಿ ಮತ್ತು ಮನುಕುಲದ ಪ್ರಗತಿಗೆ ಅಡ್ಡಿಯಾಗುವ ಸವಾಲುಗಳನ್ನು ಮಟ್ಟಹಾಕಲು ನಮ್ಮ ಸಾಂಘಿಕ ಬಲವನ್ನು ಪ್ರದರ್ಶಿಸೋಣ. ನಾವು ಮಾಡಬೇಕಿರುವುದು ಸಾಕಷ್ಟಿದೆ, ಹಾಗಾಗಿ ನಾವು ಕಾರ್ಯೋನ್ಮುಖರಾಗೋಣ. ನೀವು ಮಾಡುತ್ತಿರುವುದಕ್ಕೆಲ್ಲ ಧನ್ಯವಾದಗಳು,’ ಎಂದು ಬೈಡೆನ್ ಹೇಳಿದರು.
ಆದರೆ ಅಧ್ಯಕ್ಷರು ಭಾಷಣ ಮುಗಿಸಿದ ಬಳಿಕ ವೇದಿಕೆಯಿಂದ ಕೆಳಗಿಳಿಯಲು ತಮ್ಮ ಬಲಭಾಗಕ್ಕೆ ತಿರುಗಿದರು. ಆದರೆ ಒಂದೆರಡು ಹೆಜ್ಜೆ ನಡೆದ ಬಳಿಕ ನಿಂತು ತಾವು ಎಲ್ಲಿಂದ ಇಳಿಯಬೇಕೆನ್ನುವುದು ತೋಚದೆ, ಅಲ್ಲೇ ನಿಂತುಬಿಟ್ಟರು. ಅವರ ಗಲಿಬಿಲಿಯನ್ನು ಪ್ರಾಯಶಃ ಗಮನಿಸಿದ ಕಾರ್ಯಕ್ರಮ ನಿರೂಪಕ ಥ್ಯಾಂಕ್ಯೂ ನೋಟ್ ಓದಲಾರಂಭಿಸಿದಾಗ ಅಧ್ಯಕ್ಷರ ಗಮನ ಅತ್ತ ಹೋಯಿತು.
ವಿಡಿಯೋವನ್ನು ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು ಅಸಂಖ್ಯಾತ ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ.
‘ಇದೇನು ಐಸ್ ಕ್ರೀಮ್ ಟ್ರಿಕ್ ಸಂಗೀತವೇ?’ ಅಂತ ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ‘ಸ್ಕೇರಿ ಮೂವಿ 3 ನೋಡಿದಂತೆ ಭಾಸವಾಗುತ್ತಿದೆ!’ ಎಂದಿದ್ದಾರೆ.
ಜೋ ಬೈಡೆನ್ ಅವರಿಂದ ಇಂಥ ಎಡವಟ್ಟುಗಳಾಗುತ್ತಿರುವುದು ಇದು ಮೊದಲ ಸಲವೇನಲ್ಲ. ಏಪ್ರಿಲ್ ನಲ್ಲಿ ಲಭ್ಯವಾಗಿದ್ದ ವಿಡಿಯೋದಲ್ಲಿ ಅವರು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ನಂತರ ಹಸ್ತಲಾಘವ ಮಾಡಲು ಕೈ ಚಾಚಿದ್ದರು. ಆದರೆ, ಅವರ ಮುಂದಷ್ಟೇ ಅಲ್ಲ ಅಕ್ಕಪಕ್ಕ ಯಾರೂ ಇರಲಿಲ್ಲ!