ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕಾ ಮೂಲದ ಅಮೆರಿಕಾ ಪ್ರಜೆ 46 ವರ್ಷದ ಕಪ್ಪು ವರ್ಣದ ಟ್ರಕ್ ಚಾಲಕನ ಕರಾಳ ಹತ್ಯೆಯು ಕರಾಳ ಇತಿಹಾಸದಲ್ಲಿ ದಾಖಲಾದ, ಮಾನವ ಕುಲ ಎಂದಿಗೂ ಮರೆಯಲಾರದ ಅಕ್ಷಮ್ಯ ಅಪರಾಧ. ಅಮೆರಿಕದ ಮಿನಪೊಲಿಸ್ ನಗರದಲ್ಲಿ ಕೊರೊನಾ ಹಾವಳಿ ತಾಂಡವವಾಡುತ್ತಿದ್ದಾಗ ಕಳೆದ ವರ್ಷ ಮೇ 25ರಂದು ಕರಾಳ ರಾತ್ರಿಯಲ್ಲಿ ಡೆರಿಕ್ ಶೂವಿನ್ ಎಂಬ ಶ್ವೇತವರ್ಣದ ಪೊಲೀಸ್ ಅಧಿಕಾರಿ ತನ್ನ ಮೊಣಕಾಲುಗಳನ್ನು ಅಕ್ಷರಶಃ ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ ಬಲವಾಗಿ ಊರಿ, ನಿಷ್ಕರುಣೆಯಿಂದ ಒಂಬತ್ತು ನಿಮಿಷಗಳ ಕಾಲ ಹಿಸುಕಿ, ಹೊಸಕಿ ಸಾಯಿಸಿಬಿಟ್ಟಿದ್ದ.
ಈ ಕರಾಳ ಘಟನೆ ಇದೀಗ ಸದ್ಯಕ್ಕೆ ಒಂದು ತಾರ್ತಿಕ ಅಂತ್ಯಕ್ಕೆ ಬಂದಿದ್ದು ಅಮೆರಿಕದ ಮಿನಪೊಲಿಸ್ ನಗರದ (US Minneapolis) ಪೊಲೀಸರು ತಮ್ಮ ನೀಚ ಕೃತ್ಯಕ್ಕೆ ಪ್ರಾಯಶ್ಚಿತ್ತವಾಗಿ ಜಾರ್ಜ್ ಫ್ಲಾಯ್ಡ್ (George Floyd) ಕುಟುಂಬಕ್ಕೆ 196 ಕೋಟಿ ರೂ ಪರಿಹಾರ ($ 27 million) ನೀಡಲು ಒಪ್ಪಿದೆ. ಜಾರ್ಜ್ ಫ್ಲಾಯ್ಡ್ನನ್ನು ಉಸಿರುಗಟ್ಟಿಸಿ ಸಾಯಿಸಿದ ಡೆರಿಕ್ ಶೂವಿನ್ ಮತ್ತು ಇನ್ನೂ ಮೂವರು ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ವಿಚಾರಣೆಗೆ ಗುರಿಪಡಿಸಲಾಗಿದೆ.
ಅಮೆರಿಕದ ಕಾನೂನು ಇತಿಹಾಸದಲ್ಲಿ ಕರಾಳ ಹತ್ಯೆ ಅಪರಾಧಕ್ಕೆ ಪರಿಹಾರಾರ್ಥವಾಗಿ, ಅದೂ ವಿಚಾರಣೆಗೂ ಮುನ್ನ ಇಷ್ಟೊಂದು ಭಾರಿ ಮೊತ್ತದ ಪರಿಹಾರ ನೀಡುತ್ತಿರುವುದು ಇದೇ ಮೊದಲು ಎಂದು ಜಾರ್ಜ್ ಫ್ಲಾಯ್ಡ್ ಕುಟುಂಬದ ವಕೀಲರು ತಿಳಿಸಿದ್ದಾರೆ. ಈ ಮಧ್ಯೆ, ಅಂದು ಕುಕೃತ್ಯವೆಸಗಿದ ಶ್ವೇತವರ್ಣದ ಪೊಲೀಸ್ ಅಧಿಕಾರಿ ಡೆರಿಕ್ ಶೂವಿನ್ನ ಸುದೀರ್ಘ ವಿಚಾರಣೆ ಸ್ಥಳೀಯ ನ್ಯಾಯಾಲಯದಲ್ಲಿ ಮುಂದುವರಿದಿದೆ.
ಈ ಸಂದರ್ಭದಲ್ಲಿ ಜಾರ್ಜ್ ಫ್ಲಾಯ್ಡ್ ಸಾವು ನಮ್ಮನ್ನು ಅತೀವ ನೋವಿನ ಮಡುವಿಗೆ ದೂಡಿದೆ. ನಾವಿನ್ನೂ ಆ ನೋವಿಂದ ಚೇತರಿಸಿಕೊಂಡಿಲ್ಲ. ಒಂದು ವೇಳೆ ಜಾರ್ಜ್ ಫ್ಲಾಯ್ಡ್ನನ್ನು ಜೀವಂತವಾಗಿ ನಮಗೆ ವಾಪಸ್ ಕೊಡುವ ಹಾಗಿದ್ದರೆ ನಮ್ಮ ಕುಟುಂಬವು ಈ ಪರಿಹಾರದ ಮೊತ್ತವನ್ನು ವಾಪಸ್ ಮಾಡಲು ಸಿದ್ಧವಾಗಿದೆ ಎಂದು ಆತನ ಸಹೋದರ ಫಿಲನಿಸ್ ಫ್ಲಾಯ್ಡ್ (Philonise Floyd) ಹೇಳಿದ ಮಾತು ಮಾರ್ಮಿಕವಾಗಿದೆ.
ಎರಡು ವರ್ಷಗಳ ಹಿಂದೆ ಶ್ವೇತ ವರ್ಣದ ಮಹಿಳೆಯನ್ನು ಪೊಲೀಸ್ ಅಧಿಕಾರಿಯೊಬ್ಬ ಸಾಯಿಸಿದ್ದ. ಆ ಪ್ರಕರಣದಲ್ಲಿ 20 ದಶಲಕ್ಷ ಡಾಲರ್ ಪರಿಹಾರವನ್ನು ನೀಡಲಾಗಿತ್ತು. ಇದುವರೆಗಿನ ಅತ್ಯಧಿಕ ಪರಿಹಾರ ಮೊತ್ತ ಇದಾಗಿತ್ತು.
Also Read : Most Expensive Drug: ಒಂದು ಡೋಸ್ ಔಷಧಕ್ಕೆ ರೂ. 16 ಕೋಟಿಗೂ ಹೆಚ್ಚು ಮೊತ್ತಕ್ಕೆ ಯುಕೆ ಓಕೆ
Published On - 1:43 pm, Sat, 13 March 21