Most Expensive Drug: ಒಂದು ಡೋಸ್ ಔಷಧಕ್ಕೆ ರೂ. 16 ಕೋಟಿಗೂ ಹೆಚ್ಚು ಮೊತ್ತಕ್ಕೆ ಯುಕೆ ಓಕೆ
ಇದೊಂದು ಅಪರೂಪದ ಕಾಯಿಲೆ. ಚಿಕಿತ್ಸೆಗಾಗಿ ಒಂದು ಡೋಸ್ ಔಷಧ ತೆಗೆದುಕೊಳ್ಳಬೇಕು ಅಂದರೂ ರೂ. 16 ಕೋಟಿಗೂ ಹೆಚ್ಚು ಖರ್ಚಾಗುತ್ತದೆ, ಈ ಔಷಧಕ್ಕೆ ಇಂಗ್ಲೆಂಡ್ನ ಎನ್ಎಚ್ಎಸ್ ಅನುಮತಿ ನೀಡಿದೆ.
ಲಂಡನ್: ‘ವಿಶ್ವದಲ್ಲೇ ಅತ್ಯಂತ ದುಬಾರಿ ಔಷಧ’ಕ್ಕೆ ಇಂಗ್ಲೆಂಡ್ನ ನ್ಯಾಷನಲ್ ಹೆಲ್ತ್ ಸರ್ವೀಸ್ ಅನುಮತಿ ನೀಡಿದೆ. ತುಂಬಾ ಅಪರೂಪದ ಜೈವಿಕ ಅಸ್ವಾಸ್ಥ್ಯದಿಂದ ಬಳಲುತ್ತಿರುವ ಹಸುಗೂಸುಗಳು ಹಾಗೂ ಮಕ್ಕಳ ಬದುಕನ್ನು ಬದಲಿಸುವ ನಡೆ ಇದಾಗಲಿದೆ. ಆನುವಂಶಿಕವಾಗಿ ಬರುವ ಸಮಸ್ಯೆಗೆ ಕಂಡುಹಿಡಿದಿರುವ ಈ ಹೊಸ ಚಿಕಿತ್ಸೆಗೆ ‘Zolgensma’ (ಝೋಲ್ಗೆಸ್ಮಾ) ಎಂದು ಹೆಸರಿಡಲಾಗಿದೆ. ಅಂದಹಾಗೆ ಈ ಚಿಕಿತ್ಸೆ ವೆಚ್ಚ ಖಂಡಿತಾ ಕಡಿಮೆ ಅಲ್ಲ. ಒಂದು ಡೋಸ್ಗೆ 24.8 ಲಕ್ಷ ಅಮೆರಿಕನ್ ಡಾಲರ್ (ಭಾರತದ ರೂಪಾಯಿಗಳ ಲೆಕ್ಕದಲ್ಲಿ 16 ಕೋಟಿಗೂ ಹೆಚ್ಚಾಗುತ್ತಿದೆ) ಆಗಬಹುದು ಎಂದು ಸೋಮವಾರದಂದು ಎನ್ಎಚ್ಎಸ್ ಇಂಗ್ಲೆಂಡ್ ಹೇಳಿದೆ.
ಸ್ಪೈನಲ್ ಮಸ್ಕ್ಯುಲಾರ್ ಅಟ್ರೋಫಿಯಿಂದ ಬಳಲುತ್ತಿರುವ ಹಸುಗೂಸುಗಳು ಹಾಗೂ ಬಾಲಕ- ಬಾಲಕಿಯರಿಗೆ ಈ ಔಷಧ ಬಳಕೆ ಆಗುತ್ತದೆ. ಅಂದಹಾಗೆ ಇದು ಅಪರೂಪವಾಗಿ ಬರುವ ಆನುವಂಶಿಕ ಕಾಯಿಲೆ. ಇದರಿಂದ ಪಾರ್ಶ್ವವಾಯು, ಮಾಂಸಖಂಡಗಳ ದೌರ್ಬಲ್ಯ ಹಾಗೂ ಚಲನೆಯೇ ಕಷ್ಟವಾಗುತ್ತದೆ. ಟೈಪ್1 ಎಸ್ಎಂಎ ಸಮಸ್ಯೆಯೊಂದಿಗೆ ಹುಟ್ಟುವ ಮಕ್ಕಳು ತುಂಬ ಸಾಮಾನ್ಯವಾಗಿ ಕಂಡುಬರುತ್ತಾರೆ, ಹೆಚ್ಚೆಂದರೆ ಎರಡು ವರ್ಷಗಳ ಕಾಲ ಬದುಕುತ್ತಾರೆ.
ಬ್ರಿಟನ್ ಹೆಲ್ತ್ ಸರ್ವೀಸ್ನಲ್ಲಿ ಔಷಧ ದೊರೆಯಲಿದ್ದು, ಹೆರಿಗೆ ಸಂದರ್ಭದಲ್ಲಿ ವೈದ್ಯಕೀಯ ನಿಗಾ ಉಚಿತವಾಗಿ ಮಾಡುತ್ತಾರೆ. ತೆರಿಗೆಪಾವತಿದಾರರ ಹಣದಿಂದ ಈ ಐತಿಹಾಸಿಕ ರಹಸ್ಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಇಂಗ್ಲೆಂಡ್ನ ಎನ್ಎಚ್ಎಸ್ ಮುಖ್ಯಾಧಿಕಾರಿ ಸೈಮನ್ ಸ್ಟೀವನ್ಸ್ ಘೋಷಣೆ ಮಾಡಿದ್ದಾರೆ. ಸಾಮಾನ್ಯ ತೆರಿಗೆ ಹಣದ ಮೂಲಕ ಸರ್ಕಾರವು ಎನ್ಎಚ್ಎಸ್ಗೆ ಔಷಧಿಯನ್ನು ಒದಗಿಸುತ್ತದೆ. ಆದ್ದರಿಂದ ಅದು ಒಪ್ಪಿಗೆ ನೀಡುವ ಔಷಧ ಹಾಗೂ ವೈದ್ಯಕೀಯ ಚಿಕಿತ್ಸೆಯು ಅದರ ಪರಿಣಾಮಕಾರಿ ಬೆಲೆಯ ಕಾರಣಕ್ಕೆ ಕಠಿಣವಾದ ವಿಶ್ಲೇಷಣೆಗೆ ಒಳಪಡಬೇಕು.
ಝೋಲ್ಗೆಸ್ಮಾ ಉತ್ಪಾದಿಸಿರುವುದು ನೊವಾರ್ಟೀಸ್ ಜೀನ್ ಥೆರಪೀಸ್ (ಇದು ಯು.ಎಸ್. ಫಾರ್ಮಾಸ್ಯುಟಿಕಲ್ ನೊವಾರ್ಟೀಸ್ ಭಾಗ). ಅಧ್ಯಯನದಲ್ಲಿ ಗೊತ್ತಾಗಿರುವುದೇನೆಂದರೆ, ವೆಂಟಿಲೇಟರ್ ಸಹಾಯ ಇಲ್ಲದೆ ಮಕ್ಕಳಿಗೆ ಉಸಿರಾಡಲು, ಸ್ವತಂತ್ರವಾಗಿ ಎದ್ದುಕೂರಲು, ತೆವಳಲು ಮತ್ತು ನಡೆಯಲು ಈ ಔಷಧದಿಂದ ಸಾಧ್ಯವಾಗುತ್ತದೆ. ಒಮ್ಮೆ ಚಿಕಿತ್ಸೆ ಆರಂಭಿಸಿದ ತಕ್ಷಣ ಈ ಬೆಳವಣಿಗೆ ಕಾಣಬಹುದು. ಈಚಿನ ಮಾಹಿತಿ ಪ್ರಕಾರ, ಟೈಪ್ 1 ಎಸ್ಎಂಎ ಇರುವ ಮಕ್ಕಳಲ್ಲಿ ಝೋಲ್ಗೆಸ್ಮಾದಿಂದ ವೇಗವಾದ ಹಾಗೂ ಸ್ಥಿರವಾದ ಚೇತರಿಕೆ ಕಾಣುತ್ತದೆ. ಜೀವತಾವಧಿ ಜಾಸ್ತಿ ಆಗುತ್ತದೆ. 80ರಷ್ಟು ಮಕ್ಕಳು ಒಂದು ವರ್ಷದಲ್ಲಿ ಈ ಥೆರಪಿಯಿಂದ ಅನುಕೂಲ ಪಡೆಯುತ್ತವೆ ಎಂದು ಎನ್ಎಚ್ಎಸ್ ಹೇಳಿದೆ.
Spinal Muscular Atrophy | ಕಂದನ ಉಳಿಸು ಕರ್ನಾಟಕ: ನಟ ಸುದೀಪ್, ಪ್ರೇಮ್ ಸೇರಿದಂತೆ ನೂರಾರು ಗಣ್ಯರಿಂದ ಸಹಾಯ
Published On - 6:21 pm, Tue, 9 March 21