ಪೋಪ್ ನಿಧನದ ನಂತ್ರ ಏನು? ರಿಂಗ್ ನಾಶ, ಮನೆ ಲಾಕ್ ಯಾಕೆ? ಫಿಶರ್ಮ್ಯಾನ್ ರಿಂಗ್ನ ಮಹತ್ವವೇನು?
What happens after Pope's death: ಪೋಪ್ ಆದ ಅಮೆರಿಕದ ಮೊದಲ ವ್ಯಕ್ತಿ ಎನಿಸಿದ್ದ ಪೋಪ್ ಫ್ರಾನ್ಸಿಸ್ ಸ್ವರ್ಗಸ್ಥರಾಗಿದ್ದಾರೆ. ಅವರ ಉಂಗುರ ಮತ್ತು ಸೀಲ್ ಅನ್ನು ನಾಶ ಮಾಡಲಾಗುತ್ತದೆ. ಮುಂದಿನ ಐದಾರು ದಿನದೊಳಗೆ ಅವರ ಅಂತ್ಯಕ್ರಿಯೆ ನಡೆಯುತ್ತದೆ. 9 ದಿನ ಶೋಕಾಚರಣೆ ಇರುತ್ತದೆ. ಆ ಬಳಿಕ ಹೊಸ ಪೋಪ್ ಆಯ್ಕೆ ನಡೆಯುತ್ತದೆ.

ಜನರ ಪೋಪ್ ಎಂದೇ ಖ್ಯಾತರಾಗಿದ್ದ ಮತ್ತು ಹಲವು ಮೊದಲುಗಳಿಗೆ ಮುನ್ನುಡಿ ಬರೆದಿದ್ದ ವ್ಯಾಟಿಕನ್ ಪರಮೋಚ್ಚ ಧರ್ಮಗುರುವಾಗಿದ್ದ ಪೋಪ್ ಫ್ರಾನ್ಸಿಸ್ (Pope Francis passes away) ಇಹಲೋಕ ತ್ಯಜಿಸಿದರೆಂದು ವ್ಯಾಟಿಕನ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪೋಪ್ ಎಂಬುದು ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪಟ್ಟ. ಸೇಂಟ್ ಪೀಟರ್ ಮೊದಲ ಪೋಪ್ ಎನಿಸಿದ್ದಾರೆ. ಈಗ ಸ್ವರ್ಗಸ್ಥರಾದ ಪೋಪ್ ಫ್ರಾನ್ಸಿಸ್ ಅವರು 266ನೇ ಪೋಪ್ ಆಗಿದ್ದರು.
ಪೋಪ್ ನಿಧನದ ನಂತರ ಮುಂದಿನ ಕಾರ್ಯಗಳು…
ಪೋಪ್ ಅವರು ನಿಧನರಾಗಿದ್ದಾರೆ ಎಂದು ಯಾರಂದವರು ಪ್ರಕಟಿಸುವಂತಿಲ್ಲ. ಕ್ಯಾಮರ್ಲೆಂಗೋ ಅವರು ಪೋಪ್ ನಿಧನವಾರ್ತೆಯನ್ನು ದೃಢಪಡಿಸುತ್ತಾರೆ. ಸದ್ಯ, ವ್ಯಾಟಿಕನ್ನ ಕ್ಯಾಮರ್ಲೆಂಗೋ ಆಗಿರುವುದು ಐರಿಷ್ ದೇಶದ ಕಾರ್ಡಿನಲ್ ಕೆವಿನ್ ಫ್ಯಾರೆಲ್.
ಕೆವಿನ್ ಫ್ಯಾರೆಲ್ ಅವರು ಸಂಪ್ರದಾಯದ ಪ್ರಕಾರ, ಪೋಪ್ ಫ್ರಾನ್ಸಿಸ್ ವಾಸಿಸುವ ಮನೆಯನ್ನು ಮೊದಲು ಲಾಕ್ ಮಾಡುತ್ತಾರೆ. ಈ ಹಿಂದೆ, ಮನೆಗೆ ಯಾರೂ ಕೂಡ ನುಗ್ಗಿ ಹೋಗದಂತೆ ತಡೆಯಲು ಬೀಗ ಹಾಕಲಾಗುತ್ತಿತ್ತು. ಈಗ ಅದೇ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.
ಈಗ ಪೋಪ್ ಬಳಿ ಇದ್ದ ಫಿಶರ್ಮ್ಯಾನ್ ರಿಂಗ್ ಮತ್ತು ಸೀಲ್ ಅನ್ನು ನಾಶ ಮಾಡಲಾಗುತ್ತದೆ. ಅವನ್ನು ಗುರುತು ಸಿಗದ ರೀತಿಯಲ್ಲಿ ಜಜ್ಜಲಾಗುತ್ತದೆ. ಈ ರೀತಿ ನಾಶ ಮಾಡಿದ ಬಳಿಕವಷ್ಟೇ ಒಬ್ಬ ಪೋಪ್ನ ಅವಧಿ ಮುಗಿಯಿತು ಎಂದರ್ಥ.
ಇದನ್ನೂ ಓದಿ: Pope Francis passes away: ಪೋಪ್ ಫ್ರಾನ್ಸಿಸ್ ನಿಧನ, ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಇನ್ನಿಲ್ಲ
ಮೀನುಗಾರನ ಉಂಗುರದ ಮಹತ್ವ ಏನು?
ಮೀನುಗಾರ ಮೀನು ಹಿಡಿಯುವ ಚಿತ್ರದ ಉಂಗುರಕ್ಕೆ ಐತಿಹಾಸಿಕ ಮಹತ್ವ ಇದೆ. ಯೇಸುವಿನ ಮೊದಲ ಅನುಯಾಯಿಗಳೆಲ್ಲರೂ ಮೀನುಗಾರರೇ ಆಗಿದ್ದರು. ಯೇಸು ಕೂಡ ಅಪ್ರತಿಮ ಮೀನುಗಾರರಾಗಿದ್ದರಂತೆ. ಮೊದಲ ಪೋಪ್ ಎನಿಸಿದ ಪೀಟರ್ ಅವರು ಯೇಸುವಿನಿಂದ ಈ ಮೀನುಗಾರಿಕೆ ವಿದ್ಯೆ ಕಲಿತಿದ್ದರು. ಪ್ರತೀ ಪೋಪ್ ಕೂಡ ಪ್ರತ್ಯೇಕವಾದ ಮೀನುಗಾರನ ಉಂಗುರವನ್ನು ಧರಿಸುವುದು ವಾಡಿಕೆ.
ಜನರು ಪೋಪ್ ಅನ್ನು ಭೇಟಿಯಾದಾಗ ಈ ರಿಂಗ್ಗೆ ಮುತ್ತಿಡುತ್ತಾರೆ. ಇದು ಯೇಸುವಿಗೆ ಚುಂಬಿಸಿದಂತೆ.
ಆರು ದಿನದೊಳಗೆ ಪೋಪ್ ಅಂತ್ಯಕ್ರಿಯೆ
ಪೋಪ್ ಸ್ವರ್ಗಸ್ಥರಾದ ಬಳಿಕ 4-6 ದಿನದೊಳಗೆ ಅಂತ್ಯಕ್ರಿಯೆ ನಡೆಯಬೇಕು. ಎಲ್ಲಿ ಮಣ್ಣು ಮಾಡಬೇಕೆಂದು ಪೋಪ್ ಬದುಕಿದ್ದಾಗಲೇ ನಿರ್ಧರಿಸಬಹುದು. ಹಾಗೊಂದು ವೇಳೆ ಆ ನಿರ್ಧಾರ ಆಗಿಲ್ಲದೇ ಇದ್ದಲ್ಲಿ, ಅವರ ನಿಧನದ ಬಳಿಕ ವ್ಯಾಟಿಕನ್ನಲ್ಲಿರುವ ಸೇಂಟ್ ಪೀಟರ್ಸ್ ಬ್ಯಾಸಿಲಿಕಾದಲ್ಲಿ ಮಣ್ಣು ಮಾಡಲಾಗುತ್ತದೆ.
ಅಂತ್ಯಕ್ರಿಯೆ ಬಳಿಕ 9 ದಿನ ಶೋಕಾಚರಣೆ ನಡೆಯುತ್ತದೆ. ಎಲ್ಲಾ ಕ್ಯಾಥೋಲಿಕ್ ಚರ್ಚ್ಗಳಲ್ಲೂ ಮೌನಾಚರಣೆ ಏರ್ಪಡಿಸಲಾಗುತ್ತದೆ.
ಇದನ್ನೂ ಓದಿ: ಹಿಂದೂಫೋಬಿಯಾ ವಿರುದ್ಧ ಸಂಸತ್ನಲ್ಲಿ ಗೊತ್ತುವಳಿ; ಸ್ಕಾಟ್ಲ್ಯಾಂಡ್ ಇತಿಹಾಸದಲ್ಲಿ ಇದೇ ಮೊದಲು
ಹೊಸ ಪೋಪ್ನ ಆಯ್ಕೆ ಹೇಗೆ?
ಪೋಪ್ ಆಯ್ಕೆ ಪ್ರಜಾತಾಂತ್ರಿಕ ರೀತಿಯಲ್ಲಿ ಜರುತ್ತದೆ. ಪೋಪ್ ನಿಧನವಾಗಿ ಅಂತ್ಯಕ್ರಿಯೆ ಮುಗಿದು, ಶೋಕಾಚರಣೆ ಸಮಾಪ್ತಿಗೊಂಡ ಬಳಿಕ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಸಾಮಾನ್ಯವಾಗಿ ಇದು ಪೋಪ್ ನಿಧನದ 15-20 ದಿನದಲ್ಲಿ ಪ್ರಕ್ರಿಯೆ ಆರಂಭವಾಗುತ್ತದೆ.
80 ವರ್ಷದೊಳಗಿನ ವಯಸ್ಸಿನ ಎಲ್ಲಾ ಕಾರ್ಡಿನಲ್ಗಳು ವ್ಯಾಟಿಕನ್ನಲ್ಲಿ ಸೇರಿ ಹೊಸ ಪೋಪ್ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ಇದು ಬಹಳ ರಹಸ್ಯವಾಗಿ ನಡೆಯುತ್ತದೆ. ಹೊರಗಿನ ಯಾರೂ ಕೂಡ ಸಮೀಪಕ್ಕೆ ಬರುವಂತಿಲ್ಲ. ಎಲ್ಲಾ ಕಾರ್ಡಿನಲ್ಗಳ ಫೋನ್ ಸಂಪರ್ಕ ಕಟ್ ಆಗಿರುತ್ತದೆ.
ಹೊಸ ಪೋಪ್ ಆಗಬೇಕೆನ್ನುವ ವ್ಯಕ್ತಿಗಳ ಹೆಸರು ಇರುತ್ತದೆ. ಈ ಕಾರ್ಡಿನಲ್ಗಳು ಮತದಾನದ ಮೂಲಕ ಹೊಸ ಪೋಪ್ ಆಯ್ಕೆ ಮಾಡುತ್ತಾರೆ. ಹಲವು ಸುತ್ತುಗಳ ಮತದಾನ ನಡೆಯುತ್ತದೆ. ಇಲ್ಲಿ ಮತಪತ್ರ ಬಳಕೆ ಆಗುತ್ತದೆ. ಒಬ್ಬ ಅಭ್ಯರ್ಥಿಗೆ ಮೂರನೇ ಎರಡರಷ್ಟು ಬಹುಮತ ಸಿಗುವವರೆಗೂ ವೋಟಿಂಗ್ ನಡೆಯುತ್ತದೆ. ಹೊಸ ಪೋಪ್ ಯಶಸ್ವಿಯಾಗಿ ಆಯ್ಕೆಯಾದ ಬಳಿಕ ಬಿಳಿ ಹೊಗೆಯನ್ನು ಹೊರಗೆ ಹಾಯಿಸಲಾಗುತ್ತದೆ.
ಪೋಪ್ಗಳಿಗೆ ಮೂಲ ಹೆಸರು ಹೊರಟುಹೋಗುತ್ತದೆ…
ಪೋಪ್ ಆಗಿ ಆಯ್ಕೆಯಾದವರ ಮೂಲ ಹೆಸರನ್ನು ಕೈಬಿಡಲಾಗುತ್ತದೆ. ಶತಮಾನಗಳ ಹಿಂದೆ ಧರ್ಮಗುರುಗಳಾಗಿದ್ದವರ ಹೆಸರನ್ನೇ ಹೊಸ ಪೋಪ್ಗೂ ಇಡಲಾಗುತ್ತದೆ.
ಈಗ ಸ್ವರ್ಗಸ್ಥರಾದ ಪೋಪ್ ಫ್ರಾನ್ಸಿಸ್ ಅವರ ಮೂಲ ಹೆಸರು ಜಾರ್ಜೆ ಮಾರಿಯೋ ಬರ್ಗೋಗ್ಲಿಯೋ. ಪೋಪ್ ಆಗಿ ಆಯ್ಕೆಯಾದ ಬಳಿಕ ಧರ್ಮಗುರು ಫ್ರಾನ್ಸಿಸ್ ಅವರ ಹೆಸರನ್ನು ಅವರಿಗೆ ಇಡಲಾಯಿತು.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ