Narendra Modi: ಇಂದಿರಾ ಬಳಿಕ ಈ ಸೌದಿ ನಗರಕ್ಕೆ ಭೇಟಿ ನೀಡಲಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ
Narendra Modi Saudi visit: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಏಪ್ರಿಲ್ 22 ಸೌದಿ ಅರೇಬಿಯಾಗೆ ಎರಡು ದಿನದ ಪ್ರವಾಸ ಕೈಗೊಂಡಿದ್ದಾರೆ. ಇದರಲ್ಲಿ ಸೌದಿಯ ಎರಡನೇ ಅತಿದೊಡ್ಡ ನಗರವಾದ ಜೆದ್ದಾಗೂ ಮೋದಿ ಹೋಗಿಬರಲಿದ್ದಾರೆ. 1982ರಲ್ಲಿ ಇಂದಿರಾ ಬಳಿಕ ಭಾರತದ ಪ್ರಧಾನಿಯೊಬ್ಬರು ಜೆದ್ದಾಗೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ನವದೆಹಲಿ, ಏಪ್ರಿಲ್ 22: ನಿನ್ನೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತವರ ಕುಟುಂಬವನ್ನು (JD Vance and Family) ಸತ್ಕರಿಸಿ, ವ್ಯಾನ್ಸ್ ಜೊತೆ ಮಹತ್ವದ ವ್ಯಾಪಾರ ಮಾತುಕತೆ ನಡೆಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಇವತ್ತು ಸೌದಿ ಅರೇಬಿಯಾಗೆ (Narendra Modi Saudi visit) ಎರಡು ದಿನದ ಪ್ರವಾಸ ಆರಂಭಿಸಿದ್ದಾರೆ. ಸೌದಿ ಅರೇಬಿಯಾದ ಪ್ರಧಾನಿ ಹಾಗೂ ರಾಜಕುಮಾರರೂ ಆದ ಮೊಹಮ್ಮದ್ ಬಿನ್ ಸಲ್ಮಾನ್ (Mohammed bin Salman) ಅವರು ಈ ಹಿಂದೆ ಪ್ರಧಾನಿ ಮೋದಿಯನ್ನು ತಮ್ಮ ದೇಶಕ್ಕೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಎರಡು ದಿನದ ಪ್ರವಾಸ ಕೈಗೊಂಡಿದ್ದಾರೆ. ನಿರೀಕ್ಷೆಯಂತೆ, ಈ ಭೇಟಿಯಲ್ಲಿ ಭಾರತ ಮತ್ತು ಸೌದಿ ನಡುವಿನ ಸಂಬಂಧವನ್ನು ಬಲಪಡಿಸುವ ಪ್ರಯತ್ನಗಳು ನಡೆಯಲಿವೆ.
ಮೋದಿ ಭೇಟಿಗೆ ಮುನ್ನವೇ ಈ ಎರಡು ದೇಶಗಳ ನಡುವಿನ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಹಲವು ಸುತ್ತುಗಳ ಸಭೆ, ಮಾತುಕತೆಗಳು ನಡೆದಿವೆ. ಕಳೆದ ವರ್ಷ (2024) ಭಾರತದಿಂದ ಸೌದಿ ಅರೇಬಿಯಾಗೆ 11 ಸಚಿವ ಮಟ್ಟದ ಭೇಟಿಗಳು ನಡೆದಿದ್ದವು.
ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಮೋದಿ-ವ್ಯಾನ್ಸ್ ಮಾತುಕತೆಯ ಪ್ರಮುಖ ಅಂಶಗಳು
ಒಂದೇ ತಕ್ಕಡಿಯಲ್ಲಿರುವ ಭಾರತ, ಸೌದಿ ಅರೇಬಿಯಾ
ಸೌದಿ ಅರೇಬಿಯಾ ಜೊತೆ ಭಾರತದ ಸಂಬಂಧ ಬಹಳ ವರ್ಷಗಳಿಂದ ಉತ್ತಮವಾಗಿದೆ. ಎರಡೂ ದೇಶಗಳ ಜಾಗತಿಕ ರಾಜಕೀಯ ಮತ್ತು ಆರ್ಥಿಕ ಗತಿ ಏಕರೀತಿಯಲ್ಲಿವೆ. ಎರಡಊ ದೇಶಗಳು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳ ಸಾಲಿನಲ್ಲಿವೆ. ಜಾಗತಿಕ ಶ್ರೇಣಿ ವ್ಯವಸ್ಥೆಯಲ್ಲಿ ಎರಡೂ ಕೂಡ ಮಹತ್ವದ ಪಾತ್ರ ಹೊಂದಿವೆ. ಅಮೆರಿಕ, ರಷ್ಯಾ, ಇಬ್ಬರ ಜೊತೆಯೂ ಸ್ನೇಹ ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತ ಮತ್ತು ಸೌದಿ ಸೇರಿವೆ. ಡೊನಾಲ್ಡ್ ಟ್ರಂಪ್, ವ್ಲಾದಿಮಿರ್ ಪುಟಿನ್, ವೊಲೋಡಿಮಿರ್ ಝೆಲೆನ್ಸ್ಕಿ, ಈ ಮೂವರ ಜೊತೆಯೂ ನರೇಂದ್ರ ಮೋದಿ ಮತ್ತು ಸಲ್ಮಾನ್ ಉತ್ತಮ ಸಂಬಂಧ ಹೊಂದಿದ್ದಾರೆ.
ನಾಲ್ಕು ದಶಕಗಳ ಬಳಿಕ ಜೆದ್ದಾಗೆ ಭೇಟಿ ನೀಡಲಿರುವ ಭಾರತದ ಪ್ರಧಾನಿ
ನರೇಂದ್ರ ಮೋದಿ ಅವರು ಈ ಬಾರಿಯ ಸೌದಿ ಅರೇಬಿಯಾ ಭೇಟಿಯಲ್ಲಿ ಜೆದ್ದಾ ನಗರಕ್ಕೆ ಹೋಗುವ ಯೋಜನೆಯೂ ಇದೆ. 1982ರಲ್ಲಿ ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಅವರು ಜೆದ್ದಾಗೆ ಹೋಗಿದ್ದರು. ಅದಾದ ಬಳಿಕ ಭಾರತದ ಪ್ರಧಾನಿಯೊಬ್ಬರು ಅಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.
ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಪತ್ನಿ ಉಷಾ ಲವ್ ಸ್ಟೋರಿ; ನೆಟ್ಫ್ಲಿಕ್ಸ್ನಲ್ಲೂ ಇದೆ ಒಂದು ಸಿನಿಮಾ
ನರೇಂದ್ರ ಮೋದಿ ಈ ಹಿಂದೆ ಸೌದಿಗೆ ಹೋಗಿದ್ದರಾದರೂ ಜೆದ್ದಾಗೆ ಹೋಗಿರಲಿಲ್ಲ. ಸೌದಿ ರಾಜಧಾನಿ ರಿಯಾಧ್ಗೆ ಮಾತ್ರ ಹೋಗಿ ಬಂದಿದ್ದರು.
ಐತಿಹಾಸಿಕ ಮಹತ್ವದ ಜೆದ್ದಾ
ಸೌದಿ ಅರೇಬಿಯಾ ರಾಜಧಾನಿ ರಿಯಾಧ್ ಬಿಟ್ಟರೆ ಜೆದ್ದಾ ಆ ದೇಶದ ಅತಿದೊಡ್ಡ ನಗರ ಎನಿಸಿದೆ. ಕೆಂಪು ಸಮುದ್ರದ ಕರಾವಳಿಯಲ್ಲಿರುವ ಜೆದ್ದಾ ನಗರ ಸೌದಿಯ ಕಮರ್ಷಿಯಲ್ ಹಬ್ ಎನಿಸಿದೆ. ಮುಸ್ಲಿಮರಿಗೆ ಪವಿತ್ರ ಎನಿಸಿರುವ ಮೆಕ್ಕಾ ಮತ್ತು ಮದೀನಾಗೆ ಹೋಗಬೇಕೆನ್ನುವವರು ಜೆದ್ದಾ ಮೂಲಕ ಹೋಗಬೇಕು. ಜೆದ್ದಾ ಬಂದರಿನಲ್ಲಿ ಇಳಿದು ಅಲ್ಲಿಂದ ಮೆಕ್ಕಾ, ಮದೀನಾಗೆ ಹೋಗುತ್ತಾರೆ ಯಾತ್ರಿಕರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Tue, 22 April 25