Kailash Mansarovar Yatra 2025: ಐದು ವರ್ಷಗಳ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ
ಐದು ವರ್ಷಗಳ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಜೂನ್ 30 ರಿಂದ ಮರು ಆರಂಭವಾಗುತ್ತಿದೆ. ಉತ್ತರಾಖಂಡ ಸರ್ಕಾರ ಮತ್ತು ಭಾರತೀಯ ವಿದೇಶಾಂಗ ಸಚಿವಾಲಯದ ಆಶ್ರಯದಲ್ಲಿ ಯಾತ್ರೆಯ ಕುರಿತು ಸೋಮವಾರ ನವದೆಹಲಿಯಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ, ತೀರ್ಥಯಾತ್ರೆಯನ್ನು ಪುನರಾರಂಭಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ದೆಹಲಿಯಿಂದ 250 ಯಾತ್ರಿಗಳು ಐದು ಗುಂಪುಗಳಾಗಿ ಪ್ರಯಾಣಿಸಲಿದ್ದಾರೆ. ಲಿಪುಲೇಖ್ ಪಾಸ್ ಮೂಲಕ ಚೀನಾವನ್ನು ಪ್ರವೇಶಿಸಿ, 22 ದಿನಗಳ ಪ್ರಯಾಣದ ನಂತರ ದೆಹಲಿಗೆ ಮರಳಲಿದ್ದಾರೆ.

ಕೊರೊನಾ ವೈರಸ್ ಇಡೀ ಜಗತ್ತನ್ನೇ ಭೀಕರವಾಗಿ ಕಾಡಿತ್ತು. ಇದರಿಂದಾಗಿ ಸರಿಸುಮಾರು ಐದು ವರ್ಷಗಳಿಂದ ನಿಂತು ಹೋಗಿದ್ದ ಕೈಲಾಸ ಮಾನಸ ಸರೋವರ ಯಾತ್ರೆ ಇದೀಗ ಮತ್ತೆ ಜೂನ್ 30 ರಿಂದ ಪುನರಾರಂಭವಾಗಲಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ. ಉತ್ತರಾಖಂಡ ಸರ್ಕಾರ ಮತ್ತು ಭಾರತೀಯ ವಿದೇಶಾಂಗ ಸಚಿವಾಲಯದ ಆಶ್ರಯದಲ್ಲಿ ಯಾತ್ರೆಯ ಕುರಿತು ಸೋಮವಾರ ನವದೆಹಲಿಯಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ, ತೀರ್ಥಯಾತ್ರೆಯನ್ನು ಪುನರಾರಂಭಿಸುವ ಬಗ್ಗೆ ಚರ್ಚಿಸಲಾಗಿದೆ.
ಕೈಲಾಸ ಮಾನಸ ಸರೋವರ ಯಾತ್ರೆಯು ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ 17,000 ಅಡಿ ಎತ್ತರದಲ್ಲಿರುವ ಲಿಪುಲೇಖ್ ಪಾಸ್ ಮೂಲಕ ಹಾದು ಹೋಗಲಿದೆ. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸ ಪರ್ವತವು ಶಿವನ ವಾಸಸ್ಥಾನವಾಗಿದ್ದು, ಮತ್ತು ಅದನ್ನು ಪ್ರದಕ್ಷಿಣೆ ಹಾಕಿ ಮಾನಸ ಸರೋವರದಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ಈ ಯಾತ್ರೆಯನ್ನು 2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಯಿತು ಮತ್ತು ಅಂದಿನಿಂದ ಅದನ್ನು ನಡೆಸಲು ಸಾಧ್ಯವಾಗಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಪ್ರಯತ್ನದಿಂದಾಗಿ, ಈ ವರ್ಷವೂ ಇದನ್ನು ನಡೆಸಲಾಗುವುದು ಎಂದು ತಿಳಿದುಬಂದಿದೆ.
ಜೂನ್ 30 ರಂದು ದೆಹಲಿಯಿಂದ ಯಾತ್ರೆ ಪ್ರಾರಂಭವಾಗಲಿದ್ದು, ತಲಾ 50 ಜನರ ಐದು ಗುಂಪುಗಳಿದ್ದು, ಒಟ್ಟು 250 ಭಕ್ತರು ಭಾಗವಹಿಸಲಿದ್ದಾರೆ. ಕೈಲಾಸ ಮಾನಸ ಸರೋವರ ಯಾತ್ರೆಯ ಮೊದಲ ಗುಂಪು ಜುಲೈ 10 ರಂದು ಲಿಪುಲೇಖ್ ಪಾಸ್ ಮೂಲಕ ಚೀನಾವನ್ನು ಪ್ರವೇಶಿಸಲಿದ್ದು, ಕೊನೆಯ ಗುಂಪು ಆಗಸ್ಟ್ 22 ರಂದು ಚೀನಾದಿಂದ ಭಾರತಕ್ಕೆ ತೆರಳಲಿದೆ.
ಇದನ್ನೂ ಓದಿ: ದೇವಾಲಯ ನಿರ್ಮಾಣವಾಗುತ್ತಿದ್ದಾಗಲೇ ಕೊಳಕ್ಕೆ ಹಾರಿದ ಶಿಲ್ಪಿ,ಇಂದಿಗೂ ಅಪೂರ್ಣವಾಗಿರುವ ಶಿವ ದೇವಾಲಯ!
ಪ್ರತಿ ತಂಡವು ದೆಹಲಿಯಿಂದ ಹೊರಟು ಉತ್ತರಾಖಂಡದ ಚಂಪಾವತ್ ಜಿಲ್ಲೆಯ ತನಕಪುರದಲ್ಲಿ ಒಂದು ರಾತ್ರಿ, ಪಿಥೋರಗಢ ಜಿಲ್ಲೆಯ ಧಾರ್ಚುಲಾದಲ್ಲಿ ಒಂದು ರಾತ್ರಿ, ಗುಂಜಿಯಲ್ಲಿ ಎರಡು ರಾತ್ರಿ ಮತ್ತು ನಭಿದಂಗ್‌ನಲ್ಲಿ ಎರಡು ರಾತ್ರಿ ತಂಗುವ ಮೂಲಕ ಚೀನಾದ ತಕ್ಲಕೋಟ್‌ಗೆ ಪ್ರವೇಶಿಸಲಿದೆ.
ಕೈಲಾಸಕ್ಕೆ ಭೇಟಿ ನೀಡಿದ ನಂತರ, ಪ್ರಯಾಣಿಕರು ಚೀನಾದಿಂದ ಹೊರಟು ಪಿಥೋರಗಢ ಜಿಲ್ಲೆಯ ಬುಂಡಿಯಲ್ಲಿ ಒಂದು ರಾತ್ರಿ, ಚೌಕೋರಿಯಲ್ಲಿ ಒಂದು ರಾತ್ರಿ ಮತ್ತು ಅಲ್ಮೋರಾದಲ್ಲಿ ಒಂದು ರಾತ್ರಿ ತಂಗುವ ಮೂಲಕ ದೆಹಲಿ ತಲುಪಲಿದ್ದಾರೆ. ಹೀಗಾಗಿ, ಪ್ರತಿ ತಂಡವು ಒಟ್ಟು 22 ದಿನಗಳವರೆಗೆ ಪ್ರಯಾಣಿಸುತ್ತದೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗುವ ಎಲ್ಲಾ ಯಾತ್ರಿಕರ ಆರೋಗ್ಯ ತಪಾಸಣೆಯನ್ನು ಮೊದಲು ದೆಹಲಿಯಲ್ಲಿ ಮತ್ತು ನಂತರ ಗುಂಜಿಯಲ್ಲಿ ಮಾಡಲಾಗುವುದು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:25 am, Tue, 22 April 25