ತಾಕತ್ತಿದ್ರೆ ಬಂದು ಹಿಡಿ ಎಂದು ಟ್ರಂಪ್​ಗೆ ಸವಾಲೆಸೆದಿದ್ದ ವೆನಿಜುವೆಲಾ ಅಧ್ಯಕ್ಷ; ಸದ್ದಿಲ್ಲದೆ ಬಂಧಿಸಿ ಕರೆದೊಯ್ದ ಅಮೆರಿಕ ಸೇನೆ

Venezuela president had challenged Trump to arrest him: ತಾಕತ್ತಿದ್ದರೆ ಬಂದು ಹಿಡಿ ಎಂದು ಡೊನಾಲ್ಡ್ ಟ್ರಂಪ್​ಗೆ ಕೆಲ ತಿಂಗಳ ಹಿಂದಷ್ಟೇ ವೆನಿಜುವೆಲಾ ಅಧ್ಯಕ್ಷರು ಸವಾಲೆಸೆದಿದ್ದರು. ಅಮೆರಿಕ ಸಮಯ ನೋಡಿಕೊಂಡು ನಿಕೋಲಾಸ್ ಮಡುರೊರನ್ನು ಸೆರೆ ಹಿಡಿದು ಕರೆದೊಯ್ದಿದೆ. ಅಮೆರಿಕದಲ್ಲಿ ಕೊಕೇನ್ ಸೇರಿದಂತೆ ಮಾದಕ ವಸ್ತು ಕಳ್ಳಸಾಗಣೆ ದಂದೆಯಲ್ಲಿ ವೆನಿಜುವೆಲಾ ಪಾತ್ರ ಇದೆ ಎಂಬುದು ಅಮೆರಿಕದ ಆರೋಪ.

ತಾಕತ್ತಿದ್ರೆ ಬಂದು ಹಿಡಿ ಎಂದು ಟ್ರಂಪ್​ಗೆ ಸವಾಲೆಸೆದಿದ್ದ ವೆನಿಜುವೆಲಾ ಅಧ್ಯಕ್ಷ; ಸದ್ದಿಲ್ಲದೆ ಬಂಧಿಸಿ ಕರೆದೊಯ್ದ ಅಮೆರಿಕ ಸೇನೆ
ನಿಕೋಲಾಸ್ ಮಡುರೊ

Updated on: Jan 04, 2026 | 5:36 PM

ವಾಷಿಂಗ್ಟನ್, ಜನವರಿ 4: ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊ (Nicolas Maduro) ಅವರನ್ನು ಅಮೆರಿಕದ ಯೋಧರು ಬಂಧಿಸಿ ಕರೆದೊಯ್ದ ಬೆನ್ನಲ್ಲೇ ವೈಟ್​ಹೌಸ್​ನಿಂದ ವಿಡಿಯೋವೊಂದು ಬಿಡುಗಡೆ ಆಗಿದೆ. ಅದರಲ್ಲಿ ಮಡುರೊ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೇಡಿ (coward) ಎಂದು ಕರೆಯುತ್ತಿರುವುದು, ಸವಾಲು ಎಸೆಯುತ್ತಿರುವುದು ಕೇಳಿಬಂದಿದೆ. ಅಮೆರಿಕದ ಈ ಅಧ್ಯಕ್ಷರೊಂದಿಗೆ ಈ ರೀತಿ ಆಟ ಆಡಿದರೆ ಇದೇ ಶಾಸ್ತಿಯಾಗುತ್ತದೆ ಎಂದು ಈ ವಿಡಿಯೋದಲ್ಲಿ ಮೆಸೇಜ್ ಕೊಡಲಾಗಿದೆ.

ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊ ತಮ್ಮ ಮಿಲಿಟರಿ ನೆಲೆಯಲ್ಲಿರುವ ಮನೆಯಲ್ಲಿ ಇದ್ದಾಗ ಮುಂಜಾವಿನಲ್ಲಿ ಅಮೆರಿಕದ ಸೈನಿಕರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಹೈ ಸೆಕ್ಯೂರಿಟಿ ವ್ಯವಸ್ಥೆ ಇದ್ದರೂ ಅಮೆರಿಕನ್ ಸೈನಿಕರು ಮನೆಗೆ ನುಗ್ಗಿ ವೆನಿಜುವೆಲಾ ಅಧ್ಯಕ್ಷ ಮಡುರೊ ಮತ್ತವರ ಪತ್ನಿ ಫ್ಲೋರೆಸ್ ಅವರನ್ನು ಹಿಡಿದು, ಕರೆದೊಯ್ದಿದ್ದಾರೆ.

ಇದನ್ನೂ ಓದಿ: ವೆನೆಜುವೆಲಾ ಅಧ್ಯಕ್ಷ ಮಡುರೊ, ಅವರ ಪತ್ನಿಯನ್ನು ಸೆರೆಹಿಡಿದಿದ್ದೇವೆ; ದಾಳಿಯ ಬಳಿಕ ಟ್ರಂಪ್ ಘೋಷಣೆ

ವರ್ಷದ ಹಿಂದೆ ಟ್ರಂಪ್​ಗೆ ಸವಾಲು ಹಾಕಿದ್ದ ಮಡುರೊ

‘ಬಂದು ನನ್ನ ಹಿಡಿ. ಮಿರಾಫ್ಲೋರೆಸ್​ನಲ್ಲಿ ನಾನು ಕಾಯುತ್ತಿರುತ್ತೇನೆ. ತಡ ಮಾಡವೋ ಹೇಡಿ’ ಎಂದು ಆಗಸ್ಟ್ ತಿಂಗಳಲ್ಲಿ ನಿಕೋಲಾಸ್ ಮಡುರೊ ಭಾಷಣವೊಂದರಲ್ಲಿ ಹೇಳಿದ್ದರು. ಮಡುರೊ ಬಂಧನ ಸಾಧ್ಯವಾಗುವಂತಹ ಸುಳಿವನ್ನು ನೀಡಿದವರಿಗೆ ಬಹುಮಾನದ ಮೊತ್ತವನ್ನು ಅಮೆರಿಕ ಸರ್ಕಾರ ಹೆಚ್ಚಿಸಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ನಿಕೋಲಾಸ್ ಈ ಸವಾಲು ಹಾಕಿದ್ದರು.

ಇದೀಗ ಅಮೆರಿಕ ಅಧ್ಯಕ್ಷರ ಗೃಹ ಕಚೇರಿಯಾದ ವೈಟ್​ಹೌಸ್, ವೆನಿಜುವೆಲಾ ಅಧ್ಯಕ್ಷರನ್ನು ಅಪಹಾಸ್ಯ ಮಾಡುವ ವಿಡಿಯೋ ಬಿಡುಗಡೆ ಮಾಡಿದೆ. ಅಮೆರಿಕಕ್ಕೆ ಮಡುರೊ ಸವಾಲು ಎಸೆಯುತ್ತಿರುವ ದೃಶ್ಯದ ಜೊತೆಗೆ, ಅವರನ್ನು ಅಮೆರಿಕನ್ ಸೈನಿಕರು ಹಿಡಿಯುತ್ತಿರುವ ದೃಶ್ಯ ಇವೆಲ್ಲವೂ ಆ ವಿಡಿಯೋದಲ್ಲಿದೆ. ‘ಮಡುರೊ ಅವಕಾಶ ಉಳಿಸಿಕೊಳ್ಳಲಿಲ್ಲ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್​ಸೆಟ್ ಹೇಳಿರುವ ದೃಶ್ಯವೂ ಆ ವಿಡಿಯೋದಲ್ಲಿದೆ.

ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ

ಮಾದಕ ವಸ್ತು ಸರಬರಾಜು, ಅಕ್ರಮ ಶಸ್ತ್ರಾಸ್ತ್ರ ಇತ್ಯಾದಿ ವಿವಿಧ ಆರೋಪಗಳನ್ನು ವೆನಿಜುವೆಲಾ ಅಧ್ಯಕ್ಷರ ಮೇಲೆ ಅಮೆರಿಕ ಹಾಕಿದೆ. ಅಮೆರಿಕಕ್ಕೆ ವೆನಿಜುವೆಲಾ ಮೂಲಕ ಕೊಕೇನ್ ಇತ್ಯಾದಿ ಸಾಕಷ್ಟು ಮಾದಕ ವಸ್ತುಗಳು ಸರಬರಾಜು ಆಗುತ್ತಿವೆ. ಅಮೆರಿಕವು ತನ್ನ ನೆರೆ ದೇಶದ ಮೇಲೆ ಆಕ್ರಮಣ ಮಾಡಲು ಇದ್ದ ಕಾರಣಗಳಲ್ಲಿ ಇದೂ ಒಂದು.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ