ಜೋರ್ಡಾನ್: ಜನಪ್ರತಿನಿಧಿಗಳಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿಯಾಗಬೇಕಾದ ರಾಜಕಾರಣಿಗಳೇ ಜೋರ್ಡಾನ್ ಸಂಸತ್ನಲ್ಲಿ ಹೊಡೆದಾಡಿಕೊಂಡಿರುವ ಆಘಾತಕಾರಿ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ. ಈ ಹಿಂದೆ ಕರ್ನಾಟಕದ ವಿಧಾನಸಭೆಯಲ್ಲೂ ಇದೇ ರೀತಿ ಎರಡು ಪಕ್ಷದವರು ಸದನದೊಳಗೆ ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗಿತ್ತು. ಅದೇ ರೀತಿಯ ಘಟನೆ ಜೋರ್ಡಾನ್ ಸಂಸತ್ನಲ್ಲಿ ನಡೆದಿದ್ದು, ಸಂಸದರು ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಜೋರ್ಡಾನ್ ಸಂಸತ್ತಿನಲ್ಲಿ ಸಾಂವಿಧಾನಿಕ ಸುಧಾರಣೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ. ವರದಿಗಳ ಪ್ರಕಾರ, ದೇಶದ ಸಂವಿಧಾನದ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಗದ್ದಲ ನಡೆದಿದೆ. ಅದರ ನಂತರ ಸಂಸದರು ಪರಸ್ಪರ ಗುದ್ದಾಡುತ್ತಾ ಮತ್ತು ತಳ್ಳುತ್ತಾ, ಬಾಯಿಗೆ ಬಂದಂತೆ ಬೈದುಕೊಳ್ಳುತ್ತಾ ಸಂಸತ್ ಕಲಾಪವನ್ನು ಅಸ್ತವ್ಯಸ್ತಗೊಳಿಸಿದರು.
ಜೋರ್ಡಾನ್ ಸಂಸತ್ತಿನಲ್ಲಿ ಇಂದು ಸಾಂವಿಧಾನಿಕ ಸುಧಾರಣೆಗಳ ಕುರಿತು ನೇರ ಪ್ರಸಾರದ ಚರ್ಚೆಯ ಸಂದರ್ಭದಲ್ಲಿ ಸಂಸದರು ಕೈ ಕೈ ಮಿಲಾಯಿಸಿಕೊಂಡ ಘಟನೆ ನಡೆಯಿತು. ಇಂದಿನ ಕಲಾಪದಲ್ಲಿ ಹಲವಾರು ಜನಪ್ರತಿನಿಧಿಗಳು ಕರಡು ತಿದ್ದುಪಡಿಯನ್ನು ಚರ್ಚಿಸಿದ್ದಾರೆ. ಆದರೆ ಜೋರ್ಡಾನ್‌ನ ರಾಜಧಾನಿ ಅಮ್ಮಾನ್‌ನಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಡೆದ ಬಿಸಿ ಚರ್ಚೆಯ ಸಂದರ್ಭದಲ್ಲಿ ಸಂಸದರು ಕೋಪದಿಂದ ಈ ತಿದ್ದುಪಡಿ ‘ನಿಷ್ಪ್ರಯೋಜಕ’ ಎಂದು ಕೂಗಿದರು. ಆ ದೃಶ್ಯ ಅಲ್-ಮಮಲಕಾ ದೂರದರ್ಶನ ಚಾನೆಲ್‌ನಲ್ಲಿ ನೇರ ಪ್ರಸಾರವಾಯಿತು. ನಂತರ ಸಂಸದರು ಪರಸ್ಪರ ಮೈ ಮುಟ್ಟಿಕೊಂಡು ಹೊಡೆದಾಡಿಕೊಂಡ ಘಟನೆಯೂ ನಡೆಯಿತು.
ಈ ವಿಡಿಯೋ ಕ್ಲಿಪ್ ಅನ್ನು ಟ್ವಿಟ್ಟರ್‌ನಲ್ಲಿ 60,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ತಳ್ಳಾಡುತ್ತಾ, ಹೊಡೆದಾಡಿಕೊಂಡು, ನಿಂದಿಸಿಕೊಳ್ಳುತ್ತಿರುವ ಸಂಸದರ ವಿಡಿಯೋಗೆ ಅನೇಕರು ಛೀಮಾರಿ ಹಾಕಿದ್ದಾರೆ. ಈ ಹೊಡೆದಾಟದಲ್ಲಿ ಓರ್ವ ಸಂಸದ ಕೆಳಗೆ ಬಿದ್ದ ಘಟನೆಯೂ ನಡೆಯಿತು. ಬಳಿಕ ಅಧಿವೇಶನವನ್ನು ನಾಳೆಗೆ ಮುಂದೂಡುವಂತೆ ಒತ್ತಾಯಿಸಲಾಯಿತು.
Debate on reforms sparks scuffles in #Jordan parliament
The argument erupted during an amendment adding the female noun for a Jordanian citizen, to a chapter in the constitution guaranteeing equal rights of all citizens
#الأردن#tuesdaymotivationspic.twitter.com/OcXuWo3VD8— خالد نيويورك (@KhaledEibid) December 28, 2021
ಡೈಲಿ ಮೇಲ್ ವರದಿಯ ಪ್ರಕಾರ, ಸಂಸತ್ತಿನ ಸ್ಪೀಕರ್ ಅಬ್ದುಲ್ ಕರೀಮ್ ದುಗ್ಮಿ ಮತ್ತು ಡೆಪ್ಯೂಟಿ ಸುಲೇಮಾನ್ ಅಬು ಯಾಹ್ಯಾ ನಡುವೆ ಜಗಳ ನಡೆದಿದೆ. ಈ ಹೊಡೆದಾಟದಲ್ಲಿ ಯಾರಿಗೂ ತೀವ್ರವಾದ ಗಾಯಗಳಾಗಿಲ್ಲ. ಜೋರ್ಡಾನ್‌ನ ಸಂವಿಧಾನವನ್ನು 1952ರಿಂದ 29 ಬಾರಿ ತಿದ್ದುಪಡಿ ಮಾಡಲಾಗಿದೆ. ರಾಜಮನೆತನದ ಆಯೋಗದಿಂದ ಈ ವರ್ಷ ಸಂವಿಧಾನಕ್ಕೆ ಪ್ರಸ್ತಾಪಿಸಲಾದ ತಿದ್ದುಪಡಿಗಳು ರಾಷ್ಟ್ರದ ಸಂಸದರಿಗೆ ತಮ್ಮ ಪ್ರಧಾನಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ನೀಡುತ್ತವೆ. ಆದಾಗ್ಯೂ, ತಿದ್ದುಪಡಿಗಳು ರಾಜನ ಅಧಿಕಾರವನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದು ವಿಮರ್ಶಕರು ಹೇಳುತ್ತಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಮಂಡಿ ನೋವು: ಪ್ರಧಾನಿಯನ್ನೇ ಬದಲಾಯಿಸದ ನಾವು ಸಿಎಂ ಬದಲಾಯಿಸ್ತೇವಾ? -ಸಂಸದ ಪ್ರತಾಪ್