ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ಭಾರತದ ಮೇಲೆ ದಾಳಿ ನಡೆಸಿದ್ದೇವೆ; ಕೊನೆಗೂ ಒಪ್ಪಿಕೊಂಡ ಪಾಕಿಸ್ತಾನ!

ದೆಹಲಿಯ ಕೆಂಪು ಕೋಟೆ ಬಳಿಯ ಮೆಟ್ರೋ ಸ್ಟೇಷನ್ ಹೊರಗೆ ನಡೆದ ಕಾರು ಬಾಂಬ್ ದಾಳಿಯ ಹಿಂದೆ ಉಗ್ರರ ಕೈವಾಡವಿದೆ ಎಂದು ಭಾರತದ ಎನ್​ಐಎ ತನಿಖೆಯಲ್ಲಿ ಬಹಿರಂಗವಾಗಿತ್ತು. ಇದೀಗ ಖುದ್ದು ಪಾಕಿಸ್ತಾನವೇ ಈ ಬಗ್ಗೆ ದೊಡ್ಡ ಸತ್ಯ ಹೊರಹಾಕಿದೆ. ಪಾಕಿಸ್ತಾನದ ನಾಯಕ ಚೌಧರಿ ಅನ್ವರುಲ್ ಹಕ್ ಪಾಕಿಸ್ತಾನದ ಸದನದಲ್ಲಿ ಮಾತನಾಡುವಾಗ ತಮ್ಮದೇನೋ ದೊಡ್ಡ ಸಾಧನೆಯೆಂಬಂತೆ ಈ ವಿಚಾರವನ್ನು ಬಹಿರಂಗಪಡಿಸುವ ಮೂಲಕ ಜಗತ್ತಿನೆದುರು ಮತ್ತೊಮ್ಮೆ ಪಾಕಿಸ್ತಾನದ ಭಯೋತ್ಪಾದಕತೆಯ ಮುಖ ತೆರೆದಿಟ್ಟಿದ್ದಾರೆ!

ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ಭಾರತದ ಮೇಲೆ ದಾಳಿ ನಡೆಸಿದ್ದೇವೆ; ಕೊನೆಗೂ ಒಪ್ಪಿಕೊಂಡ ಪಾಕಿಸ್ತಾನ!
Chaudhry Anwarul Haq

Updated on: Nov 19, 2025 | 9:55 PM

ನವದೆಹಲಿ, ನವೆಂಬರ್ 19: ಪಾಕಿಸ್ತಾನದ ಉಗ್ರ ಸಂಘಟನೆ ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಗುಂಡಿನ ದಾಳಿ ನಡೆಸಿ 26 ಜನರನ್ನು ಬಲಿಪಡೆದಿತ್ತು. ಅದಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ್ (Operation Sindoor) ನಡೆಸಿತ್ತು. ಬಳಿಕ ಪಾಕಿಸ್ತಾನವೇ ಬೇಡಿಕೊಂಡ ನಂತರ ಕದನವಿರಾಮ ಘೋಷಿಸಲಾಗಿತ್ತು. ಇದೀಗ ಕಳೆದ ವಾರ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಬಾಂಬ್ ದಾಳಿಯ ಹಿಂದೆಯೂ ಪಾಕಿಸ್ತಾನದ ಸಂಘಟನೆಗಳ ಕೈವಾಡವಿದೆ ಎಂಬ ಸತ್ಯ ಹೊರಬಿದ್ದಿದೆ. ಪಾಕಿಸ್ತಾನದ (Pakistan) ರಾಜಕಾರಣಿ ಚೌಧರಿ ಅನ್ವರುಲ್ ಹಕ್ ಸ್ವತಃ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನಕ್ಕೆ ಸಂಬಂಧಿಸಿದ ಭಯೋತ್ಪಾದಕ ಗುಂಪುಗಳು ಭಾರತದಲ್ಲಿ “ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ” ದಾಳಿಗಳನ್ನು ನಡೆಸಿವೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅವರ ಈ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ, ಜಗತ್ತಿನ ಮುಂದೆ ಮತ್ತೊಮ್ಮೆ ಪಾಕಿಸ್ತಾನವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ.

ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರ್ ಬಾಂಬ್‌ ದಾಳಿಯಲ್ಲಿ 14 ಜನರು ಸಾವನ್ನಪ್ಪಿದ್ದರು. ಇದರ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರನ್ನು ಗುಂಡಿಕ್ಕಿ ಕೊಂದ ಘಟನೆಯನ್ನು ಉಲ್ಲೇಖಿಸಿ ಅನ್ವರುಲ್ ಹಕ್ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ದಾರಿ ತಪ್ಪಿದ ಮುಸ್ಲಿಮರು; ದೆಹಲಿ ಸ್ಫೋಟದ ಆರೋಪಿ ವಿಡಿಯೋಗೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅನ್ವರುಲ್ ಹಕ್ ಹೀಗೆ ಹೇಳಿದ್ದಾರೆ, “ನೀವು ನಮ್ಮನ್ನು ಟಾರ್ಗೆಟ್ ಮಾಡುತ್ತಲೇ ಇದ್ದರೆ ನಾವು ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ಭಾರತವನ್ನು ಹೊಡೆಯುತ್ತೇವೆ ಎಂದು ನಾನು ಮೊದಲೇ ಹೇಳಿದ್ದೆ. ಅಲ್ಲಾಹನ ದಯೆಯಿಂದ, ನಾವು ಅದನ್ನು ಮಾಡಿದ್ದೇವೆ. ದೆಹಲಿಯಲ್ಲಿ ಶಸ್ತ್ರಸಜ್ಜಿತ ಉಗ್ರರು ದಾಳಿ ಮಾಡಿದ್ದರು. ಭಾರತದವರಿಗೆ ಇನ್ನೂ ಆ ಶವಗಳನ್ನು ಎಣಿಸಲು ಕೂಡ ಸಾಧ್ಯವಾಗುತ್ತಿಲ್ಲ. ದೆಹಲಿಯಲ್ಲಿ ಇದುವರೆಗೂ ಎಲ್ಲ ಶವಗಳನ್ನು ಎಣಿಸಲು ಸಾಧ್ಯವಾಗುತ್ತಿಲ್ಲ” ಎಂದು ಅನ್ವರುಲ್ ಹಕ್ ಸದನದಲ್ಲಿ ಹೇಳಿಕೊಂಡಿದ್ದಾರೆ. ಅವರ ಈ ಹೇಳಿಕೆ ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನದ ಸ್ಪಷ್ಟ ಬೆಂಬಲವನ್ನು ಬಹಿರಂಗಪಡಿಸಿದೆ.


ಬಲೂಚಿಸ್ತಾನದಲ್ಲಿನ ಅಶಾಂತಿಗೆ ಭಾರತವನ್ನು ದೂಷಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ಭಾರತ ನಿರಂತರವಾಗಿ ತಿರಸ್ಕರಿಸಿದೆ. ಇಸ್ಲಾಮಾಬಾದ್ ತನ್ನ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟುಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಹೇಳಿಕೆಗಳನ್ನು ಬಳಸುತ್ತಿದೆ ಮತ್ತು ಭಾರತದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವುದನ್ನು ಮುಂದುವರೆಸಿದೆ ಎಂದು ಭಾರತ ಟೀಕಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಹೃದಯಭಾಗದಲ್ಲೇ ಇದೆ ಪಾಕಿಸ್ತಾನ, ಚೀನಾ ಪ್ರಜೆಗಳ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ! ಎಲ್ಲೆಲ್ಲ ಇವೆ ಗೊತ್ತೇ?

ಅಂದಹಾಗೆ, ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲ ಬಹಿರಂಗಗೊಂಡಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ಖೈಬರ್ ಪಖ್ತುನ್ಖ್ವಾ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ಇಸ್ಲಾಮಾಬಾದ್ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಭಯೋತ್ಪಾದಕ ಘಟನೆಗಳನ್ನು ತಯಾರಿಸುತ್ತಿದೆ ಎಂದು ಆರೋಪಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:55 pm, Wed, 19 November 25