ಕೊರೊನಾ ವೈರಾಣುವಿನ ಮೂಲ ಜಾಲಾಡಲು ಕೊನೆಗೂ ಚೀನಾಕ್ಕೆ ತೆರಳಲಿದೆ ವಿಶ್ವ ಆರೋಗ್ಯ ಸಂಸ್ಥೆ!
ಚೀನಾ ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದ ನಿಯೋಗದ ಭೇಟಿಗೆ ಅನುಮತಿ ನೀಡದೇ ಇರುವುದು ಬೇಸರದ ಸಂಗತಿ. ಕೊರೊನಾ ವೈರಾಣುವಿನ ಮೂಲಕ್ಕೆ ಸಂಬಂಧಿಸಿದಂತೆ ತನಿಖೆ ಆಗಬೇಕಿದೆ ಎಂದು ಟೆಡ್ರೋಸ್ ಅಧಾನೊಮ್ ಗೆಬ್ರಿಯೆಸಸ್ ತಿಳಿಸಿದ್ದಾರೆ.
ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ಎಂಬಂತಾಗಿದೆ ಕೊರೊನಾ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನಡಾವಳಿಗಳು. ಕೊರನಾ ಚೀನಾದಲ್ಲಿ ಉದ್ಭವವಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದ್ದು ಇದೀಗ ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಉಗಮದ ಬಗ್ಗೆ ಅಧ್ಯಯನ ಮಾಡಲು ತನ್ನ ನಿಯೋಗವೊಂದನ್ನು ಕಳಿಸಲು ಚಿಂತಿಸುತ್ತಿದೆ!
ಕೊರೊನಾ ವೈರಾಣುವಿನ ಜನಕ ಎಂಬ ಅಪಖ್ಯಾತಿಗೆ ತುತ್ತಾಗಿರುವ ಚೀನಾಕ್ಕೆ ಅತಿ ಶೀಘ್ರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಯೋಗ ಭೇಟಿ ನೀಡಲಿದೆ. ಈ ಬಗ್ಗೆ WHO ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಗೆಬ್ರಿಯೆಸಸ್ ಮಾಹಿತಿ ನೀಡಿದ್ದಾರೆ. ಕೊರೊನಾ ವೈರಾಣುವಿನ ಉಗಮಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಚೀನಾಕ್ಕೆ ಅತಿ ಶೀಘ್ರದಲ್ಲಿ ತೆರಳುವುದಾಗಿ ಹೇಳಿದ್ದಾರೆ.
ಚೀನಾ ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದ ನಿಯೋಗದ ಭೇಟಿಗೆ ಅನುಮತಿ ನೀಡದೇ ಇರುವುದು ಬೇಸರದ ಸಂಗತಿ. ಕೊರೊನಾ ವೈರಾಣುವಿನ ಮೂಲಕ್ಕೆ ಸಂಬಂಧಿಸಿದಂತೆ ತನಿಖೆ ಆಗಬೇಕಿದೆ. ಆದ್ದರಿಂದ ನಾವು ಇನ್ನೊಂದು ವಾರದಲ್ಲಿ ದಿನಾಂಕ ನಿಗದಿಪಡಿಸಲಿದ್ದೇವೆ ಎಂದು ಟೆಡ್ರೋಸ್ ಅಧಾನೊಮ್ ಗೆಬ್ರಿಯೆಸಸ್ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಪರಿಶೀಲನೆ ನಡೆಸಿದರೆ ಎಲ್ಲಿ ತನ್ನ ಗುಟ್ಟು ರಟ್ಟಾಗಬಹುದೋ ಎಂಬ ಕಾರಣಕ್ಕೂ ಚೀನಾ ಅವರ ಭೇಟಿಯನ್ನು ಮುಂದೂಡುತ್ತಿರುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳು ಇದೇ ಹೊತ್ತಿನಲ್ಲಿ ಕೇಳಿಬರುತ್ತಿವೆ.
ಚೀನಾದಲ್ಲಿ ಮತ್ತೆ ಸೋಂಕಿನ ಭೀತಿ.. ಕಠಿಣ ನಿಯಮಗಳ ಜಾರಿಗೆ ಮುಂದಾದ ಚೀನಾ ಸರ್ಕಾರ
Published On - 11:09 am, Sat, 9 January 21