Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ

ಬಹುತೇಕ ಲಸಿಕೆಗಳನ್ನು ತೋಳು ಭಾಗಕ್ಕೆ ನೀಡಲಾಗುತ್ತದೆ. ಇಂಟ್ರಾಮಸ್ಕುಲಾರ್ ಇಂಜೆಕ್ಷನ್ ಎಂದು ಅದನ್ನು ಕರೆಯಲಾಗುತ್ತದೆ. ರೋಟಾವೈರಸ್ ಲಸಿಕೆಗಳಂಥ ಕೆಲವೇ ಕೆಲವು ಲಸಿಕೆಗಳನ್ನು ಬಾಯಿಯ ಮೂಲಕವೂ ನೀಡಲಾಗುತ್ತದೆ.

Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ
ಕೊರೊನಾ ಲಸಿಕೆ (ಸಂಗ್ರಹ ಚಿತ್ರ)
Updated By: ganapathi bhat

Updated on: Apr 07, 2022 | 5:49 PM

ಕೊರೊನಾ ಲಸಿಕೆ ನೀಡಲು ಆರಂಭಿಸಿದ ಬಳಿಕ ಲಕ್ಷಾಂತರ ಮಂದಿ ಕೊವಿಡ್-19 ವಿರುದ್ಧ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಲಸಿಕೆ ಪಡೆದ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಲಸಿಕೆ ಪಡೆದ ಸಂಭ್ರಮ, ಜಾಗೃತಿ ಮೂಡಿಸಿದ್ದಾರೆ. ಹಾಗಾದರೆ, ಲಸಿಕೆಯನ್ನು ಯಾಕೆ ಕೈಗೇ ನೀಡಲಾಯಿತು? ಸೊಂಟಕ್ಕೆ ಯಾಕೆ ನೀಡಿಲ್ಲ? ಈ ಬಗ್ಗೆ ನಮ್ಮಲ್ಲಿ ಹಲವರಿಗೆ ಅನುಮಾನ ಮೂಡಿರಬಹುದು. ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಬಹುತೇಕ ಲಸಿಕೆಗಳನ್ನು ತೋಳು ಭಾಗಕ್ಕೆ ನೀಡಲಾಗುತ್ತದೆ. ಇಂಟ್ರಾಮಸ್ಕುಲಾರ್ ಇಂಜೆಕ್ಷನ್ ಎಂದು ಅದನ್ನು ಕರೆಯಲಾಗುತ್ತದೆ. ರೋಟಾವೈರಸ್ ಲಸಿಕೆಗಳಂಥ ಕೆಲವೇ ಕೆಲವು ಲಸಿಕೆಗಳನ್ನು ಬಾಯಿಯ ಮೂಲಕವೂ ನೀಡಲಾಗುತ್ತದೆ. ಉಳಿದಂತೆ ಹೆಚ್ಚಿನ ಲಸಿಕೆಗಳನ್ನು ತೋಳಿಗೇ ನೀಡುವುದಾಗಿದೆ.

ಹಾಗಾದರೆ ತೋಳು ಯಾಕೆ ಅಷ್ಟೊಂದು ಮುಖ್ಯವಾಗುತ್ತದೆ? ಇಂತಿಂಥಾ ಸ್ಥಳಕ್ಕೇ ಲಸಿಕೆ ನೀಡಬೇಕು ಎಂಬುದು ಯಾಕೆ ಅಷ್ಟೊಂದು ಮುಖ್ಯವಾಗುತ್ತದೆ? ತೋಳಿಗೆ ಲಸಿಕೆ ನೀಡುವುದು ಬಹಳ ಪರಿಣಾಮಕಾರಿಯಾಗಿದೆ. ತೋಳಿನಲ್ಲಿ ರೋಗನಿರೋಧಕ ಸೆಲ್​ಗಳು ಇರುತ್ತವೆ. ಅದರಿಂದ ಲಸಿಕೆಯ ಪರಿಣಾಮ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ. ತೋಳಿನಲ್ಲಿ ಇರುವ ಇಮ್ಯೂನ್ ಸೆಲ್​ಗಳು (ರೋಗನಿರೋಧಕ ಕಣಗಳು) ವೈರಾಣುವಿನ ಆ್ಯಂಟಿಜೆನ್ ಗುರುತಿಸಿಕೊಳ್ಳುತ್ತದೆ.

ಲಸಿಕೆಯ ಮೂಲಕ ದೇಹಕ್ಕೆ ಪರಿಚಯಿಸಲ್ಪಟ್ಟ ವೈರಸ್​ನ ಅಥವಾ ಬ್ಯಾಕ್ಟೀರಿಯಾದ ವಿರುದ್ಧ ತೋಳಿನ ಕಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ತೊಡಗುತ್ತದೆ. ತೋಳಿನ ಟಿಷ್ಯೂಗಳು ಈ ಆಂಟಿಜೆನ್​ಗಳನ್ನು ಪಡೆದುಕೊಂಡು ಲಿಂಫ್ ನೋಡ್​ಗಳಿಗೆ ಪರಿಚಯಿಸುತ್ತದೆ. ಆ ಮೂಲಕ ರೋಗನಿರೋಧಕ ಸೆಲ್​ಗಳಿಗೆ ತಮ್ಮ ಕೆಲಸ ಮಾಡಲು ಸೂಚನೆ ನೀಡುತ್ತದೆ.

ಲಿಂಫ್ ನೋಡ್​ಗಳು ನಮ್ಮ ರೋಗನಿರೋಧಕ ಶಕ್ತಿಯ ಮುಖ್ಯ ಭಾಗವಾಗಿದೆ. ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿ, ಆಂಟಿಜೆನ್​ಗಳನ್ನು ಸೂಕ್ಷ್ಮವಾಗಿ ಗುರುತಿಸಿ ದೇಹದ ರೋಗನಿರೋಧಕ ಶಕ್ತಿಯು ಕೆಲಸ ಮಾಡಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ, ಲಸಿಕೆಯನ್ನು ಹೆಚ್ಚು ಫ್ಯಾಟ್ ಅಂಶಗಳನ್ನು ಹೊಂದಿರುವ ದೇಹದ ಭಾಗಕ್ಕೆ ನೀಡಿದರೆ ಕೂಡ ಅಷ್ಟೊಂದು ಪ್ರಭಾವ ಉಂಟಾಗುವುದಿಲ್ಲ. ಫ್ಯಾಟ್ ಟಿಷ್ಯೂಗಳನ್ನು ಹೊಂದಿರುವ ದೇಹದ ಭಾಗದಲ್ಲಿ ರಕ್ತದ ಸಂಚಲನ ಪ್ರಮಾಣ ಕಡಿಮೆ ಇರುತ್ತದೆ. ಅದರಿಂದ ಲಸಿಕೆಯನ್ನು ಸ್ವೀಕರಿಸುವ ಪ್ರಮಾಣ ಕಡಿಮೆ ಇರುತ್ತದೆ.

ಲಸಿಕೆ ಪಡೆಯುವವರ ಅನುಕೂಲವೂ ಕಾರಣ
ಲಸಿಕೆಯನ್ನು ತೋಳಿಗೆ ನೀಡಲು ಲಸಿಕೆ ಪಡೆಯುವವರ ಅನುಕೂಲತೆಯ ವಿಚಾರವೂ ಕಾರಣವಾಗಿದೆ. ಸಾಮೂಹಿಕ ಲಸಿಕೆ ನೀಡಿಕೆ ವಿಧಾನದಲ್ಲಿ ಸಾರ್ವಜನಿಕವಾಗಿ ಎಲ್ಲರೂ ಪ್ಯಾಂಟ್ ತೆಗೆದು ಲಸಿಕೆ ಪಡೆಯುವುದು ಸಾಧ್ಯವಿಲ್ಲ. ಹಾಗಾಗಿಯೂ ತೋಳು ಮಡಚಿ ಲಸಿಕೆ ಪಡೆಯುವುದು ಹೆಚ್ಚು ಸರಿ ಎನಿಸುತ್ತದೆ. ಇಂಥಾ ಸಂದರ್ಭದಲ್ಲಿ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಹಾಗಾಗಿ ತೋಳಿಗೆ ಲಸಿಕೆ ನೀಡುವುದು ಚಾಲ್ತಿಯಲ್ಲಿದೆ.

ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ನೀಡುವ ಸ್ಟಿರಾಯ್ಡ್​ನಿಂದ ಸಕ್ಕರೆ ಖಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು; ಇಲ್ಲಿದೆ ವಿವರ

ಎರಡನೇ ಡೋಸ್​ ಕೊರೊನಾ ಲಸಿಕೆ ಪಡೆಯುವುದು ತಡವಾದರೆ ಶೇ.300ರಷ್ಟು ಪ್ರತಿಕಾಯಗಳು ವೃದ್ಧಿಯಾಗುತ್ತವೆ: ಅಧ್ಯಯನ

Published On - 4:50 pm, Sat, 22 May 21