ಟೆಕ್ಸಾಸ್: ಹೃದಯ ಶಸ್ತ್ರಚಿಕಿತ್ಸೆ ನಂತರ ನಾಲ್ಕು ರೋಗಿಗಳಿಗೆ ಗಾಳಿಯನ್ನು ಚುಚ್ಚುವ ಮೂಲಕ ಹತ್ಯೆ ಮಾಡಿದ ಟೆಕ್ಸಾಸ್ನ ಸೀರಿಯಲ್ ಕಿಲ್ಲರ್ ನರ್ಸ್ ತಪ್ಪಿತಸ್ಥ ಎಂದು ಸಾಬೀತಾಗಿದೆ. ಹಾಲ್ಸ್‌ವಿಲ್ಲೆಯ 37 ವರ್ಷದ ವಿಲಿಯಂ ಡೇವಿಸ್ (William Davis) ಮಂಗಳವಾರ ಅಕ್ಟೋಬರ್ 19 ರಂದು ನಡೆದ ಕೊಲೆಗಳಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿತ್ತು. ಪ್ರಸ್ತುತ ಕಠಿಣ ಶಿಕ್ಷೆ ಎದುರಿಸುತ್ತಿದ್ದಾರೆ. 2017 ಮತ್ತು 2018 ರಲ್ಲಿ, ಡೇವಿಸ್ ಎಂಬ ನರ್ಸ್ ಕ್ರಿಸ್ಟಸ್ ಟ್ರಿನಿಟಿ ಮದರ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಸಂಬಂಧಿತ ಹೃದಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಜಾನ್ ಲಾಫರ್ಟಿ, ರೊನಾಲ್ಡ್ ಕ್ಲಾರ್ಕ್, ಕ್ರಿಸ್ಟೋಫರ್ ಗ್ರೀನ್ ವೇ ಮತ್ತು ಜೋಸೆಫ್ ಕಲಿನಾ ಅವರ ಅಪಧಮನಿಗಳಿಗೆ ( arteries) ಗಾಳಿಯನ್ನು ಚುಚ್ಚಿದ್ದಾರೆ. ಪ್ರಾಸಿಕ್ಯೂಟರ್‌ಗಳು ಡೇವಿಸ್‌ನನ್ನು ಸರಣಿ ಕೊಲೆಗಾರ ಎಂದು ಹೇಳಿದ್ದು ಆತ ಹತ್ಯೆಯನ್ನು ಆನಂದಿಸಿದ್ದರಿಂದಲೇ ಈ ರೀತಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಆದ್ದರಿಂದ ಡೇವಿಸ್ ಗೆ ಮರಣದಂಡನೆ ವಿಧಿಸ ಬೇಕು ಎಂದು ಪ್ರಾಸಿಕ್ಯೂಟರ್ ಒತ್ತಾಯಿಸಿದ್ದಾರೆ.
ಜನರನ್ನು ಕೊಲ್ಲುವುದು ಡೇವಿಸ್ ಗೆ ಇಷ್ಟವಾಗಿತ್ತು
ವಿಚಾರಣೆಯ ಸಮಯದಲ್ಲಿ ಡಲ್ಲಾಸ್ ಪ್ರದೇಶದ ಶ್ವಾಸಕೋಶಶಾಸ್ತ್ರಜ್ಞ ಮತ್ತು ಆಂತರಿಕ ಔಷಧದ ಪ್ರಾಧ್ಯಾಪಕ ಡಾ ವಿಲಿಯಂ ಯಾರ್‌ಬ್ರೊ ಮೆದುಳಿನ ಅಪಧಮನಿಯ ವ್ಯವಸ್ಥೆಗೆ ಗಾಳಿಯನ್ನು ಚುಚ್ಚುವುದು ಹೇಗೆ ಮಿದುಳಿನ ಗಾಯ ಮತ್ತು ಸಾವಿಗೆ ಕಾರಣವಾಗುತ್ತದೆ ಎಂದು ತೀರ್ಪುಗಾರರಿಗೆ ತಿಳಿಸಿದರು. ಮೆದುಳಿನ ಸ್ಕ್ಯಾನ್ ಮಾಡಿದ ಚಿತ್ರ ನೋಡಿದರೆ ಸಾವಿಗೀಡಾದ ವ್ಯಕ್ತಿಗಳ ಅಪಧಮನಿಯ ವ್ಯವಸ್ಥೆಯಲ್ಲಿ ಗಾಳಿ ಇದೆ ಎಂದು ನಿರ್ಧರಿಸಲು ಸಾಧ್ಯವಾಯಿತು ಎಂದು ಯಾರ್‌ಬ್ರೊ ಹೇಳಿದರು. ಅವರು ತಮ್ಮ ದಶಕಗಳ ಕಾಲದ ವೈದ್ಯಕೀಯ ವೃತ್ತಿಜೀವನದಲ್ಲಿ ಈ ರೀತಿ ಈವರೆಗೆ ನೋಡಿಲ್ಲ ಎಂದು ಹೇಳಿದ್ದಾರೆ.
ರಕ್ತದ ಒತ್ತಡದ ಸಮಸ್ಯೆಗಳು ಅಥವಾ ಗಾಳಿಯ ಇಂಜೆಕ್ಷನ್ ಹೊರತುಪಡಿಸಿ ಯಾವುದೇ ಇತರ ಕಾರಣಗಳಿಂದಾಗಿ ಆ ವ್ಯಕ್ತಿಗಳು ಸಾಯಲಿಲ್ಲ ಎಂದು ಅವರು ಹೇಳಿದರು. ಫಿಕ್ಷನ್ ನಲ್ಲಿ (ಕಾಲ್ಪನಿಕ ಕತೆ) ಗಾಳಿಯನ್ನು ಚುಚ್ಚುಮದ್ದಿನ ಮೂಲಕ ನೀಡಿ ಕೊಲ್ಲುವ ವಿಧಾನವನ್ನು ಲಾರ್ಡ್ ಪೀಟರ್ ವಿಮ್ಸೆಯವರ 1928 ರ ಮಿಸ್ಟರಿ ಮಿಸ್ಟರಿ ಕಾದಂಬರಿ ‘Unnatural Death ‘ ಮತ್ತು ನಂತರ 1985 ಟಿವಿ ಸರಣಿ ‘Shadow Chasers’ ನಲ್ಲಿ ತೋರಿಸಲಾಗಿದೆ. ಅಲ್ಲಿ ನರ್ಸ್ ಈ ವಿಧಾನ ಬಳಸಿ ಏಳು ಮಂದಿಯನ್ನು ಕೊಲ್ಲುವ ಕಥೆ ಇದೆ. ಸಾವು ಸಂಭವಿಸಿದಾಗ ಡೇವಿಸ್‌ನನ್ನು ಮಾತ್ರ ಆರೋಪಿಯಾಗಿದ್ದರಿಂದ ಆಸ್ಪತ್ರೆಯು ಡೇವಿಸ್‌ನನ್ನು ಬಲಿಪಶುವಾಗಿ ಬಳಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿವಾದಿಗಳ ವಕೀಲ ಫಿಲಿಪ್ ಹೇಯ್ಸ್ ತೀರ್ಪುಗಾರರಿಗೆ ತಿಳಿಸಿದರೆ, ಪ್ರಾಸಿಕ್ಯೂಟರ್ ಕ್ರಿಸ್ ಗೇಟ್‌ವುಡ್ ಡೇವಿಸ್ “ಜನರನ್ನು ಕೊಲ್ಲಲು ಇಷ್ಟಪಟ್ಟಿದ್ದಾರೆ” ಎಂದು ವಾದಿಸಿದ್ದಾರೆ.
ಅವನು ಕೋಣೆಗೆ ಹೋಗಿ ಗಾಳಿಯನ್ನು ಚುಚ್ಚಿದನು. ನೀವು ಜೋಸೆಫ್ ಕಲಿನಾ ಪ್ರಕರಣದಲ್ಲಿ ವಿಡಿಯೊವನ್ನು ನೋಡಿದರೆ ಅವನು ಹಾಲ್ನ ಮೂಲೆಯಲ್ಲಿ ಕುಳಿತು ಆ ಮಾನಿಟರ್‌ಗಳನ್ನು ವೀಕ್ಷಿಸುತ್ತಾ ಕಾಯುತ್ತಿರುವುದು ಕಾಣುತ್ತದೆ. ಯಾಕೆಂದರೆ ಅವನು ಅದನ್ನು ಇಷ್ಟ ಪಡುತ್ತಾನೆ ಎಂದು ಗೇಟ್ ವುಡ್ ಹೇಳಿದ್ದಾರೆ.
ಬಂಧನಕ್ಕಿಂತ ಮುಂಚೆಯೇ ಡೇವಿಸ್ ಆಸ್ಪತ್ರೆಯಿಂದ ವಜಾಗೊಂಡಿದ್ದ
ಟೈಲರ್ ಮಾರ್ನಿಂಗ್ ಟೆಲಿಗ್ರಾಂ ಪ್ರಕಾರ, ಜೂನ್ 2017 ರಲ್ಲಿ 61 ವರ್ಷದ ವ್ಯಕ್ತಿ ಕ್ರಿಸ್ಟಸ್ ಮದರ್ ಫ್ರಾನ್ಸಿಸ್ ನಲ್ಲಿ “ಸ್ಟ್ರೋಕ್ ತರಹದ ರೋಗಲಕ್ಷಣಗಳನ್ನು ಹೋಲುವ ಒಂದು ಆಳವಾದ ಮತ್ತು ವಿವರಿಸಲಾಗದ ಘಟನೆಯನ್ನು” ಅನುಭವಿಸಿದಾಗ ಕೊಲೆಗಳ ಸರಣಿಯು ಪ್ರಾರಂಭವಾಯಿತು. ಒಂದೇ ಆಸ್ಪತ್ರೆಯಲ್ಲಿ ಒಂದು ತಿಂಗಳೊಳಗೆ 58 ವರ್ಷದ ವ್ಯಕ್ತಿ ಇದೇ ರೀತಿಯ ರೋಗಲಕ್ಷಣಗಳನ್ನು ಅನುಭವಿಸಿದರು.
ಗ್ರೀನ್ ವೇ ಆಗಸ್ಟ್ 2, 2017 ರಂದು ಪರಿಧಮನಿಯ (coronary artery) ಬೈಪಾಸ್ ಕಸಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗ್ರೀನ್ ವೇ ಚೇತರಿಸಿಕೊಳ್ಳುತ್ತಿರುವಾಗ ಅವರಿಗೆ ನಿಯೋಜನೆಯಾಗಿದ್ದ ನರ್ಸ್ ಊಟದ ವಿರಾಮದ ವೇಳೆ ರೋಗಿಯನ್ನು ನೋಡಿಕೊಳ್ಳುವಂತೆ ಡೇವಿಡ್ ಗೆ ಹೇಳಿದ್ದರು. ಊಟದ ವಿರಾಮ ಮುಗಿಸಿ ಹಿಂತಿರುಗಿದಾಗ ನರವೈಜ್ಞಾನಿಕ ತೊಂದರೆಯಿಂದ ಗ್ರೀನ್ ವೇ ನರಳುತ್ತಿದ್ದರು. ಆಮೇಲೆ 47 ವರ್ಷದ ಸೇನಾ ಅನುಭವಿ ಗ್ರೀನ್ ವೇ ಬ್ರೈನ್ ಡೆಡ್ ಎಂದು ಘೋಷಿಸಲಾಯಿತು ಮತ್ತು ಆಗಸ್ಟ್ 6 ರಂದು ಅವರು ನಿಧನರಾದರು.
ಅಫಿಡವಿಟ್‌ನ ಪ್ರಕಾರ ಡೇವಿಸ್ ಅವರು ಜೋಸೆಫ್ ಕಲಿನಾ ಅವರ ಕೋಣೆಗೆ ಜನವರಿ 25, 2018 ರ ಬೆಳಿಗ್ಗೆ ಪ್ರವೇಶಿಸಿ ಒಂದು ನಿಮಿಷದ ನಂತರ ಹೊರಟು ಹೋದರು ಎಂದು ಸೆಕ್ಯುರಿಟಿ ವಿಡಿಯೊ ತೋರಿಸುತ್ತದೆ. ಮೂರು ನಿಮಿಷಗಳ ನಂತರ ರಕ್ತದೊತ್ತಡ ಹೆಚ್ಚಾದಾಗ ಕಲಿನಾ ಅವರ ಹೃದಯ ಬಡಿತ ಕುಸಿಯಿತು. ಇದು ಶಾಶ್ವತ ಮಿದುಳಿನ ಹಾನಿಯನ್ನುಂಟು ಮಾಡಿತು ಮತ್ತು ಅದು ಸ್ವತಃ ಮಾತನಾಡುವ ಅಥವಾ ಆಹಾರ ನೀಡುವ ಸಾಮರ್ಥ್ಯವನ್ನು ಕಸಿದುಕೊಂಡಿತು. ಅವರು ಕಳೆದ ವರ್ಷ ನಿಧನರಾದರು.
ಫೆಬ್ರವರಿ 2018 ರಲ್ಲಿ ಡೇವಿಸ್‌ನನ್ನು ಕ್ರಿಸ್ಟಸ್ ಮದರ್ ಫ್ರಾನ್ಸಿಸ್ ಆಸ್ಪತ್ರೆಯಿಂದ ವಜಾ ಮಾಡಲಾಯಿತು ಒಂದೆರಡು ತಿಂಗಳ ನಂತರ, ಸ್ಟ್ರೋಕ್ ತರಹದ ರೋಗಲಕ್ಷಣಗಳನ್ನು ಅನುಭವಿಸಿದ ನಾಲ್ಕು ರೋಗಿಗಳು ಸಾವಿಗೀಡಾದಾಗ ಅಲ್ಲಿದ್ದದ್ದು ಡೇವಿಡ್ ಮಾತ್ರ ಎಂದು ಗೊತ್ತಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
Published On - 12:55 pm, Thu, 21 October 21