ಆತ್ಮಹತ್ಯಾ ಬಾಂಬರ್ಗಳ ಸಂಬಂಧಿಗಳಿಗೆ ಸೈಟು, ನಗದು ಬಹುಮಾನ ಘೋಷಣೆ ಮಾಡಿದ ತಾಲಿಬಾನ್‌ಗಳು
ಆತ್ಮಹತ್ಯಾ ಬಾಂಬರ್ಗಳ ಸಂಬಂಧಿಕರಿಗೆ ನಗದು, ಸೈಟುಗಳನ್ನು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಘೋಷಣೆ ಮಾಡಿದೆ. ಈ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಅಮೆರಿಕ ಮತ್ತು ಆಫ್ಘನ್ ಸೈನಿಕರ ಮೇಲೆ ದಾಳಿ ನಡೆಸುವ ಆತ್ಮಹತ್ಯಾ ಬಾಂಬರ್ಗಳ ಸಂಬಂಧಿಗಳಿಗೆ ಸೈಟುಗಳನ್ನು ನೀಡುವುದಾಗಿ ತಾಲಿಬಾನ್ ಭರವಸೆ ನೀಡುತ್ತಿದೆ. ಅಂತರರಾಷ್ಷ್ರೀಯ ಸಮುದಾಯದ ಮಾನ್ಯತೆ ಪಡೆಯುವುದಕ್ಕೆ ಹೆಣಗುತ್ತಿರುವ ತಾಲಿಬಾನ್ಗೆ ಇದು ಅಡ್ಡಗಾಲಾಗಲಿದೆ. ತಾಲಿಬಾನ್ನ ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ, ಕಾಬೂಲ್ನ ಹೋಟೆಲ್ನಲ್ಲಿ ಸೇರಿದ್ದ ಬಾಂಬರ್ಗಳ ಹತ್ತಾರು ಸಂಬಂಧಿಕರಿಗೆ ಈ ಬಹುಮಾನದ ಆಫರ್ ನೀಡಿದ್ದಾಗಿ ಆಂತರಿಕ ಸಚಿವಾಲಯದ ವಕ್ತಾರರಾದ ಸಯೀದ್ ಖೋಸ್ಟಿ ಟ್ವೀಟ್ ಮಾಡಿದ್ದಾನೆ. ಸೋಮವಾರ ಸಂಜೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಕ್ಕಾನಿ, ಆತ್ಮಹತ್ಯಾ ದಾಳಿಯಲ್ಲಿ ಹೋರಾಡಿದ “ಹುತಾತ್ಮರು ಮತ್ತು ಫಿದಾಯಿನ್ಗಳ” ಹೊಗಳಿದ್ದು, ಅವರನ್ನೆಲ್ಲ ಇಸ್ಲಾಮ್ ಮತ್ತು ದೇಶದ ಹೀರೋಗಳು ಎಂದು ಬಣ್ಣಿಸಿರುವುದಾಗಿ ವಕ್ತಾರ ಮಾಹಿತಿ ನೀಡಿದ್ದಾನೆ. ಸಭೆಯ ಕೊನೆಯಲ್ಲಿ 10,000 ಆಫ್ಘನೀಸ್ (112 ಯುಎಸ್ಡಿ)ಯನ್ನು ಪ್ರತಿ ಕುಟುಂಬಕ್ಕೆ ಹಂಚಲಾಗಿದೆ ಮತ್ತು ಪ್ರತಿಯೊಬ್ಬರಿಗೆ ಸೈಟು ನೀಡುವ ಭರವಸೆ ಕೊಡಲಾಗಿದೆ.
ಹಕ್ಕಾನಿಯ ಫೋಟೋವನ್ನು ಖೋಸ್ಟಿ ಪೋಸ್ಟ್ ಮಾಡಿದ್ದು, ಮುಖವನ್ನು ಕಾಣದಂತೆ ಮಸುಕು ಮಾಡಲಾಗಿದೆ. ಅಫ್ಘಾನಿಸ್ತಾನದಲ್ಲಿ ತಮ್ಮ ಆಡಳಿತವನ್ನು ಔಪಚಾರಿಕವಾಗಿ ಗುರುತಿಸಲು ಇಷ್ಟವಿಲ್ಲದ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ರಾಜತಾಂತ್ರಿಕ ಮಾರ್ಗಗಳನ್ನು ತೆರೆಯಲು ತಾಲಿಬಾನ್ ಪ್ರಯತ್ನಿಸಿದಂತೆ ಈ ಘಟನೆಯು ನಡೆದಿದೆ. ವಿದೇಶಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ತಾಲಿಬಾನ್ ಸಭೆಗಳು ಬಡ ಅಫ್ಘಾನಿಸ್ತಾನಿಗಳಿಗೆ ನೆರವು ಪಡೆಯುವತ್ತ ಗಮನ ಹರಿಸಿದ್ದು, ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಇಡೀ ಜನಸಂಖ್ಯೆಯು ಬಡತನಕ್ಕೆ ಜಾರುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ. ಆತ್ಮಹತ್ಯೆ ಬಾಂಬ್ ದಾಳಿಗೆ ಬಹುಮಾನಗಳನ್ನು ನೀಡುವ ಭರವಸೆಯು ತಾಲಿಬಾನ್ ನಾಯಕತ್ವದೊಳಗೆ ಬಿಕ್ಕಟ್ಟನ್ನು ಸೃಷ್ಟಿಸಿದೆ. ತಾವು ಜವಾಬ್ದಾರಿಯುತ ನಾಯಕರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಎಲ್ಲರಿಗೂ ಭದ್ರತೆ ನೀಡುವ ಭರವಸೆ ನೀಡಿದ್ದಾರೆ. ತಮ್ಮ ವಿರೋಧಿ ಬಣ ಇಸ್ಲಾಮಿಕ್ ಸ್ಟೇಟ್ ಸಮೂಹದ ಆತ್ಮಹತ್ಯಾ ದಾಳಿಯ ಹೇಳಿಕೆಯನ್ನು ಖಂಡಿಸಿದ್ದಾರೆ. ಮತ್ತೊಂದು ಕಡೆ, ತಮ್ಮ ಅನುಯಾಯಿಗಳ ಇಂಥ ರಣತಂತ್ರವನ್ನು ಮೆಚ್ಚಿದ್ದಾರೆ.
ಅಂತರರಾಷ್ಟ್ರೀಯ ನಿರ್ಬಂಧಗಳ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಅಮೆರಿಕದ ಖಾತೆಗಳಲ್ಲಿ ಶತಕೋಟಿ ಡಾಲರ್ ಆಫ್ಘನ್ ಸ್ವತ್ತುಗಳನ್ನು ಸ್ಥಗಿತ ಮಾಡಿರುವುದರಿಂದ ತಾಲಿಬಾನ್‌ಗಳು ಅಮೆರಿಕವನ್ನು ದೂರವಿಡಲು ಸಾಧ್ಯವಿಲ್ಲ. ಹಿಂದಿನ ಸರ್ಕಾರದ ವೆಚ್ಚದ ಶೇ 75ಕ್ಕೆ ಸಮನಾದ ವಿತರಣೆಯನ್ನು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ನಿಲ್ಲಿಸಿವೆ. ಅದೇ ಸಮಯದಲ್ಲಿ ಬೆಳೆಯುತ್ತಿರುವ ಐಎಸ್ ಬೆದರಿಕೆಯ ಹಿನ್ನೆಲೆಯಲ್ಲಿ ತಾಲಿಬಾನ್‌ಗಳು ತಮ್ಮ ಕಠಿಣವಾದ ನೆಲೆಯನ್ನು ಕಳೆದುಕೊಳ್ಳಲು ಕೂಡ ಸಾಧ್ಯವಿಲ್ಲ. ಆತ್ಮಹತ್ಯಾ ಬಾಂಬ್ ದಾಳಿಗಳು ಮತ್ತು ರಸ್ತೆಬದಿಯ ಸ್ಫೋಟಗಳು ಇವು ಅಫ್ಘಾನಿಸ್ತಾನ ಮತ್ತು ಅಮೆರಿಕ ಪಡೆಗಳ ವಿರುದ್ಧ 20 ವರ್ಷಗಳ ದಂಗೆಯಲ್ಲಿ ತಾಲಿಬಾನ್ ಬಳಸಿದ ತಂತ್ರಗಳಾಗಿವೆ. ಅಂತರರಾಷ್ಟ್ರೀಯ ಸಮುದಾಯವು ಷರತ್ತುಗಳೊಂದಿಗೆ ಮಾನ್ಯತೆಗಾಗಿ ತಾಲಿಬಾನ್ ಕೋರಿಕೆಯನ್ನು ಸ್ವಾಗತಿಸಿದೆ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಜತೆಗೆ ತಾಲಿಬಾನ್ ಹೇಗೆ ವರ್ತಿಸುತ್ತದೆ ಎಂಬುದು ಮುಖ್ಯವಾಗುತ್ತದೆ ಎಂಬ ಷರತ್ತು ಹಾಕಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನವು ತೀವ್ರವಾದಿಗಳು, ಭಯೋತ್ಪಾದಕರ ನೆಲೆವೀಡಾಗದಿರಲಿ: ಜಿ20 ಸಮಾವೇಶದಲ್ಲಿ ನರೇಂದ್ರ ಮೋದಿ