Kidney Transplant: ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಕಸಿ ಮಾಡುವಲ್ಲಿ ಅಮೆರಿಕದ ಸರ್ಜನ್​ಗಳು ಯಶಸ್ವಿ!

ನ್ಯೂಯಾರ್ಕ್ ನಗರದ ಎನ್​ವೈಯು ಲ್ಯಾಂಗೋನ್ ಹೆಲ್ತ್​ಕೇರ್ ಸೆಂಟರ್​ನ ಸರ್ಜನ್​ಗಳು ಮೆದುಳು ನಿಷ್ಕ್ರಿಯವಾಗಿದ್ದ ಮಹಿಳೆಯ ಕಿಡ್ನಿಯನ್ನು ತೆಗೆದು ಹಂದಿಯ ಕಿಡ್ನಿಯನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Kidney Transplant: ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಕಸಿ ಮಾಡುವಲ್ಲಿ ಅಮೆರಿಕದ ಸರ್ಜನ್​ಗಳು ಯಶಸ್ವಿ!
ಕಿಡ್ನಿ (ಸಾಂದರ್ಭಿಕ ಚಿತ್ರ)

ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡವನ್ನು (Kidney) ಮನುಷ್ಯನ ದೇಹಕ್ಕೆ ಅಳವಡಿಸುವಲ್ಲಿ ಅಮೆರಿಕದ ಸರ್ಜನ್​ಗಳು ಯಶಸ್ವಿಯಾಗಿದ್ದಾರೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಹಂದಿಯ ಕಿಡ್ನಿಯನ್ನು ಅಳವಡಿಸಿರುವ ರೋಗಿಯ ದೇಹದಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ.

ನ್ಯೂಯಾರ್ಕ್ ನಗರದ ಎನ್​ವೈಯು ಲ್ಯಾಂಗೋನ್ ಹೆಲ್ತ್​ಕೇರ್ ಸೆಂಟರ್​ನಲ್ಲಿ ಈ ಪರೀಕ್ಷೆಯನ್ನು ಸರ್ಜನ್​ಗಳು ಯಶಸ್ವಿಯಾಗಿ ಮಾಡಿದ್ದಾರೆ. ಹಂದಿಯ ಕಿಡ್ನಿಯನ್ನು ರೋಗಿಗೆ ಅಳವಡಿಸುವ ಮುನ್ನ ಅದರ ಜೀನ್ಸ್​ ಅನ್ನು ಬದಲಾವಣೆ ಮಾಡಲಾಯಿತು. ಅದರಿಂದ ವಂಶವಾಹಿಗಳು ಬದಲಾಗಿರುವುದರಿಂದ ಅದರ ಅಂಗಾಂಶಗಳು ಯಾವುದಕ್ಕೂ ತಕ್ಷಣವೇ ವ್ಯತಿರಕ್ತವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಅಂದಹಾಗೆ, ಈ ಕಿಡ್ನಿ ಕಸಿಯಾಗಿರುವ ರೋಗಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಕಿಡ್ನಿ ವೈಫಲ್ಯದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್​ನಲ್ಲಿದ್ದ ಅವರ ಲೈಫ್ ಸಪೋರ್ಟ್ ಅನ್ನು ತೆಗೆಯುವ ಮುನ್ನ ಆಕೆಯ ದೇಹವನ್ನು ವೈದ್ಯಕೀಯ ಪ್ರಯೋಗಕ್ಕೆ ಬಳಸಿಕೊಳ್ಳುವಂತೆ ಆ ರೋಗಿಯ ಕುಟುಂಬಸ್ಥರು ಆಸ್ಪತ್ರೆಯ ವೈದ್ಯರಿಗೆ ಅನುಮತಿ ನೀಡಿದ್ದರು.

ಹೀಗಾಗಿ, ಮೆದುಳು ಡೆಡ್ ಆಗಿದ್ದ ರೋಗಿಯ ಕಿಡ್ನಿಯನ್ನು ತೆಗೆದು ಹಂದಿಯ ಕಿಡ್ನಿಯನ್ನು ಅಳವಡಿಸಿ ಆ ಆಸ್ಪತ್ರೆಯ ಸರ್ಜನ್​ಗಳು ಪ್ರಯೋಗ ಮಾಡಿದ್ದಾರೆ. ಈ ಪ್ರಯೋಗದ ಬಳಿಕ ಆ ರೋಗಿಯ ಲೈಫ್ ಸಪೋರ್ಟ್ ಅನ್ನು ತೆಗೆಯಲಾಗಿದೆ. ಅದಕ್ಕೂ ಮೊದಲು 3 ದಿನಗಳವರೆಗೆ ಹೊಸ ಮೂತ್ರಪಿಂಡವನ್ನು ಆಕೆಯ ರಕ್ತನಾಳಗಳಿಗೆ ಜೋಡಿಸಲಾಗಿದೆ. ಹಂದಿಯ ಕಿಡ್ನಿಯನ್ನು ಅಳವಡಿಸಿದ ನಂತರ ಆಕೆಯ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡುಬಂದವು ಎಂಬುದನ್ನು ಪರೀಕ್ಷಿಸಲಾಗಿದೆ. ಹಂದಿಯ ಕಿಡ್ನಿ ಜೋಡಣೆ ಮಾಡಿದ್ದರಿಂದ ಆ ರೋಗಿಯ ದೇಹದಲ್ಲಿ ಹೆಚ್ಚೇನೂ ಬದಲಾವಣೆ ಕಂಡುಬಂದಿಲ್ಲವಾದ್ದರಿಂದ ಈ ಪ್ರಯೋಗ ಯಶಸ್ವಿಯಾಗಿದೆ ಎಂದೇ ಹೇಳಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಅಮೆರಿಕದಲ್ಲಿ ಸುಮಾರು 1,07,000 ಜನರು ಪ್ರಸ್ತುತ ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. 90,000ಕ್ಕಿಂತ ಹೆಚ್ಚು ರೋಗಿಗಳು ಮೂತ್ರಪಿಂಡಕ್ಕಾಗಿ ಕಾಯುತ್ತಿದ್ದಾರೆ. ಯುನೈಟೆಡ್ ನೆಟ್ವರ್ಕ್ ಫಾರ್ ಆರ್ಗನ್ ಹಂಚಿಕೆ ಪ್ರಕಾರ, ಮೂತ್ರಪಿಂಡಕ್ಕಾಗಿ ಸರಾಸರಿ 3ರಿಂದ 5 ವರ್ಷಗಳ ಕಾಲ ರೋಗಿಗಳು ಕಾಯಬೇಕಾಗುತ್ತದೆ. ಅಂಗಾಂಗಳ ಕೊರತೆ ಎದುರಾಗಿರುವುದರಿಂದ ಅಂಗಾಂಗ ದಾನದ ಬಗ್ಗೆ ಅಮೆರಿಕದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಹಾಗೇ, ದಶಕಗಳಿಂದಲೂ ಅಮೆರಿಕದ ಸಂಶೋಧಕರು ಮನುಷ್ಯರ ದೇಹಕ್ಕೆ ಪ್ರಾಣಿಗಳ ಅಂಗಗಳನ್ನು ಜೋಡಿಸುವ ಸಾಧ್ಯತೆ ಬಗ್ಗೆ ಅಧ್ಯಯನ, ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ.

ಇದನ್ನೂ ಓದಿ: Viral News: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ; 11 ಲಕ್ಷ ರೂ. ಪರಿಹಾರ ನೀಡಲು ಆಸ್ಪತ್ರೆಗೆ ಆದೇಶ

ಕಿಡ್ನಿ ಆಪರೇಷನ್​ಗೆ ಬಂದವನ ಹೊಟ್ಟೆಯಲ್ಲಿತ್ತು 11 ಕೋಟಿ ರೂ. ಮೌಲ್ಯದ ಮಾದಕ ವಸ್ತು..!

Click on your DTH Provider to Add TV9 Kannada