ಮೊರಾಕೊ (ಮಾಲಿ): ಮಹಿಳೆಯೊಬ್ಬರು ಸಾಲಾಗಿ ಒಂಬತ್ತು ಮಕ್ಕಳಿಗೆ ಜನ್ಮ ನೀಡಿರುವ ಅತ್ಯಪರೂಪದ ಪ್ರಕರಣ ಮಾಲಿಯಲ್ಲಿ ವರದಿಯಾಗಿದೆ. ಕುತೂಹಲದ ಸಂಗತಿಯೆಂದ್ರೆ ಮಹಿಳೆ ಗರ್ಭಾವಸ್ಥೆಯಲ್ಲಿದ್ದಾಗ ಸ್ಕ್ಯಾನ್ ಮಾಡಿದ್ದ ವೈದ್ಯರು ಅಮ್ಮಾ ನಿಮಗೆ 7 ಮಕ್ಕಳು ಜನಿಸಲಿದ್ದಾರೆ ಎಂದು ತಿಳಿಸಿದ್ದರು. ಆದರೆ ವೈದ್ಯರ ಕಣ್ಣಿಗೆ ಕಂಡಿದ್ದ ಆ 7 ಭ್ರೂಣಗಳ ಮಧ್ಯೆ ಇನ್ನೂ ಎರಡು ಭ್ರೂಣಗಳು ಬಚ್ಚಿಟ್ಟುಕೊಂಡಿದ್ದವು ಎಂದು ಆ ಮಹಾತಾಯಿ ಜನ್ಮ ನೀಡಿ, ಮಂಗಳವಾರ 9 ಮಕ್ಕಳನ್ನು (Nonuplets) ಹೆತ್ತ ಬಳಿಕವೇ ಗೊತ್ತಾಗಿದ್ದು!
ಪಶ್ಚಿಮ ಆಫ್ರಿಕಾದ ಮಾಲಿ ರಾಷ್ಟ್ರದಲ್ಲಿ ಈ ಘಟನೆ ಬೆಳಿಕಗೆ ಬಂದಿದೆ. ಕಾಲಕಾಲಕ್ಕೆ ಸದರಿ ಮಹಿಳೆಗೆ ಆಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡುತ್ತಿದ್ದ ವೈದ್ಯರು ಒಟ್ಟು 7 ಭ್ರೂಣಗಳನ್ನು ಪತ್ತೆಹಚ್ಚಿದ್ದರು. ಆದರೆ ಭ್ರೂಣಗಳ ದಟ್ಟಣೆಯಿಂದಾಗಿ ಉಳಿದೆರಡು ವೈದ್ಯಲೋಕಕ್ಕೆ ಗೊತ್ತಾಗಿಲ್ಲ. ಕೊನೆಗೆ, 25 ವರ್ಷದ ಹಲೀಮಾ ಸಿಸ್ಸೆ ಎಂಬ ಮಹಿಳೆ ಸಾಲಾಗಿ ಸಿಸೇರಿಯನ್ ಶಸ್ತ್ರಚಕಿತ್ಸೆ ಮೂಲಕ ಒಂಬತ್ತು ಮಕ್ಕಳಿಗೆ ಜನ್ಮ ನೀಡಿ, ವೈದ್ಯಲೋಕ ಮತ್ತು ಇಡೀ ಜಗತ್ತನ್ನು ಅಚ್ಚರಿಯ ಮಡುವಿಗೆ ದೂಡಿದ್ದಾರೆ.
ಆಯ್ತು ಆ ಮಕ್ಕಳ ಪೈಕಿ ಗಂಡೆಷ್ಟು? ಹೆಣ್ಣೆಷ್ಟು ಎಂದು ಕೌಂಟ್ ಮಾಡಿದಾಗ.. ಐದು ಹೆಣ್ಣು ಮಕ್ಕಳು ಮತ್ತು ನಾಲ್ಕು ಗಂಡು ಮಕ್ಕಳು ಕಣ್ಣಿಗೆ ಬಿದ್ದಿವೆ! ಒಂಬತ್ತೂ ಮಕ್ಕಳು ಮತ್ತು ಆ ಮಹಾತಾಯಿ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಸ್ವತಃ ಮಾಲಿ ಆರೋಗ್ಯ ಸಚಿವೆ ಫಾಂಟಾ ಸಿಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಿಳೆಯೊಬ್ಬರು 9 ಮಕ್ಕಳಿಗೆ ಜನ್ಮ ನೀಡುವುದು ವೈದ್ಯ ಲೋಕಕ್ಕೆ ಅಚ್ಚರಿಯ ಸಂಗತಿಯಾಗಿದೆ.
(Woman Gives Birth To Nine Babies in West African nation Mali Two More Than Doctors Detected)
Published On - 10:03 am, Wed, 5 May 21