ಪ್ರಿಟೋರಿಯಾ: ಒಬ್ಬ ಪುರುಷ ಬಹುಪತ್ನಿಯರನ್ನು ಹೊಂದುವುದು ಕಾನೂನಿಲ್ಲಿ ಅಪರಾಧ. ಹಾಗಂತ ಈ ಕಾನೂನು ರಾಷ್ಟ್ರಾದ್ಯಂತ ಎಲ್ಲ ದೇಶಗಳಲ್ಲೂ ಜಾರಿಯಲ್ಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಒಬ್ಬ ವ್ಯಕ್ತಿ ಬಹುಪತ್ನಿಯರನ್ನು ಹೊಂದಲು ಅನುಮತಿ ಇದೆ. ಇದಕ್ಕೆ ದಕ್ಷಿಣ ಆಫ್ರಿಕಾದಲ್ಲೇ ಅನೇಕ ಗಣ್ಯರ ವಿರೋಧವಿದ್ದರೂ, ಕಾನೂನು ಪ್ರಕಾರ ಅದು ಅಪರಾಧವಲ್ಲ ಎಂದು ಹೇಳಲಾಗಿದೆ. ಆದರೆ ಈ ರಾಷ್ಟ್ರ ಇನ್ನೊಂದು ಹೆಜ್ಜೆ ಮುಂದಿಡಲು ತೀರ್ಮಾನಿಸಿದೆ. ಬಹುಪತ್ನಿತ್ವ ಮಾತ್ರ ಇದ್ದರೆ, ಅದು ಲಿಂಗಭೇದ ಮಾಡಿದಂತಾಗುತ್ತದೆ ಎಂದು ಬಹುಪತಿತ್ವಕ್ಕೂ ಅನುಮತಿ ನೀಡಲು ಚಿಂತನೆ ನಡೆಸುತ್ತಿದೆ. ವಿವಾಹಕ್ಕೆ ಸಂಬಂಧಪಟ್ಟಂತೆ ಹೊಸ ಕಾಯ್ದೆಯನ್ನು ರಚಿಸಲು ಮುಂದಾಗಿರುವ ದಕ್ಷಿಣ ಆಫ್ರಿಕಾ ಗೃಹ ವ್ಯವಹಾರಗಳ ಸಚಿವಾಲಯ ಈ ಬಹುಪತಿತ್ವದ ಪ್ರಸ್ತಾಪವನ್ನು ಇಟ್ಟಿದೆ.
ಬಹುಪತ್ನಿತ್ವಕ್ಕೆ ಭಾರತದ ಕಾನೂನಿನಲ್ಲೂ ಅವಕಾಶವಿಲ್ಲ. ಒಬ್ಬ ಹೆಂಡತಿಯನ್ನು ವಿಚ್ಛೇದಿಸದೆ ಇನ್ನೊಬ್ಬ ಮಹಿಳೆಯನ್ನು ವಿವಾಹವಾಗುವಂತಿಲ್ಲ. ಆದರೂ ಅಲ್ಲಲ್ಲಿ, ಏನೋ ಹೊಂದಾಣಿಕೆ ಮಾಡಿಕೊಂಡು ಇಬ್ಬರು ಯುವತಿಯರು ಒಬ್ಬನನ್ನೇ ಮದುವೆಯಾಗುವುದು, ಒಬ್ಬ ವ್ಯಕ್ತಿ ಇಬ್ಬರು ಮಹಿಳೆಯರನ್ನು ಮದುವೆಯಾಗಿ ಬೇರೆ, ಬೇರೆ ಮನೆಯಲ್ಲಿ ಇಡುವುದು ಎಲ್ಲ ನಡೆಯುತ್ತಿರುತ್ತದೆ. ಆದರೆ ಮಹಿಳೆಯೊಬ್ಬಳು ಹೀಗೆ ಒಬ್ಬನಿಗಿಂತ ಹೆಚ್ಚು ಗಂಡಂದಿರನ್ನು ಏಕಕಾಲಕ್ಕೆ ಹೊಂದುವುದು ವಿರಳಾತಿವಿರಳ. ಆದರೆ ದಕ್ಷಿಣ ಆಫ್ರಿಕಾ ಅದಕ್ಕೆ ಕಾನೂನಿನಲ್ಲೇ ಅವಕಾಶ ನೀಡಲು ಮುಂದಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಸದ್ಯ ಬಹುಪತ್ನಿತ್ವಕ್ಕೆ ಅವಕಾಶ ಇದೆ. ಆದರೆ ಮಹಿಳೆಯರು ಒಬ್ಬನಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪತಿಯರನ್ನು ಹೊಂದಲು ಅವಕಾಶ ಇಲ್ಲ. ಮದುವೆಗೆ ಸಂಬಂಧಿತ ಈ ಕಾನೂನು ಲಿಂಗತಾರತಮ್ಯವನ್ನು ಹುಟ್ಟುಹಾಕಿದೆ. ಲಿಂಗಸಮಾನತೆ ಉತ್ತೇಜಿಸುವ ಸಲುವಾಗಿ ಬಹುಪತಿತ್ವವನ್ನೂ ಶಾಸನಬದ್ಧಗೊಳಿಸಲು ದಕ್ಷಿಣ ಆಫ್ರಿಕಾ ಚಿಂತನೆ ನಡೆಸುತ್ತಿದೆಯೆಂದು ಬಿಬಿಸಿ ವರದಿ ಮಾಡಿದೆ. ಹಾಗೇ, ಈ ಕರಡು ಪ್ರಸ್ತಾಪವನ್ನು ಸಿದ್ಧಪಡಿಸಿವುದಕ್ಕೂ ಮೊದಲು ಹಲವು ಮಾನವ ಹಕ್ಕುಗಳ ಕಾರ್ಯಕರ್ತರು, ಮತ್ತಿತರ ತಜ್ಞರನ್ನು ಸಂಪರ್ಕಿಸಿ ಸಮಾಲೋಚಿಸಲಾಗಿದೆ ಎಂದೂ ಗೃಹ ವ್ಯವಹಾರಗಳ ಇಲಾಖೆ ತಿಳಿಸಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.
ಆದರೆ ಬಹುಪತಿತ್ವ ಪ್ರಸ್ತಾವನೆಗೆ ದಕ್ಷಿಣ ಆಫ್ರಿಕಾದ ಧಾರ್ಮಿಕ ಸಂಘಟನೆಗಳು, ಸಂಪ್ರದಾಯವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅದಾಗಲೇ ಈ ದೇಶದಲ್ಲಿ ಸಲಿಂಗಿಗಳ ವಿವಾಹ, ಬಹುಪತ್ನಿತ್ವ ಕಾನೂನು ಬದ್ಧವಾಗಿ ಸಂಸ್ಕೃತಿ ನಾಶವಾಗುತ್ತಿದೆ. ಈಗ ಬಹುಪತಿತ್ವವೂ ಜಾರಿಯಾದರೆ ನಮ್ಮ ಸಂಸ್ಕಾರ, ಸಂಸ್ಕೃತಿ ಸಂಪೂರ್ಣ ಧ್ವಂಸವಾದಂತೆ ಕಿಡಿಕಾರಿದ್ದಾರೆ. ಬಹುಪತಿತ್ವ ಒಮ್ಮೆ ಕಾನೂನಿನಲ್ಲಿ ಅನುಮತಿ ಪಡೆದರೆ, ಹೀಗೆ ಮದುವೆಯಾಗುವವರ ಮಕ್ಕಳ ಬಗ್ಗೆ ಯೋಚನೆ ಮಾಡಬೇಕು. ಆ ಮಕ್ಕಳಿಗೆ ಗುರುತು ಯಾವುದಾಗಿರುತ್ತದೆ. ಇದೊಂದು ತಲೆಬುಡವಿಲ್ಲದ ಪ್ರಸ್ತಾಪ ಎಂದು ಕಟುವಾಗಿ ಅಭಿಪ್ರಾಯಹೊರಹಾಕಿದ್ದಾರೆ. ಪ್ರಸ್ತಾವನೆಗೆ ಪ್ರತಿಕ್ರಿಯೆ-ಆಕ್ಷೇಪಣೆ ಕೊಡಲು ಇಲಾಖೆ ಜೂನ್ ಅಂತ್ಯದವರೆಗೆ ಸಮಯ ನೀಡಿದೆ.
ಇದನ್ನೂ ಓದಿ: ಆಕ್ಸ್‌ಫರ್ಡ್ ವಿವಿಯಿಂದ ಹೊಸ ಅಧ್ಯಯನ; ಕೊವಿಶೀಲ್ಡ್ 2 ಡೋಸ್ ನಡುವೆ ಅಂತರ ಹೆಚ್ಚಿದಷ್ಟು ಹೆಚ್ಚು ರಕ್ಷಣೆ
(Women will be allowed to marry more than one husband in South Africa very soon)
Published On - 3:02 pm, Tue, 29 June 21