World Hearing Day 2021: ನಿಮ್ಮ ಕಿವಿ ಜೋಪಾನ; ಸದಾ ಕೇಳಿಸಲಿ ಜಗದ ದನಿ

|

Updated on: Mar 03, 2021 | 7:22 AM

World Hearing Day 2021: 2050ರ ವೇಳೆಗೆ ಪ್ರತಿ ನಾಲ್ಕು ವ್ಯಕ್ತಿಗಳಲ್ಲಿ ಒಬ್ಬರು ಅಥವಾ ಸುಮಾರು 2.5 ಶತಕೋಟಿ ಜನರು ಶ್ರವಣ ದೋಷದಿಂದ ಬಳಲುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತನ್ನ ಹೊಸ ವರದಿಯಲ್ಲಿ ತಿಳಿಸಿದೆ.

World Hearing Day 2021: ನಿಮ್ಮ ಕಿವಿ ಜೋಪಾನ; ಸದಾ ಕೇಳಿಸಲಿ ಜಗದ ದನಿ
ಪ್ರಾತಿನಿಧಿಕ ಚಿತ್ರ
Follow us on

World Hearing Day 2021: ಪ್ರತಿ ವರ್ಷವೂ ಮಾರ್ಚ್ 3ರಂದು ವಿಶ್ವ ಕಿವಿ ಆರೋಗ್ಯ ದಿನ ಆಚರಿಸಲಾಗುತ್ತದೆ. ಒಂದೊಂದು ವರ್ಷದ ಆಶಯ ಒಂದೊಂದು ರೀತಿ ಇರುತ್ತದೆ. ಈ ವರ್ಷದ ಆಶಯ ‘ಎಲ್ಲರಿಗೂ ಕಿವಿ ಆರೋಗ್ಯ’ (Hearing care for ALL). ದೇಹದ ಅತ್ಯಂತ ಪ್ರಮುಖ ಮತ್ತು ಸೂಕ್ಷ್ಮ ಅಂಗವಾಗಿರುವ ಕಿವಿ ಬದುಕಿನ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಶ್ರವಣ ದೋಷ ದೌರ್ಬಲ್ಯ ಬದುಕನ್ನು ಸಂಕಷ್ಟಕ್ಕೆ ದೂಡುತ್ತದೆ. ಚಿಕ್ಕಮಕ್ಕಳಲ್ಲಿ ಈ ದೋಷ ಕಾಣಿಸಿಕೊಂಡರೆ ಅಂಥ ಮಕ್ಕಳು ಮಾತು ಕಲಿಯುವುದು ಸವಾಲಾಗುತ್ತದೆ. ಈಗ ಕಾಲ ಬದಲಾದಂತೆ ವೈಜ್ಞಾನಿಕ ಆವಿಷ್ಕಾರಗಳ ನೆರವಿನಿಂದ ಶ್ರವಣ ದೋಷವನ್ನು ಬಹಳ ಬೇಗ ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ.

2050ರ ವೇಳೆಗೆ ವಿಶ್ವದ ಪ್ರತಿ ನಾಲ್ವರಲ್ಲಿ ಒಬ್ಬರು ಅಥವಾ ಸುಮಾರು 2.5 ಶತಕೋಟಿ ಜನರು ಶ್ರವಣ ದೋಷದಿಂದ ಬಳಲುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization – WHO) ತನ್ನ ವರದಿಯಲ್ಲಿ ತಿಳಿಸಿದೆ. ಈಗಾಗಲೇ ಕನಿಷ್ಠ 70 ಕೋಟಿ ಜನರು ಶ್ರವಣದೋಷದಿಂದ ಬಳಲುತ್ತಿದ್ದಾರೆ ಎಂದು WHO ತಿಳಿಸಿದೆ. ವಯಸ್ಕರಲ್ಲಿ 40 ಡೆಸಿಬಲ್‌ಗಳಿಗಿಂತ ಹೆಚ್ಚು (ಡಿಬಿ) ಮತ್ತು ಮಕ್ಕಳಲ್ಲಿ 30 ಡಿಬಿಗಿಂತ ಹೆಚ್ಚಿನ ಶ್ರವಣದೋಷವನ್ನು ಗುರುತಿಸಲಾಗಿದೆ ಎಂದು WHO ವಿಶ್ಲೇಷಿಸಿದೆ.

ಶ್ರವಣದೋಷಕ್ಕೆ ಕಾರಣಗಳು..
ಅತಿಯಾದ ಶಬ್ದಕ್ಕೆ ಒಡ್ಡಿಕೊಳ್ಳುವುದು, ಆನುವಂಶಿಕ ಕಾರಣಗಳು, ಪ್ರಸವದ ಸಮಯದಲ್ಲಿ ಆದ ತೊಂದರೆಗಳು, ಕೆಲ ಸಾಂಕ್ರಾಮಿಕ ರೋಗಗಳು, ದೀರ್ಘಕಾಲದ ಕಿವಿ ಸೋಂಕುಗಳು, ನಿರ್ದಿಷ್ಟ ಔಷಧಿಗಳ ಬಳಕೆ ಮತ್ತು ವೃದ್ಧಾಪ್ಯ ಶ್ರವಣದೋಷಕ್ಕೆ ಮುಖ್ಯ ಕಾರಣ. 1.1 ಶತಕೋಟಿ ಯುವಜನರು (12-35 ವರ್ಷ ವಯಸ್ಸಿನವರು) ಮನರಂಜನೆಗಾಗಿ ಹೆಚ್ಚು ಶಬ್ದಕ್ಕೆ ತೆರೆದುಕೊಂಡು, ಹೆಡ್​ಫೋನ್​ ಸೆಟಿಂಗ್​ಗಳ ಕಡೆಗೆ ಸರಿಯಾಗಿ ಗಮನಕೊಡದೆ ಕಿವುಡುತನಕ್ಕೆ ಒಳಾಗಾಗುವ ಅಪಾಯ ಎದುರಿಸುತ್ತಿದ್ದಾರೆ ಎಂದು ಕಿವುಡುತನ ಮತ್ತು ಶ್ರವಣಶಕ್ತಿ ನಷ್ಟದ ಕುರಿತು 2020ರ WHO ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವದ ವಿವಿಧ ದೇಶಗಳ 43.2 ಕೋಟಿ ವಯಸ್ಕರು ಮತ್ತು 3.4 ಕೋಟಿ ಮಕ್ಕಳು ಶ್ರವಣ ದೋಷ ಸಮಸ್ಯೆ ಎದುರಿಸುತ್ತಿದ್ದಾರೆ. ಆದಾಗ್ಯೂ 2020ರವರೆಗೆ, ಕೇವಲ ಶೇ 17ರಷ್ಟು ಜನರಿಗೆ ಮಾತ್ರ ಶ್ರವಣ ದೋಷ ನಿವಾರಕ ಪರಿಕರಗಳು ಸಿಕ್ಕಿವೆ.

ಬಡ ದೇಶಗಳಲ್ಲಿಯೇ ಶ್ರವಣದೋಷ ಹೆಚ್ಚು
ಮಕ್ಕಳಲ್ಲಿ ಶೇ 60ರಷ್ಟು ಪ್ರಕರಣಗಳಲ್ಲಿ ಶ್ರವಣದೋಷಗಳು ತಡೆಗಟ್ಟಬಹುದಾದ ಕಾರಣಗಳಿಂದ ಕಾಣಿಸಿಕೊಳ್ಳುತ್ತಿವೆ ಎಂದು WHO ಹೊಸ ವರದಿಯಲ್ಲಿ ತಿಳಿಸಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿರುವ ದೇಶಗಳಲ್ಲಿ ಶ್ರವಣದೋಷವೂ ಹೆಚ್ಚು ಎಂದು ವರದಿ ತಿಳಿಸಿದೆ. ಶ್ರವಣೇಂದ್ರಿಯ ಅಂಗವೈಕಲ್ಯವನ್ನು ಜನರು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿಲ್ಲ. ವೈದ್ಯಕೀಯ ವೃತ್ತಿಪರರಲ್ಲಿ ಇಂಥ ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಹೆಚ್ಚಾಗಬೇಕಿದೆ. ಪರಿಣಿತರ ಸಂಖ್ಯೆಯೂ ತೀರಾ ಕಡಿಮೆ ಇದೆ ಎಂದು ವರದಿ ಹೇಳಿದೆ.

ಕಡಿಮೆ ಆದಾಯದ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿರುವ ದೇಶಗಳಲ್ಲಿ ತಜ್ಞ ವೈದ್ಯರ ಕೊರತೆಯೂ ಗಮನಾರ್ಹ ಪ್ರಮಾಣದಲ್ಲಿ. ಶ್ರವಣದೋಷವಿರುವ ಮಕ್ಕಳಿಗೆ ಮಾತು ಕಲಿಸುವ ಸ್ಪೀಚ್​ ಥೆರಪಿಸ್ಟ್​ಗಳ ಕೊರತೆಯೂ ಕಾಣಿಸಿಕೊಂಡಿದೆ. ಇಂಥ ದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಿವಿ ಮತ್ತು ಶ್ರವಣ ಆರೈಕೆಯನ್ನು ಸಂಯೋಜಿಸುವುದರಿಂದ ಜನರಿಗೆ ಅನುಕೂಲವಾಗುತ್ತದೆ ಎಂದು WHO ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: Covid-19 Origin | ಕೊರೊನಾ ವೈರಾಣು ಹುಟ್ಟಿದ್ದು ಚೀನಾದ ಲ್ಯಾಬ್​ನಲ್ಲಿ ಅಲ್ಲ: WHO ತಜ್ಞರು