ಸುರಕ್ಷತೆ ವಿಚಾರದಲ್ಲಿ ಗ್ರಾಹಕರ ಆಕ್ರೋಶಕ್ಕೆ ಗುರಿಯಾದ ಸಿಟ್ರನ್ ಇಸಿ3
ಭಾರತದಲ್ಲಿ ಸದ್ಯ ಸುರಕ್ಷಿತ ಕಾರುಗಳ ಖರೀದಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಇದರ ನಡುವೆ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಸಿಟ್ರನ್ ಇಸಿ3 ಕಾರು ಗ್ರಾಹಕರಿಂದ ಟೀಕೆ ಎದುರಿಸುತ್ತಿದೆ.
ಹೊಸ ಕಾರುಗಳ ಮೂಲಕ ಇತ್ತೀಚೆಗೆ ಭಾರತದಲ್ಲಿ ಗಮನಸೆಳೆಯುತ್ತಿರುವ ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ (Citroen) ಗ್ರಾಹಕರ ಆಕ್ರೋಶಕ್ಕೆ ಗುರಿಯಾಗಿದೆ. ತನ್ನ ಹೊಸ ಇಸಿ3 (eC3) ಎಲೆಕ್ಟ್ರಿಕ್ ಕಾರಿನ ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ ವಿಚಾರಕ್ಕೆ ಗ್ರಾಹಕರಿಂದ ಟೀಕೆ ಎದುರಿಸುತ್ತಿದ್ದು, ಕಳಪೆ ಕಾರು ಮಾರಾಟದ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಗ್ಲೋಬಲ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಹೊಸ ಸಿಟ್ರನ್ ಇಸಿ3 ಕಾರು ಕಳಪೆ ಪ್ರದರ್ಶನ ತೋರಿದ್ದು, ಇದು ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಹಾನಿಗೊಳಿಸಬಹುದಾಗಿದೆ. ಯಾಕೆಂದರೆ ಇಸಿ3 ಕಾರು ವಯಸ್ಕರ ಪ್ರಯಾಣಿಕರ ಸುರಕ್ಷತೆಗಾಗಿ ಸೊನ್ನೆ ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದರೆ ಮಕ್ಕಳ ಸುರಕ್ಷತೆಗಾಗಿ ಕೇವಲ 1 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದೆ.
ಇದನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!
ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಸದ್ಯ ಭಾರತದಲ್ಲಿ ಉತ್ಪಾದನೆಗೊಳ್ಳುವ ಕಾರುಗಳ ಸುರಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸೇಫರ್ ಕಾರ್ಸ್ ಫಾರ್ ಇಂಡಿಯಾ ಅಭಿಯಾನ ನಡೆಸುತ್ತಿದ್ದು, ಹೊಸ ಅಭಿಯಾನದಡಿ ಇಸಿ3 ಹ್ಯಾಚ್‌ಬ್ಯಾಕ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಕಳಪೆ ಪ್ರದರ್ಶನ ತೋರಿದ್ದು, ಇದು ಸಿಟ್ರನ್ ಕಾರು ಖರೀದಿದಾರರಲ್ಲಿ ಆತಂಕ ಮೂಡಿಸಿದೆ.
ಭಾರತದಲ್ಲಿ ಸದ್ಯ ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಕಾರು ಲೈವ್ ಮತ್ತು ಫೀಲ್ ಎಂಬ ಎರಡೂ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು 29.2kWh ಬ್ಯಾಟರಿ ಪ್ಯಾಕ್‌ನೊಂದಿಗೆ 57 ಬಿಹೆಚ್‍ಪಿ ಪವರ್ ಮತ್ತು 143 ಎನ್ಎಂ ಟಾರ್ಕ್ ಅನ್ನು ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಮೂಲಕ ಇದು ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಂನೊಂದಿಗೆ ಪ್ರತಿ ಚಾರ್ಜ್ ಗೆ 320 ಕಿ.ಮೀ ಮೈಲೇಜ್ ನೀಡಲಿದ್ದು, ಪ್ರತಿ ಗಂಟೆಗೆ 107 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಇದನ್ನೂ ಓದಿ: ಹೊಸ ಕಾರುಗಳಲ್ಲಿ ಮತ್ತೊಂದು ಕಡ್ಡಾಯ ಸೇಫ್ಟಿ ಫೀಚರ್ಸ್ ಜಾರಿಗೆ ಮುಂದಾದ ಕೇಂದ್ರ ಸರ್ಕಾರ
ಜೊತೆಗೆ ಇಸಿ3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮಾದರಿಯು 6.8 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 60 ಕಿಮೀ ವೇಗವನ್ನು ಪಡೆದುಕೊಳ್ಳಲಿದ್ದು, ಇದರಲ್ಲಿ ಇಕೋ ಮತ್ತು ಸ್ಟ್ಯಾಂಡರ್ಡ್ ಎನ್ನುವ ಎರಡು ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್ ಗಳು, ಸೀಟ್ ಬೆಲ್ಟ್ ರಿಮೆಂಡರ್ ನೀಡಲಾಗಿದ್ದು, ಇವು ಅಪಘಾತದ ಸಂದರ್ಭದಲ್ಲಿ ಉತ್ತಮ ಕಾರ್ಯಕ್ಷಮತೆ ಹೊಂದಿಲ್ಲ. ಇದೇ ಕಾರಣಕ್ಕೆ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಮುಗ್ಗರಿಸಿರುವ ಇಸಿ3 ಕಾರು ಮುಂಬರುವ ದಿನಗಳಲ್ಲಿ ಬದಲಾಗುತ್ತಾ ಕಾಯ್ದು ನೋಡಬೇಕಿದೆ.