ಫಾಸ್ಟ್‌ಟ್ಯಾಗ್‌ ಬಳಕೆಗೆ ಗುಡ್ ಬೈ! ಹೆದ್ದಾರಿಗಳಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ದವಾದ ಜಿಪಿಎಸ್ ಟೋಲ್ ಸಿಸ್ಟಂ..

|

Updated on: Dec 21, 2023 | 3:22 PM

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಸ್ತತ ಜಾರಿಯಲ್ಲಿರುವ ಟೋಲ್ ಶುಲ್ಕ ಪಾವತಿ ವಿಧಾನವನ್ನು ಮತ್ತಷ್ಟು ಸರಳ ಮತ್ತು ತ್ವರಿತ ಪ್ರಕ್ರಿಯೆಗಾಗಿ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಶೀಘ್ರದಲ್ಲಿಯೇ ಹೊಸ ಶುಲ್ಕ ಪಾವತಿ ವಿಧಾನವನ್ನು ಅಧಿಕೃತವಾಗಿ ಜಾರಿಗೆ ತರುತ್ತಿದೆ.

ಫಾಸ್ಟ್‌ಟ್ಯಾಗ್‌ ಬಳಕೆಗೆ ಗುಡ್ ಬೈ! ಹೆದ್ದಾರಿಗಳಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ದವಾದ ಜಿಪಿಎಸ್ ಟೋಲ್ ಸಿಸ್ಟಂ..
ಹೆದ್ದಾರಿಗಳಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ದವಾದ ಜಿಪಿಎಸ್ ಟೋಲ್ ಸಿಸ್ಟಂ
Follow us on

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಪಾವತಿಗಾಗಿ ಪ್ರಸ್ತುತ ಜಾರಿಯಲ್ಲಿರುವ ಫಾಸ್ಟ್‌ಟ್ಯಾಗ್ ಬದಲಾಗಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ (GPS Based Toll Collection) ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದ್ದು, ಹೊಸ ಶುಲ್ಕ ಪಾವತಿ ಸೌಲಭ್ಯವು ಸರಳ ಮತ್ತು ತ್ವರಿತ ಪ್ರಕ್ರಿಯೊಂದಿಗೆ ವಾಹನ ಮಾಲೀಕರಿಗೆ ತಡೆರಹಿತ ಪ್ರಯಾಣಕ್ಕೆ ಸಹಕಾರಿಯಾಗುವ ನೀರಿಕ್ಷೆಗಳಿವೆ. 2024ರ ಮಾರ್ಚ್ ಒಳಗಾಗಿ ಜಿಪಿಎಸ್ ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯು ಜಾರಿಯಾಗುವುದು ಬಹುತೇಕ ಖಚಿತವಾಗಿದ್ದು, ಇದು ಪ್ರಸ್ತುತ ಜಾರಿಯಲ್ಲಿರುವ ಶುಲ್ಕ ಸಂಗ್ರಹ ವಿಧಾನವನ್ನು ಮತ್ತಷ್ಟು ಸರಳಗೊಳಿಸುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.

2018-19ರಲ್ಲಿ ಟೋಲ್ ಪ್ಲಾಜಾದಲ್ಲಿ ವಾಹನಗಳು ಶುಲ್ಕ ಪಾವತಿಸಲು ಸರಾಸರಿ 8 ನಿಮಿಷ ಕಾಯಬೇಕಿದ್ದ ಪರಿಸ್ಥಿತಿಯನ್ನು ಫಾಸ್ಟ್ ಟ್ಯಾಗ್ ಸೌಲಭ್ಯದ ಮೂಲಕ 2020-21 ಮತ್ತು 2021-22ರ ಅವಧಿಯಲ್ಲಿ ಸರಾಸರಿ ಕಾಯುವ ಸಮಯವನ್ನು 47 ಸೆಕೆಂಡುಗಳಿಗೆ ಇಳಿಸಲಾಗಿತ್ತು. ಇದೀಗ ಜಾರಿ ಬರುತ್ತಿರುವ ಜಿಪಿಎಸ್ ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ಸೌಲಭ್ಯವು ತಡೆರಹಿತ ಚಾಲನೆ ಅನುಕೂಲ ಮಾಡಿಕೊಡಲಿದ್ದು, ಈ ಮೂಲಕ ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಹೆದ್ದಾರಿಗಳಲ್ಲಿ ಪ್ರಯಾಣಿಸುವ ನಿಖರವಾದ ದೂರಕ್ಕೆ ವಾಹನ ಚಾಲಕರಿಗೆ ಶುಲ್ಕ ವಿಧಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಟಾಟಾ ಹ್ಯಾರಿಯರ್, ಸಫಾರಿ ಅದ್ಬುತ ಪ್ರದರ್ಶನ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನಗಳನ್ನು ನಿಲ್ಲಿಸದೆ ಸ್ವಯಂಚಾಲಿತವಾಗಿ ಟೋಲ್ ಸಂಗ್ರಹವನ್ನು ಸಕ್ರಿಯಗೊಳಿಸಲು ಅಗತ್ಯವಿರುವ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ವ್ಯವಸ್ಥೆಯ (ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳು) ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುತ್ತಿದ್ದು, ಹೊಸ ಸೌಲಭ್ಯದ ಅಡಿಯಲ್ಲಿ ವಾಹನ ಮಾಲೀಕರು ಹೆದ್ದಾರಿ ಪ್ರವೇಶ ಮತ್ತು ನಿರ್ಗಮನದ ದೂರವನ್ನು ಆಧರಿಸಿ ಶುಲ್ಕ ಪಾವತಿಸಬೇಕಾಗುತ್ತದೆ.

ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತವೆ?

ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ಸೌಲಭ್ಯಕ್ಕಾಗಿ ಟ್ರ್ಯಾಕ್ ಮಾಡುವ ಸಾಧನವನ್ನು ಪ್ರತಿ ವಾಹನಗಳಲ್ಲೂ ಅಳವಡಿಸಬೇಕಿದ್ದು, ಈ ಸಾಧನವು ಮುಖ್ಯ ಶುಲ್ಕ ಸಂಗ್ರಹ ಸಾಧನದೊಂದಿಗೆ ಸಂಪರ್ಕಗೊಳ್ಳುವ ಮೂಲಕ ಟ್ರ್ಯಾಕ್ ಮಾಡುತ್ತದೆ. ಇದು ಸುಂಕ ಪಾವತಿಸಬೇಕಾದ ಹೆದ್ದಾರಿ ಪ್ರವೇಶ ಮತ್ತು ನಿರ್ಗಮಿಸುವ ಸ್ಥಳದ ನಡುವಿನ ಅಂತರವನ್ನು ಲೆಕ್ಕ ಹಾಕುವ ಮೂಲಕ ಟೋಲ್ ವಿಧಿಸುತ್ತದೆ.

ಹೆದ್ದಾರಿ ಪ್ರವೇಶ ಮತ್ತು ನಿರ್ಗಮಿಸುವ ಸ್ಥಳಗಳಲ್ಲಿ ಹೆದ್ದಾರಿ ಪ್ರಾಧಿಕಾರವು ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಅಳವಡಿಸಲಿದ್ದು, ಇವು ಪ್ರತಿಯೊಂದ ವಾಹನದ ಡೇಟಾ ಸಂಗ್ರಹಿಸಿ ಸಂಬಂಧಿತ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಶುಲ್ಕ ಕಡಿತ ಮಾಡುತ್ತದೆ.

ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಟಾಪ್ 5 ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಿವು!

ಪ್ರಸ್ತುತ ಜಾರಿಯಲ್ಲಿರುವ ಫಾಸ್ಟ್ ಟ್ಯಾಗ್ ಸೌಲಭ್ಯದಡಿಯಲ್ಲಿ ಒಂದು ಟೋಲ್ ಪ್ಲಾಜಾದಿಂದ ಇನ್ನೊಂದು ಪ್ಲಾಜಾದವರೆಗೆ ಸಂಪೂರ್ಣ ಟೋಲ್ ಸಂಗ್ರಹಿಸಲಾಗುತ್ತದೆ. ಒಂದು ವಾಹನವು ಸಂಪೂರ್ಣ ದೂರವನ್ನು ಪ್ರಯಾಣಿಸದೆ ಬೇರೆ ಸ್ಥಳದಲ್ಲಿ ಪ್ರಯಾಣವನ್ನು ಮುಗಿಸಿದರೂ ಸಹ ಟೋಲ್ ಅನ್ನು ಸಂಪೂರ್ಣವಾಗಿ ಪಾವತಿಸಬೇಕಾಗುತ್ತದೆ. ಆದರೆ ಹೊಸ ಶುಲ್ಕ ಪಾವತಿ ವಿಧಾನವು ಹೆದ್ದಾರಿ ಪ್ರವೇಶ ಮತ್ತು ನಿರ್ಗಮಿಸುವ ಸ್ಥಳದ ನಡುವಿನ ಅಂತರದ ಮೇಲೆ ಟೋಲ್ ವಿಧಿಸುವುದು ವಾಹನ ಮಾಲೀಕರಿಗೆ ಅನುಕೂಲಕವಾಗಲಿದೆ.