Honda CB350: ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಹೋಂಡಾ ಸಿಬಿ350 ಬೈಕ್ ಬಿಡುಗಡೆ
ಹೋಂಡಾ ಮೋಟಾರ್ ಸೈಕಲ್ ಕಂಪನಿಯು ತನ್ನ ಹೊಚ್ಚ ಹೊಸ ಸಿಬಿ350 ಕ್ಲಾಸಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ನೇರವಾಗಿ ಪೈಪೋಟಿ ನೀಡಲಿದೆ.
ಬಿಗ್ ವಿಂಗ್ ಶೋರೂಂಗಳ ಮೂಲಕ ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಹೋಂಡಾ ಮೋಟಾರ್ ಸೈಕಲ್ (Honda Motorcycle) ಕಂಪನಿಯು ಹೊಚ್ಚ ಹೊಸ ಸಿಬಿ350 (CB350) ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1,99,900 ಆರಂಭಿಕ ಬೆಲೆ ಹೊಂದಿದೆ.
ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಸಿಬಿ350 ಬೈಕ್ ಮಾದರಿಯು ಡಿಎಲ್ಎಕ್ಸ್ ಮತ್ತು ಡಿಎಲ್ಎಕ್ಸ್ ಪ್ರೊ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಡಿಎಲ್ಎಕ್ಸ್ ವೆರಿಯೆಂಟ್ ರೂ. 1,99,999 ಬೆಲೆ ಹೊಂದಿದ್ದರೆ ಡಿಎಲ್ಎಕ್ಸ್ ಪ್ರೊ ವೆರಿಯೆಂಟ್ ರೂ. 2,17,800 ಬೆಲೆ ಹೊಂದಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಹೊಸ ಸಿಬಿ350 ಬೈಕ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಹೈನೆಸ್ ಸಿಬಿ350 ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣಗೊಂಡಿದ್ದರೂ ಇದು ಕ್ಲಾಸಿಕ್ ಬೈಕ್ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಮಹತ್ವದ ಬದಲಾವಣೆ ಪಡೆದುಕೊಂಡಿದೆ. ಹೊಸ ಬೈಕ್ ಮಾದರಿಯಲ್ಲಿ ಸ್ಪೋರ್ಟ್ ಮಸ್ಕ್ಯೂಲರ್ ಜೊತೆಗೆ ಆಲ್ ಎಲ್ಇಡಿ ಲೈಟಿಂಗ್ ಸಿಸ್ಟಂ(ರೌಂಡ್ ಹೆಡ್ ಲ್ಯಾಂಪ್, ಎಲ್ಇಡಿ ವಿಂಕರ್ಸ್, ಎಲ್ಇಡಿ ಟೈಲ್ ಲೈಟ್) ಹೊಂದಿದೆ.
ಇದನ್ನೂ ಓದಿ: ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!
ಹಾಗೆಯೇ ಹೊಸ ಬೈಕಿನಲ್ಲಿ ರೆಟ್ರೋ ವಿನ್ಯಾಸ ಆಧರಿತ ಲಾಂಗ್ ಮೆಟಲ್ ಫೆಂಡರ್, ಮೆಟಲ್ ಕವರ್ ಒಳಗೊಂಡಿರುವ ಫ್ರಂಟ್ ಫೋರ್ಕ್ಸ್, ವಿಭಜಿತ ಆಸನ, ಡಿಜಿಟಲ್ ಅನಲಾಗ್ ಇನ್ಸ್ಟುಮೆಂಟ್ ಕ್ಲಸ್ಟರ್, ಹೋಂಡಾ ಸ್ಮಾರ್ಟ್ ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂ(ಹೆಚ್ಎಸ್ ವಿಸಿಎಸ್), ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಮತ್ತು ಹೋಂಡಾ ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್ ಸೌಲಭ್ಯಗಳಿವೆ.
ಇದಲ್ಲದೆ ಹೊಸ ಬೈಕ್ ಮಾದರಿಯಲ್ಲಿ ಟೆಲಿಸ್ಕೋಫಿಕ್ ಫ್ರಂಟ್ ಫೋರ್ಕ್ಸ್ ಸಸ್ಷೆಂಷನ್ ಮತ್ತು ನೈಟ್ರೊಜೆನ್ ಚಾರ್ಜ್ಡ್ ರಿಯರ್ ಸಸ್ಷೆಂಷನ್ ಜೋಡಣೆಯೊಂದಿಗೆ ಪ್ರಿಸಿಯಸ್ ರೆಡ್ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟೆ ಕ್ರಸ್ಟ್ ಮೆಟಾಲಿಕ್, ಮ್ಯಾಟೆ ಮಾರ್ಷಲ್ ಗ್ರೀನ್ ಮೆಟಾಲಿಕ್ ಮತ್ತು ಮ್ಯಾಟೆ ಡುನೆ ಬ್ರೌನ್ ಬಣ್ಣಗಳ ಆಯ್ಕೆ ನೀಡಲಾಗಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಸಿಬಿ350 ಬೈಕ್ ಮಾದರಿಯಲ್ಲಿ ಹೋಂಡಾ ಕಂಪನಿಯು 348.36 ಸಿಸಿ, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಿದ್ದು, ಇದು ಬಿಎಸ್6 ಎರಡನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪೂರೈಸಿದೆ. ಈ ಮೂಲಕ ಹೊಸ ಬೈಕ್ 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 21 ಹಾರ್ಸ್ ಪವರ್ ಮತ್ತು 29 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದು ದಿನ ನಿತ್ಯದ ಬಳಕೆಯ ಜೊತೆಗೆ ದೀರ್ಘಕಾಲಿಕ ಪ್ರವಾಸದ ಉದ್ದೇಶಕ್ಕೂ ಅನುಕೂಲಕರವಾಗಿದೆ.
ಇದನ್ನೂ ಓದಿ: ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು..
ಇನ್ನು ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಡ್ಯುಯಲ್ ಚಾನಲ್ ಎಬಿಎಸ್ ಸೇರಿದಂತೆ ಮುಂಭಾಗದ ಚಕ್ರದಲ್ಲಿ 310ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 240 ಎಂಎಂ ರಿಯರ್ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ರಸ್ತೆಯಲ್ಲಿ ಉತ್ತಮ ಹಿಡಿತಕ್ಕಾಗಿ 130-ಸೆಕ್ಷನ್ 18 ಇಂಚಿನ ಟೈರ್ ಗಳನ್ನು ಜೋಡಿಸಲಾಗಿದೆ. ಹೊಸ ಬೈಕ್ ಮಾದರಿಯನ್ನು ಹೋಂಡಾ ಕಂಪನಿಯು ಪ್ರೀಮಿಯಂ ಬೈಕ್ ಮಾದರಿಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್ ಫಾರ್ಮ್ ಹೊಂದಿರುವ ಬಿಗ್ ವಿಂಗ್ ಶೋರೂಂಗಳ ಮೂಲಕ ಮಾರಾಟ ಮಾಡಲಿದ್ದು, ಹೊಸ ಬೈಕ್ ಖರೀದಿಸುವ ಗ್ರಾಹಕರಿಗೆ 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಜೊತೆಗೆ 7 ವರ್ಷಗಳ ವಿಸ್ತರಿತ ವಾರಂಟಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.