ವಾಹನಗಳ ಉತ್ಪಾದನೆಯಲ್ಲಿ ಜಪಾನ್ ಹಿಂದಿಕ್ಕಿ ಹೊಸ ದಾಖಲೆ ಸೃಷ್ಠಿಸಿದ ಭಾರತ!

| Updated By: Praveen Sannamani

Updated on: Jun 29, 2023 | 9:10 PM

ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ನಿರಂತರ ಬೆಳವಣಿಗೆಯು ಭಾರತದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದೆ.

ವಾಹನಗಳ ಉತ್ಪಾದನೆಯಲ್ಲಿ ಜಪಾನ್ ಹಿಂದಿಕ್ಕಿ ಹೊಸ ದಾಖಲೆ ಸೃಷ್ಠಿಸಿದ ಭಾರತ!
ವಾಹನಗಳ ಉತ್ಪಾದನೆಯಲ್ಲಿ ಹೊಸ ದಾಖಲೆ ಸೃಷ್ಠಿಸಿದ ಭಾರತ!
Follow us on

2022-23 ರ ಆರ್ಥಿಕ ವರ್ಷದಲ್ಲಿ ಭಾರತೀಯ ಆಟೋಮೋಟಿವ್(Indian Automotive) ವಾಹನ ಉತ್ಪಾದನೆಯು ಜಪಾನ್ ಅನ್ನು ಹಿಂದಿಕ್ಕಿದ್ದು, ಪ್ರಮುಖ ಆಟೋಮೋಟಿವ್ ಬ್ರಾಂಡ್‌ಗಳು ಕಳೆದ ಹಣಕಾಸು ವರ್ಷದಲ್ಲಿ 108 ಶತಕೋಟಿ ಡಾಲರ್ ಮೌಲ್ಯದ 2.7 ಕೋಟಿ ವಾಹನಗಳನ್ನು ಉತ್ಪಾದನೆ ಮಾಡಿ ಹೊಸ ಮೈಲಿಗಲ್ಲು ಸಾಧಿಸಿವೆ.

ಆರ್ಥಿಕ ಅಭಿವೃದ್ಧಿಗಾಗಿ ಕೈಗೊಳ್ಳಲಾಗುತ್ತಿರುವ ಹೊಸ ನೀತಿ ಮತ್ತು ಸರ್ಕಾರದ ನಿರ್ಣಯಗಳ ಪರಿಣಾಮ ಭಾರತೀಯ ಆಟೋಮೋಟಿವ್ ವಲಯವು ಕಳೆದ ಕೆಲ ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ಇದೀಗ 2022-23ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 108 ಶತಕೋಟಿ ಡಾಲರ್ ಮೌಲ್ಯದ 2.7 ಕೋಟಿ ವಾಹನಗಳನ್ನು ಉತ್ಪಾದನೆ ಮಾಡಿದೆ. ಈ ಮೂಲಕ ಭಾರತವು ಚೀನಾ ಮತ್ತು ಅಮೆರಿಕಾ ನಂತರ ಮೂರನೇ ಅತಿ ದೊಡ್ಡ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಭಾರತದಲ್ಲಿ ಉತ್ಪಾದನೆಗೊಳ್ಳುವ ಹೊಸ ವಾಹನಗಳಲ್ಲಿ ಸದ್ಯ ದ್ವಿಚಕ್ರ ಉತ್ಪಾದನೆಯು ಮೊದಲನೇ ಸ್ಥಾನದಲ್ಲಿದ್ದು, ಒಟ್ಟು ವಾಹನಗಳ ಉತ್ಪಾದನೆಯಲ್ಲಿ ಶೇಕಡಾ 77ರಷ್ಟು ಪಾಲು ಹೊಂದಿದೆ. ಜೊತೆಗೆ ಭಾರತದಲ್ಲಿನ ದ್ವಿಚಕ್ರ ವಾಹನ ಉತ್ಪಾದನೆಯು ವಿಶ್ವದಲ್ಲೇ ಮೊದಲನೇ ಸ್ಥಾನಕ್ಕೇರಿದ್ದು, ಈ ಮೂಲಕ ಇವು ಆಟೋ ಉದ್ಯಮದ ಒಟ್ಟು ಮೌಲ್ಯದಲ್ಲಿ ಶೇ. 21 ರಷ್ಟು ಪಾಲು ಹೊಂದಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ದ್ವಿಚಕ್ರ ವಾಹನಗಳ ನಂತರ ಪ್ಯಾಸೆಂಜರ್ ಕಾರು ಉತ್ಪಾದನೆಯು ಎರಡನೇ ಸ್ಥಾನದಲ್ಲಿದ್ದು, ಇವು ಒಟ್ಟು ವಾಹನ ಉತ್ಪಾದನೆಯಲ್ಲಿ ಶೇ. 16 ರಷ್ಟು ಪಾಲು ಹೊಂದಿವೆ. ಇದರೊಂದಿಗೆ ಪ್ಯಾಸೆಂಜರ್ ಕಾರು ಉತ್ಪಾದನೆಯು ಒಟ್ಟು ಆಟೋಮೋಟಿವ್ ಮೌಲ್ಯದಲ್ಲಿ ಒಟ್ಟಾರೆಯಾಗಿ ಶೇ. 58 ರಷ್ಟು ಪಾಲು ಹೊಂದಿದ್ದು, ವಾಣಿಜ್ಯ ವಾಹನಗಳು ಮತ್ತು ತ್ರಿಚಕ್ರ ವಾಹನಗಳು ಒಟ್ಟು ಉತ್ಪಾದನಾ ಸಂಖ್ಯೆಯಲ್ಲಿ ಶೇಕಡಾ 4 ಮತ್ತು ಶೇ. 3 ರಷ್ಟು ಪಾಲು ಪಡೆದುಕೊಂಡಿವೆ.

ವಾಣಿಜ್ಯ ವಾಹನಗಳು ಮತ್ತು ತ್ರಿಚಕ್ರ ವಾಹನಗಳು ಒಟ್ಟು ಉತ್ಪಾದನಾ ಮೌಲ್ಯದಲ್ಲಿ ಶೇ. 19 ರಷ್ಟು ಮತ್ತು ಶೇ. 2 ರಷ್ಟು ಪಾಲು ಹೊಂದಿದ್ದು, ಭಾರತವಲ್ಲಿ ಮುಖ್ಯವಾಗಿ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಉತ್ಪಾದನೆ ಮೇಲೆ ಹೆಚ್ಚು ಕೇಂದ್ರೀಕರಿಸಲಾಗಿದೆ. ಆದರೆ ಭಾರತದಲ್ಲಿ ಇವಿ ವಾಹನ ಉತ್ಪಾದನಾ ವಲಯವು ನಿಧಾನಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ಇದು ಒಟ್ಟು ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಶೇ. 2 ರಷ್ಟು ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.

ಇದನ್ನೂ ಓದಿ: ಬಹುನೀರಿಕ್ಷಿತ ಹೋಂಡಾ ಎಲಿವೇಟ್ ಕಂಪ್ಯಾಕ್ಟ್ ಎಸ್ ಯುವಿ ಅನಾವರಣ

ಭಾರತದಲ್ಲಿ ಸುಸ್ಧಿರ ಅಭಿವೃದ್ದಿಗಾಗಿ ಸದ್ಯ ಪರಿಸರ ಸ್ನೇಹಿ ವಾಹನಗಳತ್ತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಹೊಸ ಇವಿ ವಾಹನ ಖರೀದಿದಾರರನ್ನು ಸೆಳೆಯಲು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಹಲವಾರು ಆಕರ್ಷಕ ಯೋಜನೆಗಳನ್ನು ಅಳವಡಿಸಿಕೊಂಡಿವೆ. ಇದರ ಹೊರತಾಗಿಯೂ ವಾರ್ಷಿಕ ಬೆಳವಣಿಗೆ ನಿರೀಕ್ಷಿತ ಮಟ್ಟ ತಲುಪದಿರುವುದು ಇವಿ ಉದ್ಯಮದಲ್ಲಿ ತುಸು ಹಿನ್ನಡೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಸಾಮೂಹಿಕ ಮಾರುಕಟ್ಟೆಗೆ ಬೃಹತ್ ಕಾರು ಉತ್ಪಾದನಾ ಕಂಪನಿಗಳು ಲಗ್ಗೆಯಿಡುತ್ತಿರುವುದು ಹೊಸ ಸಂಚಲನ ಮೂಡಿಸಲಿವೆ ಎನ್ನಬಹುದು.