Maruti Suzuki: ಮಾರುತಿ ಸುಜುಕಿ ಆಲ್ಟೋ ಕೆ10, ಎಸ್-ಪ್ರೆಸ್ಸೊನಲ್ಲಿ ಇನ್ಮುಂದೆ ಈ ಫೀಚರ್ಸ್ ಕಡ್ಡಾಯ!
ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಾರುಗಳನ್ನು ಹೊಸ ಸುರಕ್ಷಾ ಫೀಚರ್ಸ್ ಗಳೊಂದಿಗೆ ಉನ್ನತೀಕರಿಸುತ್ತಿದ್ದು, ಆಲ್ಟೋ ಕೆ10 ಮತ್ತು ಎಸ್-ಪ್ರೆಸ್ಸೊ ಕಾರುಗಳಲ್ಲಿ ಇಎಸ್ ಪಿ ಫೀಚರ್ಸ್ ಸ್ಟ್ಯಾಂಡರ್ಡ್ ಆಗಿ ನೀಡಿದೆ.
ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಜನಪ್ರಿಯ ಮಾದರಿಗಳಾದ ಆಲ್ಟೋ ಕೆ10 ಮತ್ತು ಎಸ್-ಪ್ರೆಸ್ಸೊ ಕಾರುಗಳಲ್ಲಿ ಇನ್ಮುಂದೆ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೌಲಭ್ಯವನ್ನು ಕಡ್ಡಾಯವಾಗಿ ನೀಡಲು ನಿರ್ಧರಿಸಿದೆ. ಹೊಸ ಸುರಕ್ಷಾ ಸೌಲಭ್ಯವು ಆಲ್ಟೋ ಕೆ10 ಮತ್ತು ಎಸ್-ಪ್ರೆಸ್ಸೊ ಕಾರುಗಳ ಎಲ್ಲಾ ವೆರಿಯೆಂಟ್ ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಹೊಸ ಫೀಚರ್ಸ್ ಜೋಡಣೆಗಾಗಿ ಯಾವುದೇ ರೀತಿಯ ಬೆಲೆ ಹೆಚ್ಚಳ ಮಾಡಿಲ್ಲ ಎಂಬ ಮಾಹಿತಿ ಹಂಚಿಕೊಳ್ಳಲಾಗಿದೆ.
ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೌಲಭ್ಯವು ಕಾರು ಚಾಲನೆಯ ಸಂದರ್ಭದಲ್ಲಿ ಹೆಚ್ಚಿನ ವೇಗದಲ್ಲೂ ಚಾಲಕನು ಉತ್ತಮವಾಗಿ ನಿಯಂತ್ರಣ ಮಾಡಬಹುದಾಗಿದ್ದು, ಇದು ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಜೊತೆಗೆ ಸಂಯೋಜನೆ ಹೊಂದಿರುತ್ತದೆ. ಇದು ಪ್ರಮುಖವಾಗಿ ಕಾರನ್ನು ಸ್ಕಿಡ್ಡಿಂಗ್ ಆಗುವುದನ್ನು ತಪ್ಪಿಸುವುದರ ಜೊತೆಗೆ ಅತಿ ಕಡಿಮೆ ಅವಧಿಯಲ್ಲಿ ಕಾರನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಈ ಮೂಲಕ ಇದು ಸಂಭಾವ್ಯ ಅಪಘಾತಗಳನ್ನು ತಡೆಯಲಿದ್ದು, ಇದು ಪ್ರಯಾಣಿಕರ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನಬಹುದು.
ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ಹೊಸ ಕಾರುಗಳಲ್ಲಿ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ತನ್ನ ಪ್ರಮುಖ ಉತ್ಪನ್ನಗಳಲ್ಲಿನ ಸುರಕ್ಷಾ ಫೀಚರ್ಸ್ ಗಳನ್ನು ಗಮನಾರ್ಹವಾಗಿ ಬದಲಾವಣೆಗೊಳಿಸುತ್ತಿದೆ. ಪ್ರೀಮಿಯಂ ಕಾರುಗಳಲ್ಲಿ ಮಾತ್ರವಲ್ಲದೇ ಬಜೆಟ್ ಬೆಲೆಯ ಎಂಟ್ರಿ ಲೆವಲ್ ಕಾರುಗಳಲ್ಲೂ ಹಲವು ಫೀಚರ್ಸ್ ನೀಡುತ್ತಿದ್ದು, ಆಲ್ಟೋ ಕೆ10, ಎಸ್-ಪ್ರೆಸ್ಸೊ ಕಾರುಗಳಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಬಿಡಿ, ಹಿಲ್ ಹೋಲ್ಡ್ ಅಸಿಸ್ಟ್ ಜೋಡಣೆಯನ್ನು ಕಡ್ಡಾಯಗೊಳಿಸಿದೆ. ಇದೀಗ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಇದು ಗ್ರಾಹಕರಿಗೆ ಸುರಕ್ಷಿತ ಕಾರು ಚಾಲನೆಯನ್ನು ಖಾತ್ರಿಪಡಿಸುತ್ತಿದೆ.
ಇದನ್ನೂ ಓದಿ: ಸನ್‌ರೂಫ್ ಹೊಂದಿರುವ ಕಾರುಗಳಲ್ಲಿ ಎಷ್ಟೆಲ್ಲಾ ನ್ಯೂನತೆಗಳಿವೆ ನೋಡಿ!
ಇನ್ನು ಆಲ್ಟೋ ಕೆ10 ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 3.99 ಲಕ್ಷದಿಂದ ರೂ. 5.96 ಲಕ್ಷ ಬೆಲೆ ಹೊಂದಿದ್ದು, ಎಸ್-ಪ್ರೆಸ್ಸೊ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 4.26 ಲಕ್ಷದಿಂದ ರೂ. 6.12 ಲಕ್ಷ ಬೆಲೆ ಪಡೆದುಕೊಂಡಿದೆ. ಈ ಎರಡೂ ಕಾರು ಮಾದರಿಗಳಲ್ಲೂ ಹಲವಾರು ತಾಂತ್ರಿಕ ಅಂಶಗಳು ಒಂದೇ ಮಾದರಿಯಲ್ಲಿದ್ದು, ಇವು ರೆನಾಲ್ಟ್ ಕ್ವಿಡ್ ಮಾದರಿಗೆ ಉತ್ತಮ ಪೈಪೋಟಿ ನೀಡುತ್ತಿವೆ.