ಮಾರುತಿ ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆಗೆ ಡೇಟ್ ಫಿಕ್ಸ್
ಮಾರುತಿ ಸುಜುಕಿ ಕಂಪನಿ ತನ್ನ ಬಹುನೀರಿಕ್ಷಿತ ಇವಿಎಕ್ಸ್ ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆಗೆ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಹೊಸ ಇವಿ ಕಾರು ಭರ್ಜರಿ ಮೈಲೇಜ್ ನೊಂದಿಗೆ ವಿನೂತನ ಫೀಚರ್ಸ್ ಹೊಂದಿರಲಿದೆ.
ಭಾರತದಲ್ಲಿ ಹೊಸ ತಲೆಮಾರಿನ ಎಲೆಕ್ಟ್ರಿಕ್ ಕಾರುಗಳ (Electric Cars) ಮಾದರಿಗಳ ಅಬ್ಬರ ಹೆಚ್ಚುತ್ತಿದ್ದು, ಇದೀಗ ಮಾರುತಿ ಸುಜುಕಿ (Maruti Suzuki) ಕಂಪನಿಯು ಸಹ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಇವಿಎಕ್ಸ್ ಎಸ್ ಯುವಿ ಬಿಡುಗಡೆ ಮಾಡಲು ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ. 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಇವಿಎಕ್ಸ್ ಕಾರು ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಇದೀಗ ಉತ್ಪಾದನಾ ಹಂತಕ್ಕೆ ತಲುಪುತ್ತಿದೆ. ಹೀಗಾಗಿ ಹೊಸ ಇವಿ ಕಾರು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಇದು ಇವಿ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ.
ಮಾಹಿತಿಗಳ ಪ್ರಕಾರ ಹೊಸ ಇವಿಎಕ್ಸ್ ಕಾರನ್ನು ಮಾರುತಿ ಸುಜುಕಿ ಕಂಪನಿಯು 2025ರ ಮೊದಲ ತ್ರೈಮಾಸಿಕ ವೇಳೆಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಇವಿ ಕಾರು ಗುಜರಾತ್ ನಲ್ಲಿರುವ ಹಂಸಲಾಪುರ್ ಉತ್ಪಾದನಾ ಘಟಕದಲ್ಲಿ ಉತ್ಪಾದನೆಗೊಳ್ಳಲಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನ ಪ್ರೇರಿತ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಸಿದ್ದಪಡಿಸಲಾಗಿದ್ದು, ಇದೇ ಪ್ಲ್ಯಾಟ್ ಫಾರ್ಮ್ ಅಡಿಯಲ್ಲಿ ಮಾರುತಿ ಸುಜುಕಿಯ ಭವಿಷ್ಯದ ವಿವಿಧ ಇವಿ ಮಾದರಿಗಳು ಉತ್ಪಾದನೆಗೊಳ್ಳಲಿವೆ.
ಇವಿಎಕ್ಸ್ ಕಾರು ಮಾದರಿಯನ್ನು ವಿಶೇಷವಾಗಿ ಭಾರತೀಯ ಗ್ರಾಹಕರ ಆದ್ಯತೆಗೆ ತಕ್ಕಂತೆ ಹಲವಾರು ವಿಶೇಷತೆಗಳೊಂದಿಗೆ ಸಿದ್ದಪಡಿಸಿರುವ ಮಾರುತಿ ಸುಜುಕಿ ಕಂಪನಿಯು ಭಾರತದಿಂದಲೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಳಿಸುವ ಯೋಜನೆ ಹೊಂದಿದೆ. ಭಾರತದಿಂದ ವಾರ್ಷಿಕವಾಗಿ 1.50 ಲಕ್ಷ ಯುನಿಟ್ ಇವಿ ಕಾರುಗಳನ್ನು ರಫ್ತು ಮಾಡುವ ಗುರಿಹೊಂದಲಾಗಿದ್ದು, ಇದು ಪ್ರತಿಸ್ಪರ್ಧಿ ಮಾದರಿಗಿಂತಲೂ ಹೆಚ್ಚಿನ ವಿಶೇಷತೆಗಳೊಂದಿಗೆ ಖರೀದಿಗೆ ಲಭ್ಯವಾಗಲಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಕೂಪೆ ಎಸ್ ಯುವಿ ವಿನ್ಯಾಸ ಹೊಂದಿರುವ ಇವಿಎಕ್ಸ್ ಕಾರು ಮಾದರಿಯು ಸದ್ಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಟಾಟಾ ಕರ್ವ್ ಇವಿ ಸೇರಿದಂತೆ ಮಹೀಂದ್ರಾ ಎಕ್ಸ್ ಯುವಿ400 ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿ ಕಾನ್ಸೆಪ್ಟ್ ಮಾದರಿಯಲ್ಲಿರುವಂತೆ ಹಲವು ತಾಂತ್ರಿಕ ಅಂಶಗಳನ್ನು ಮುಂದುವರೆಸುವ ಸಾಧ್ಯತೆಗಳಿದ್ದು, ಇದು ಹೆಚ್ಚಿನ ಮಟ್ಟದ ಸ್ಥಳೀಯ ಬಿಡಿಭಾಗಗಳ ಜೋಡಣೆಯೊಂದಿಗೆ ಬೆಲೆಯಲ್ಲೂ ಗಮನಸೆಳೆಯಲಿದೆ.
ಇವಿಎಕ್ಸ್ ಇವಿಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 40 ಕೆವಿಹೆಚ್ ಮತ್ತು 60 ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ನೀಡುವ ಸಾಧ್ಯತೆಗಳಿದ್ದು, ಇದರಲ್ಲಿ ಆರಂಭಿಕ ಮಾದರಿಯು ಪ್ರತಿ ಚಾರ್ಜ್ ಗೆ 350 ರಿಂದ 400 ಕಿ.ಮೀ ಮೈಲೇಜ್ ನೀಡಿದರೆ ಹೈ ಎಂಡ್ ಮಾದರಿಯು ಪ್ರತಿ ಚಾರ್ಜ್ ಗೆ ಗರಿಷ್ಠ 550 ಕಿ.ಮೀ ತನಕ ಮೈಲೇಜ್ ನೀಡಬಹುದಾಗಿದೆ. ಇದರೊಂದಿಗೆ ಇದು ಟೂ-ವ್ಹೀಲ್ ಡ್ರೈವ್ ಮತ್ತು ಆಲ್-ವ್ಹೀಲ್ ಡ್ರೈವ್ ಸೌಲಭ್ಯದೊಂದಿಗೆ ಆರಾಮದಾಯಕ ಒಳಾಂಗಣ ಸೌಲಭ್ಯ ಪಡೆದುಕೊಳ್ಳಲಿದೆ.
ಇದನ್ನೂ ಓದಿ: ಸನ್‌ರೂಫ್ ಹೊಂದಿರುವ ಕಾರುಗಳಲ್ಲಿ ಎಷ್ಟೆಲ್ಲಾ ನ್ಯೂನತೆಗಳಿವೆ ನೋಡಿ!
4,200 ಎಂಎಂ ಉದ್ದಳತೆ ಹೊಂದಿರುವ ಹೊಸ ಕಾರಿನ ಒಳಭಾಗದಲ್ಲಿ ಆಕರ್ಷಕವಾದ ಡ್ಯಾಶ್ ಬೋರ್ಡ್, ಟ್ವಿನ್ ಸ್ಕ್ರೀನ್ ಸೆಟ್ಅಪ್, ದೊಡ್ಡದಾದ ಇನ್ಪೋಟೈನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ವರ್ಟಿಕಲ್ ಎಸಿ ಮತ್ತು ಪ್ಲ್ಯಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್ ಸೌಲಭ್ಯಗಳಿದ್ದು, ಇದರೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಲಾಗಿದೆ. ಜೊತೆಗೆ ಹೊಸ ಕಾರು ಟೊಯೊಟಾ ಇವಿ ಪ್ಲ್ಯಾಟ್ ಫಾರ್ಮ್ ನಿಂದಲೂ ಹಲವು ಫೀಚರ್ಸ್ ಎರವಲು ಪಡೆದುಕೊಳ್ಳಲಿದ್ದು, ಇವಿಎಕ್ಸ್ ಮಾದರಿಯನ್ನೇ ಟೊಯೊಟಾ ಕೂಡಾ ಬದಲಿ ಹೆಸರಿನೊಂದಿಗೆ ಮಾರಾಟ ಮಾಡಲಿದೆ.
ಈ ಮೂಲಕ ಇದು ವಿವಿಧ ವೆರಿಯೆಂಟ್ ಗಳೊಂದಿಗೆ ರೂ. 12 ಲಕ್ಷದಿಂದ ರೂ. 18 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಇದು ಹೆಚ್ಚಿನ ಮಟ್ಟದ ಸ್ಥಳೀಯ ಬಿಡಿಭಾಗಗಳು ಮತ್ತು ಬ್ಯಾಟರಿ ಜೋಡಣೆಯಿಂದ ಬೆಲೆಯಲ್ಲೂ ಗಮನಸೆಳೆಯಲಿದೆ.