Maruti Suzuki: ನಮ್ಮ ಬೆಂಗಳೂರಿನಲ್ಲಿ 500ನೇ ನೆಕ್ಸಾ ಶೋರೂಂ ತೆರೆದ ಮಾರುತಿ ಸುಜುಕಿ
ಮಾರುತಿ ಸುಜುಕಿ ಕಂಪನಿಯು ನೆಕ್ಸಾ ಶೋರೂಂ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ಗ್ರಾಹಕರ ಬೇಡಿಕೆ ಆಧರಿಸಿ ಶೋರೂಂಗಳ ಸಂಖ್ಯೆಯನ್ನು 500ಕ್ಕೆ ವಿಸ್ತರಿಸಿದೆ.
ಸಾಮಾನ್ಯ ಕಾರುಗಳ ಜೊತೆಗೆ ಪ್ರೀಮಿಯಂ ಕಾರುಗಳ ಮಾರಾಟದಲ್ಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯು ಇದೀಗ ನೆಕ್ಸಾ (Nexa) ಶೋರೂಂಗಳ ಸಂಖ್ಯೆಯನ್ನು 500ಕ್ಕೆ ಏರಿಕೆ ಮಾಡಿದೆ. ಮಾರುತಿ ಸುಜುಕಿ 500ನೇ ಶೋರೂಂ ನಮ್ಮ ಬೆಂಗಳೂರಿನ ನಾಗಸಂದ್ರದಲ್ಲಿ ಆರಂಭಿಸಿದ್ದು, ಪ್ರೀಮಿಯಂ ಕಾರು ಖರೀದಿಸುವ ಗ್ರಾಹಕರಿಗೆ ಇದು ಹೆಚ್ಚಿನ ಆಯ್ಕೆಗಳನ್ನು ಒದಗಿಸಲಿದೆ.
2015ರ ಜುಲೈನಲ್ಲಿ ಮೊದಲ ಬಾರಿಗೆ ನೆಕ್ಸಾ ಶೋರೂಂಗಳನ್ನು ಆರಂಭಿಸಿದ ಮಾರುತಿ ಸುಜುಕಿ ಕಂಪನಿಯು ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಗಮನಾರ್ಹ ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದು, ನೆಕ್ಸಾ ಮೂಲಕ ಗ್ರಾಹಕರಿಗೆ ಅನನ್ಯ ಕಾರು ಖರೀದಿ ಅನುಭವವನ್ನು ನೀಡುತ್ತಿದೆ.
ವಿವಿಧ ಕಾರುಗಳ ಮಾರಾಟಕ್ಕಾಗಿ ಮಾರುತಿ ಸುಜುಕಿ ಕಂಪನಿಯು ಅರೆನಾ ಮತ್ತು ನೆಕ್ಸಾ ಎನ್ನುವ ಎರಡು ಮಾದರಿಯ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಇದರಲ್ಲಿ ಪ್ರೀಮಿಯಂ ಕಾರುಗಳ ಮಾರಾಟಕ್ಕಾಗಿ ನೆಕ್ಸಾ ಪ್ಲ್ಯಾಟ್ ಫಾರ್ಮ್ ಹೊಂದಿದ್ದರೆ ಸಾಮಾನ್ಯ ಕಾರು ಮಾದರಿಗಳಾಗಿ ಅರೆನಾ ಪ್ಲ್ಯಾಟ್ ಫಾರ್ಮ್ ಹೊಂದಿದೆ. ನೆಕ್ಸಾ ಶೋರೂಂಗಳಲ್ಲಿ ಇಗ್ನಿಸ್, ಬಲೆನೊ, ಫ್ರಾಂಕ್ಸ್, ಸಿಯಾಜ್, ಎಕ್ಸ್ಎಲ್6, ಜಿಮ್ನಿ, ಗ್ರ್ಯಾಂಡ್ ವಿಟಾರಾ ಮತ್ತು ಇನ್ವಿಕ್ಟೊ ಕಾರುಗಳನ್ನು ಮಾರಾಟ ಮಾಡುತ್ತಿದ್ದರೆ ಅರೆನಾ ಶೋರೂಂನಲ್ಲಿ ಇಕೋ, ಎಸ್-ಪ್ರೊಸ್ಸೊ, ಆಲ್ಟೊ ಕೆ10, ವ್ಯಾಗನ್ಆರ್, ಸೆಲೆರಿಯೊ, ಸ್ವಿಫ್ಟ್, ಡಿಜೈರ್, ಬ್ರೆಝಾ ಮತ್ತು ಎರ್ಟಿಗಾ ಕಾರುಗಳನ್ನು ಮಾರಾಟ ಮಾಡುತ್ತಿದೆ.
ಇದನ್ನೂ ಓದಿ: ಸನ್‌ರೂಫ್ ಹೊಂದಿರುವ ಕಾರುಗಳಲ್ಲಿ ಎಷ್ಟೆಲ್ಲಾ ನ್ಯೂನತೆಗಳಿವೆ ನೋಡಿ!
ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಇದುವರೆಗೆ 500 ನೆಕ್ಸಾ ಶೋರೂಂ ಹೊಂದಿರುವ ಮಾರುತಿ ಸುಜುಕಿ ಕಂಪನಿಯು ಮುಂಬರುವ ಒಂದು ವರ್ಷದೊಳಗಾಗಿ 600 ನೆಕ್ಸಾ ಶೋರೂಂ ಹೊಂದುವ ಗುರಿಯಿಟ್ಟುಕೊಂಡಿದೆ. ಹೊಸ ನೆಕ್ಸಾ ಶೋರೂಂಗಳನ್ನು ಈ ಬಾರಿ ಟೈರ್ 2 ಮತ್ತು ಟೈರ್ 3 ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ನಿರ್ಧರಿಸಿದ್ದು, ಗ್ರಾಮೀಣ ಭಾಗದ ಗ್ರಾಹಕರು ಪ್ರೀಮಿಯಂ ಕಾರುಗಳತ್ತ ಒಲವು ತೊರುತ್ತಿರುವ ಗಮನಾರ್ಹ ಬೆಳವಣಿಗೆಯಾಗಿದೆ.
ಇನ್ನು ಮಾರುತಿ ಸುಜುಕಿ ಕಂಪನಿಯು ಗ್ರಾಹರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುವ ಮೂಲಕ ನಂ.1 ಸ್ಥಾನದಲ್ಲಿ ಮುಂದುವರೆದಿದ್ದು, ಇನ್ಮುಂದೆ ಹೊಸ ಕಾರು ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೂ ಅನ್ವಯಿಸುವಂತೆ ಹೊಸ ಸ್ಟ್ಯಾಂಡರ್ಡ್ ವಾರಂಟಿ ಯೋಜನೆಯನ್ನು ಪ್ರಕಟಿಸಿ ಗಮನಸೆಳೆದಿದೆ. ಈ ಹಿಂದೆ ಪ್ರತಿಯೊಂದು ಕಾರಿನ ಮೇಲೂ ನೀಡಲಾಗುತ್ತಿದ್ದ 2 ವರ್ಷ ಅಥವಾ 40 ಸಾವಿರ ಕಿ.ಮೀ ಗಳ ವಾರಂಟಿಯನ್ನು ಇದೀಗ 3 ವರ್ಷ ಅಥವಾ 1 ಲಕ್ಷ ಕಿ.ಮೀ ಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
3 ವರ್ಷ ಅಥವಾ 1 ಲಕ್ಷ ಕಿ.ಮೀ ವಾರಂಟಿಯು ಇದೀಗ ಮಾರುತಿ ಸುಜುಕಿ ನಿರ್ಮಾಣದ ಪ್ರತಿಯೊಂದು ಕಾರು ಮಾದರಿಗೂ ಅನ್ವಯಿಸುವಂತೆ ಜಾರಿಗೆ ತರಲಾಗಿದ್ದು, ಹೊಸ ಕಾರು ಉತ್ಪನ್ನಗಳಿಗೆ ಇದೀಗ ಮತ್ತಷ್ಟು ಸುರಕ್ಷತೆ ದೊರೆಯಲಿದೆ. ಈ ಮೂಲಕ ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಿದ್ದು, ಟೊಯೊಟಾ ಕಾರುಗಳಿಗೆ ಸಮವಾಗಿ ಹೊಸ ವಾರಂಟಿಗಳನ್ನು ನೀಡುತ್ತಿದೆ. ಜೊತೆಗೆ ಆಸಕ್ತ ಗ್ರಾಹಕರಿಗೆ ಹೆಚ್ಚುವರಿ ಮೊತ್ತದೊಂದಿಗೆ ಹೊಸದಾಗಿ 6 ವರ್ಷಗಳು ಅಥವಾ 1.6 ಲಕ್ಷ ಕಿ.ಮೀ ವಿಸ್ತರಿತ ವಾರಂಟಿ ಸೌಲಭ್ಯವನ್ನು ನೀಡುತ್ತಿದೆ. ಇದರೊಂದಿಗೆ ಈ ಹಿಂದಿನ 4 ವರ್ಷಗಳು ಅಥವಾ 1.2 ಲಕ್ಷ ಕಿ.ಮೀ ವಿಸ್ತರಿತ ವಾರಂಟಿಯನ್ನು ಇದೀಗ 5 ವರ್ಷಗಳು ಅಥವಾ 1.4 ಲಕ್ಷ ಕಿ.ಮೀ ಗಳಿಗೆ ವಿಸ್ತರಿಸಲಾಗಿದೆ.