Cow Dung: ಸಿಎನ್ಜಿ ವಾಹನಗಳಿಗೆ ಜೈವಿಕ ಇಂಧನ; ಮಾರುತಿ ಸುಜುಕಿಗೆ ಬೇಕಿದೆ ಹಸು ಸೆಗಣಿ
Maruti Suzuki Biofuel Programme In India- ಪರಿಸರ ಸ್ನೇಹಿ ವಾಹನಗಳ ತಯಾರಿಕೆಗೆ ಒತ್ತುಕೊಡುತ್ತಿರುವ ಮಾರುತಿ ಸುಜುಕಿ ಸಂಸ್ಥೆ ಇದೀಗ ಹಸು ಸೆಗಣಿಗಾಗಿ ಭಾರತೀಯ ಕೃಷಿಕರ ಮನೆಬಾಗಿಲು ತಟ್ಟಲಿದೆ. ಹಸು ಸೆಗಣಿಯಿಂದ ಮಾಡಲಾದ ಜೈವಿಕ ಅನಿಲವನ್ನು ವಾಹನಗಳಿಗೆ ಇಂಧನವಾಗಿ ಬಳಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸಂಸ್ಥೆ ಹಮ್ಮಿಕೊಂಡಿದೆ.
ನವದೆಹಲಿ: ಪರಿಸರ ಸ್ನೇಹಿ ವಾಹನಗಳ (Environment friendly Vehicles) ತಯಾರಿಕೆಗೆ ಒತ್ತುಕೊಡುತ್ತಿರುವ ಮಾರುತಿ ಸುಜುಕಿ ಸಂಸ್ಥೆ ಇದೀಗ ಹಸು ಸೆಗಣಿಗಾಗಿ (Cow Dung) ಭಾರತೀಯ ಕೃಷಿಕರ ಮನೆಬಾಗಿಲು ತಟ್ಟಲಿದೆ. ಹಸು ಸೆಗಣಿಯಿಂದ ಮಾಡಲಾದ ಜೈವಿಕ ಅನಿಲವನ್ನು (Bio Fuel) ವಾಹನಗಳಿಗೆ ಇಂಧನವಾಗಿ ಬಳಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸಂಸ್ಥೆ ಹಮ್ಮಿಕೊಂಡಿದೆ. ಜಪಾನ್ ಮೂಲದ ಸುಜುಕಿ ಸಂಸ್ಥೆ ಈಗಾಗಲೇ ತನ್ನ ದೇಶದಲ್ಲಿ ಈ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಈಗ ಅದರ ಭಾರತೀಯ ಅಂಗಸಂಸ್ಥೆ ಮಾರುತಿ ಮೂಲಕ ಭಾರತದಲ್ಲೂ ಜೈವಿಕ ಅನಿಲವನ್ನು ಬಳಸುವ ಕೆಲಸಕ್ಕೆ ಕೈ ಹಾಕುತ್ತಿದೆ.
ಜೈವಿಕ ಅನಿಲವನ್ನು ತನ್ನ ಸಿಎನ್ಜಿ ವಾಹನಗಳಿಗೆ ಇಂಧನವಾಗಿ ಬಳಸುವುದು ಮಾರುತಿ ಸುಜುಕಿ ಸಂಸ್ಥೆಯ ಆಲೋಚನೆ. ಭಾರತದಲ್ಲಿರುವ ಸಿಎನ್ಜಿ ಕಾರುಗಳ (CNG Vehicles) ಮಾರುಕಟ್ಟೆಯಲ್ಲಿ ಶೇ. 70ರಷ್ಟು ಪಾಲು ಮಾರುತಿ ಸುಜುಕಿಯದ್ದೇ ಆಗಿದೆ. ಈಗ ಬಯೋ ಗ್ಯಾಸ್ ಅನ್ನು ಸಿಎನ್ಜಿ ವಾಹನಗಳಿಗೆ ಅಳವಡಿಸುವ ಮೂಲಕ ಇನ್ನಷ್ಟು ಪರಿಸರಸ್ನೇಹಿ ಮಾರ್ಗದಲ್ಲಿ ಸಂಸ್ಥೆ ಹೆಜ್ಜೆ ಇಟ್ಟಿದೆ.
ಸಿಎನ್ಜಿ ಎಂದರೆ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್. ಒತ್ತಡಸೃಷ್ಟಿತ ನೈಸರ್ಗಿಕ ಅನಿಲ ಎನ್ನಬಹುದು. ಸಾಮಾನ್ಯವಾಗಿ ಮೀಥೇನ್ ಅನಿಲವನ್ನು ಸಿಎನ್ಜಿಗೆ ಬಳಕೆ ಮಾಡಲಾಗುತ್ತದೆ. ಗಾಳಿಗೆ ಬೆರೆತ ಮೀಥೇನ್ ಅನಿಲವನ್ನು ಎಂಜಿನ್ನ ಕಂಬಷ್ಚನ್ ಚೇಂಬರ್ಗೆ ಕಳುಹಿಸಿದಾಗ ಶಕ್ತಿ ಉತ್ಪಾದನೆಯಾಗುತ್ತದೆ. ಇಲ್ಲಿ ಮೀಥೇನ್ ಅನಿಲಕ್ಕೆ ಪರ್ಯಾಯವಾಗಿ ಜೈವಿಕ ಅನಿಲವನ್ನು ಸಿಎನ್ಜಿ ಎಂಜಿನ್ಗಳಿಗೆ ಇಂಧನವಾಗಿ ಬಳಸಬಹುದು.
ಜಪಾನ್ನಲ್ಲಿ ಹಸು ಸೆಗಣಿ ಮೂಲಕ ತಯಾರಾಗುವ ಜೈವಿಕ ಇಂಧನದಿಂದ ವಿದ್ಯುತ್ ಉತ್ಪಾದನೆ ಮಾಡುವ ಫುಜಿಸನ್ ಅಸಾಗಿರಿ ಬಯೋಮಾಸ್ ಎಂಬ ಕಂಪನಿ ಜೊತೆ ಸುಜುಕಿ ಒಪ್ಪಂದ ಮಾಡಿದೆ. ಸುಜುಕಿ ಸಂಸ್ಥೆಗೆ ಫುಜಿಸಲ್ ಜೈವಿಕ ಇಂಧನ ಪೂರೈಸುತ್ತದೆ. ಅದೇ ರೀತಿ ಸುಜುಕಿ ಸಂಸ್ಥೆ ಭಾರತದ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಡೈರಿ ಡೆಲವಪ್ಮೆಂಟ್ ಬೋರ್ಡ್ ಮತ್ತು ಬಾನಸ್ ಡೈರಿ ಜೊತೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.
ಮಾರುತಿ ಸುಜುಕಿ ಸಂಸ್ಥೆ ಜೈವಿಕ ಅನಿಲ ಉತ್ಪಾದನೆಯ ವ್ಯವಹಾರವನ್ನು ಭಾರತದಲ್ಲಿ ಮಾತ್ರವಲ್ಲ ಆಗ್ನೇಯ ಏಷ್ಯನ್ ದೇಶಗಳು, ಆಫ್ರಿಕಾ ದೇಶಗಳಲ್ಲೂ ಮಾಡುವ ಉದ್ದೇಶ ಹೊಂದಿದೆ. ಆದರೆ, ಈ ಯೋಜನೆಯಿಂದ ಭಾರತದ ಹೈನೋದ್ಯಮಕ್ಕೆ ಇನ್ನಷ್ಟು ಪುಷ್ಟಿ ಸಿಗಲಿದೆ. ರೈತರ ಆದಾಯಕ್ಕೂ ಪುಷ್ಟಿ ಸಿಗುವ ನಿರೀಕ್ಷೆ ಇದೆ.
Published On - 1:13 pm, Fri, 27 January 23