TVS Jupiter 110: ಭರ್ಜರಿ ಫೀಚರ್ಸ್ ಗಳೊಂದಿಗೆ 2024ರ ಟಿವಿಎಸ್ ಜೂಪಿಟರ್ 110 ಸ್ಕೂಟರ್ ಬಿಡುಗಡೆ
ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಸ್ಕೂಟರ್ ಜೂಪಿಟರ್ 110 ಮಾದರಿಯ ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ದೇಶದ ಜನಪ್ರಿಯ ಬೈಕ್ ಉತ್ಪಾದನಾ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ (TVS Motrs) ತನ್ನ ಜನಪ್ರಿಯ ಜೂಪಿಟರ್ 110 ಸ್ಕೂಟರ್ ನಲ್ಲಿ 2024ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಜೂಪಿಟರ್ 110 ಸ್ಕೂಟರ್ ಡ್ರಮ್, ಡ್ರಮ್ ಅಲಾಯ್, ಡ್ರಮ್ ಸ್ಮಾರ್ಟ್ಎಕ್ಸ್ ಕನೆಕ್ಟ್ ಮತ್ತು ಡಿಸ್ಕ್ ಸ್ಮಾರ್ಟ್ಎಕ್ಸ್ ಕನೆಕ್ಟ್ ಎನ್ನುವ ಪ್ರಮುಖ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 73,700 ಆರಂಭಿಕ ಬೆಲೆ ಹೊಂದಿದೆ.
110 ಸಿಸಿ ಸ್ಕೂಟರ್ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಜೂಪಿಟರ್ 110 ಮಾದರಿಯು ಮೊದಲ ಬಾರಿಗೆ ಬಿಡುಗಡೆಯಾದ ಏಳು ವರ್ಷಗಳ ನಂತರ ಹೊಸ ಬದಲಾವಣೆಗಳನ್ನು ಪಡೆದುಕೊಳ್ಳುತ್ತಿದೆ. 2024ರ ಜೂಪಿಟರ್ 110 ಮಾದರಿಯಲ್ಲಿ ಈ ಬಾರಿ ಹೆಚ್ಚಿನ ದಕ್ಷತೆ ಹೊಂದಿರುವ ಎಂಜಿನ್, ಆಕರ್ಷಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ನೀಡಲಾಗಿದೆ.
ಹೊಸ ಜೂಪಿಟರ್ 110 ಸ್ಕೂಟರಿನಲ್ಲಿ ಟಿವಿಎಸ್ ಕಂಪನಿಯು ಸುಧಾರಿತ 113ಸಿಸಿ ಎಂಜಿನ್ ಜೋಡಣೆ ಮಾಡಿದ್ದು, ಇದರಲ್ಲಿ ಹೆಚ್ಚಿನ ಇಂಧನ ದಕ್ಷತೆಗಾಗಿ ಮೈಕ್ರೊ ಹೈಬ್ರಿಡ್ ಅಸಿಸ್ಟ್ ಸೌಲಭ್ಯವನ್ನು ನೀಡಲಾಗಿದೆ. ಹೊಸ ಮೈಕ್ರೊ ಹೈಬ್ರಿಡ್ ತಂತ್ರಜ್ಞಾನವು ಟಾಪ್ ಎಂಡ್ ಮಾದರಿಯಲ್ಲಿ ಮಾತ್ರ ಲಭ್ಯವಿದ್ದು, ಹೊಸ ವಿನ್ಯಾಸದ ಫ್ಯೂಲ್ ಟ್ಯಾಂಕ್ ಪರಿಣಾಮವಾಗಿ 33 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೊರೇಜ್ ಸೌಲಭ್ಯ ದೊರೆಯಲಿದೆ.
ಹಾಗೆಯೇ ಹೊಸ ಸ್ಕೂಟರ್ ನಲ್ಲಿ ಟಿವಿಎಸ್ ಕಂಪನಿಯು ಬ್ಲ್ಯೂಟೂಥ್ ಕನೆಕ್ಟಿವಿಟಿಯ ಡಿಜಿಟಲ್ ಡಿಸ್ ಪ್ಲೇ ನೀಡಿದ್ದು, ಇದರಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಕಾಲ್ ಅಲರ್ಟ್ ಮತ್ತು ವಾಯ್ಸ್ ಅಸಿಸ್ಟ್ ಸೌಲಭ್ಯವಿದೆ. ಜೊತೆಗೆ ಹೊಸ ಸ್ಕೂಟರಿನಲ್ಲಿ ಇದೀಗ ಆಟೋಮ್ಯಾಟಿಕ್ ಇಂಡಿಕೇಟರ್ ಟರ್ನ್ ಆಫ್ ಸೌಲಭ್ಯವಿದ್ದು, ಇದು ತಪ್ಪು ಟರ್ನ್ ಇಂಡಿಕೇಟರ್ ನಿಂದಾಗುವ ಅಪಘಾತಗಳನ್ನು ತಪ್ಪಿಸಲು ನೆರವಾಗಲಿದೆ. ಸಾಮಾನ್ಯವಾಗಿ ಕೆಲವು ವಾಹನ ಸವಾರರು ಟರ್ನ್ ಇಂಡಿಕೇಟರ್ ಬಳಸಿದ ನಂತರ ಆಫ್ ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಹಿಂಬದಿಯಲ್ಲಿರುವ ವಾಹನ ಸವಾರರಿಗೆ ತಪ್ಪು ಮಾರ್ಗಸೂಚಿನಿಂದಾಗಿ ಅಪಘಾತಗಳು ಸಂಭವಿಸುತ್ತವೆ. ಇದನ್ನು ತಡೆಯಲು ಟಿವಿಎಸ್ ಕಂಪನಿಯು ಹೊಸ ಸ್ಕೂಟರಿನಲ್ಲಿ ಟರ್ನ್ ಇಂಡಿಕೇಟರ್ ಬಳಸಿದ ನಂತರ 20 ಸೇಕೆಂಡು ಗಳಲ್ಲಿ ಆಟೋಮ್ಯಾಟಿಕ್ ಆಗಿ ಆಫ್ ಆಗುವಂತಹ ಸೌಲಭ್ಯ ನೀಡಿದೆ.
ಇನ್ನುಳಿದಂತೆ ಹೊಸ ಜೂಪಿಟರ್ 110 ಸ್ಕೂಟರಿನಲ್ಲಿ ಎರಡೂ ಬದಿಯಲ್ಲೂ 12 ಇಂಚಿನ 90/90 ಟೈರ್ ನೊಂದಿಗೆ 5.1 ಲೀಟರ್ ಫ್ಯೂಲ್ ಟ್ಯಾಂಕ್, ಸ್ಮಾರ್ಟ್ ಅಂಡ್ ಸ್ಟಾಪ್ ಟೆಕ್ನಾಲಜಿ ನೀಡಲಾಗಿದ್ದು, ಸುರಕ್ಷತೆಗಾಗಿ ಮುಂಭಾಗದ ಚಕ್ರದಲ್ಲಿ 220 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ 130 ಎಂಎಂ ಡ್ರಮ್ ಬ್ರೇಕ್ ನೀಡಲಾಗಿದೆ.