Ola Electric Bike: ಅಗಸ್ಟ್ 15ಕ್ಕೆ ಅನಾವರಣಗೊಳ್ಳಲಿದೆ ಬಹುನೀರಿಕ್ಷಿತ ಓಲಾ ಎಲೆಕ್ಟ್ರಿಕ್ ಬೈಕ್
ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಬಹುನೀರಿಕ್ಷಿತ ಇವಿ ಬೈಕ್ ಆವೃತ್ತಿಯ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಅಗಸ್ಟ್ 15ಕ್ಕೆ ಹೊಸ ಇವಿ ಬೈಕ್ ಅಧಿಕೃತವಾಗಿ ಅನಾವರಣಗೊಳ್ಳಲಿದೆ.
ದೇಶದ ಅಗ್ರ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಉತ್ಪಾದನಾ ಕಂಪನಿಯಾಗಿರುವ ಓಲಾ ಎಲೆಕ್ಟ್ರಿಕ್ ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಇವಿ ಬೈಕ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಹೊಸ ಇವಿ ಬೈಕ್ ಮಾದರಿಯ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.
ಹೊಸ ಎಲೆಕ್ಟ್ರಿಕ್ ಕಮ್ಯೂಟ್ ಬೈಕ್ ಕುರಿತಾಗಿ ಕಂಪನಿಯ ಸಿಇಓ ಭಾವೀಶ್ ಅಗರ್ವಾಲ್ ಈಗಾಗಲೇ ಟೀಸರ್ ವಿಡಿಯೋ ಜೊತೆಗೆ ಟೆಸ್ಟ್ ರೈಡ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದು ಗ್ರಾಹಕರ ಬೇಡಿಕೆ ಆಧರಿಸಿ ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಹೊಸ ಇವಿ ಮಾದರಿಯನ್ನು ಕಂಪನಿಯು 150 ಸಿಸಿ ವಿಭಾಗದ ಬೈಕ್ ಮಾದರಿಗಳ ವಿಭಾಗವನ್ನು ಗುರಿಯಾಗಿಸಿ ಅಭಿವೃದ್ದಿಪಡಿಸಿದ್ದು, ಇದು ಆಕರ್ಷಕ ಬೆಲೆ ಜೊತೆಗೆ ಮೈಲೇಜ್ ನಲ್ಲೂ ಗಮನಸೆಳೆಯಲಿದೆ.
ಹೊಸ ಇವಿ ಬೈಕಿನ ಟೀಸರ್ ಹೊರತಾಗಿ ಓಲಾ ಕಂಪನಿಯು ತಾಂತ್ರಿಕ ಅಂಶಗಳ ಮಾಹಿತಿಯನ್ನು ಬಿಟ್ಟುಕೊಟ್ಟಿವಾದರೂ ಪ್ರತಿಸ್ಪರ್ಧಿಗಳಿಂತಲೂ ವಿಶೇಷ ತಾಂತ್ರಿಕ ಅಂಶಗಳ ಜೋಡಣೆಯನ್ನು ಖಾತ್ರಿಪಡಿಸಿದೆ. ಹೊಸ ಇವಿ ಬೈಕ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಮುಂಭಾಗದಲ್ಲಿ ಟೆಲಿಸ್ಕೋಫಿಕ್ ಸಸ್ಷೆಂಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಂಷನ್ ನೀಡಲಾಗಿದೆ. ಹಾಗೆಯೇ ಹೊಸ ಬೈಕಿನಲ್ಲಿ ಡಿಜಿಟಲ್ ಇನ್ಸ್ಟುಮೆಂಟ್ ಕ್ಲಸ್ಟರ್, ಆಲ್ ಎಲ್ಇಡಿ ಲೈಟಿಂಗ್ಸ್ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ.
ಇದನ್ನೂ ಓದಿ: ಬಿಎಂಡಬ್ಲ್ಯು ಐಷಾರಾಮಿ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ
ಓಲಾ ಕಂಪನಿಯು ಹೊಸ ಇವಿ ಬೈಕಿನಲ್ಲಿ ಎಸ್1 ಸರಣಿ ಸ್ಕೂಟರಿನಲ್ಲಿರುವಂತೆ 4 ಕೆವಿಹೆಚ್ ಅಥವಾ ಹೆಚ್ಚಿನ ಮೈಲೇಜ್ ಗಾಗಿ 6 ಕೆವಿಹೆಚ್ ಬ್ಯಾಟರಿ ಪ್ಯಾಕ್ ಗಳ ಆಯ್ಕೆ ನೀಡಬಹುದಾಗಿದ್ದು, ಇದು ಪ್ರತಿ ಚಾರ್ಜ್ ಗೆ 180 ಕಿ.ಮೀ ನಿಂದ ಟಾಪ್ ಎಂಡ್ ಮಾದರಿಯು 280 ಕಿ.ಮೀ ಮೈಲೇಜ್ ನೀಡಬಹುದಾಗಿದೆ. ಈ ಮೂಲಕ ಇದು ವಿವಿಧ ಗ್ರಾಹಕರಿಗಾಗಿ ಹಲವು ವೆರಿಯೆಂಟ್ ಗಳನ್ನು ಹೊಂದಿರಲಿದ್ದು, ಬೆಲೆಗೆ ಅನುಗುಣವಾಗಿ ಫೀಚರ್ಸ್ ಗಳು ಲಭ್ಯವಿರಲಿವೆ.
ಈ ಮೂಲಕ ಹೊಸ ಓಲಾ ಇವಿ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.60 ಲಕ್ಷದಿಂದ ರೂ. 2 ಲಕ್ಷ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದ್ದು, ಇದು 150 ಸಿಸಿ ಮತ್ತು 160 ಸಿಸಿ ವಿಭಾಗದಲ್ಲಿನ ಬೈಕ್ ಖರೀದಿದಾರರನ್ನು ಸೆಳೆಯುವ ಯೋಜನೆಯಲ್ಲಿದೆ.